ಲಕ್ಷ ಕ್ವಿಂಟಲ್ ಬೀಜೋತ್ಪಾದನೆ ಗುರಿ
ಕನ್ನಡಪ್ರಭ ವಾರ್ತೆ , ರಾಯಚೂರು , ಮೇ 25
ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಪ್ರಸಕ್ತ 2013-14 ನೇ ಸಾಲಿನಲ್ಲಿ ನೇರ ಬೀಜೋತ್ಪಾದನೆಯಿಂದ 40 ಸಾವಿರ ಹಾಗೂ ಬೀಜ ಗ್ರಾಮ ಯೋಜನೆಯಡಿ 60 ಸಾವಿರ ಸೇರಿ ಒಟ್ಟು ಒಂದು ಲಕ್ಷ ಕ್ವಿಂಟಲ್ ಬೀಜೋತ್ಪಾದನೆ ಮಾಡಲು ಗುರಿ ಹೊಂದಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವ ಎ. ನಾಗನಗೌಡ ತಿಳಿಸಿದರು.
ನಗರದ ಕೃಷಿ ವಿಶ್ವವಿದ್ಯಾಲಯದಿಂದ ಶನಿವಾರ ಆಯೋಜಿಸಲಾಗಿದ್ದ ಮುಂಗಾರು ಬೀಜ ದಿನೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನೂಲಿನಂತೆ ಬಟ್ಟೆ ಬೀಜದಂತೆ ಬೆಳೆ ಎಂಬ ಉಕ್ತಿಯಂತೆ ರೈತರು ಗುಣಮಟ್ಟದ ಮೂಲ ಬೀಜವನ್ನು ಬಿತ್ತನೆ ಮಾಡುವ ಮೂಲಕ ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸಬಲರಾಗುವ ಜೊತೆಗೆ ಇತರೆ ರೈತರಿಗೆ ಮಾದರಿಯಾಗಬೇಕು. ದಿನೋತ್ಸವದಲ್ಲಿ ಕೃಷಿ ವಿಜ್ಞಾನಿಗಳು ವಿವಿಧ ತಳಿಗಳು, ಬೇಸಾಯ ಕ್ರಮ ಸೇರಿದಂತೆ ಕೃಷಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ನೀಡಲಿದ್ದು, ರೈತರು ಕಾರ್ಯಕ್ರಮ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ರಿಯಾಯಿತಿ ದರದಲ್ಲಿ ರೈತರಿಗೆ ಪೂರೈಕೆ: ಕೃಷಿ ವಿವಿಯ ವಿಶೇಷ ಅಧಿಕಾರಿ (ಬೀಜ) ಡಾ. ಬಸವೇಗೌಡರ ಪರಿಶ್ರಮದಿಂದ ಬೀಜ ದಿನೋತ್ಸವ ಕಾರ್ಯಕ್ರಮ ಕಳೆದ ನಾಲ್ಕೈದು ವರ್ಷದಿಂದ ಪ್ರತಿವರ್ಷ ಮುಂಗಾರು ಮತ್ತು ಹಿಂಗಾರು ಬಿತ್ತನೆ ಪೂರ್ವ ಹಮ್ಮಿಕೊಳ್ಳಲಾಗುತ್ತಿದೆ. ಗುಣಮಟ್ಟದ ಬಿತ್ತನೆ ಬೀಜವು ರಿಯಾಯಿತಿ ದರದಲ್ಲಿ ರೈತರಿಗೆ ಪೂರೈಕೆ ಮಾಡುವುದು ಇದರ ಉದ್ದೇಶವಾಗಿದೆ ಮತ್ತು ಬೀಜ ಘಟಕವನ್ನು ಈಶಾನ್ಯ ಕರ್ನಾಟಕ ಭಾಗದಲ್ಲಿ ಅತ್ಯುತ್ತಮ ಬೀಜ ಉತ್ಪಾದನೆ, ಸಂಶೋಧನೆ ಹಾಗೂ ತರಬೇತಿ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ ಎಂದರು.
ಶೇ.60 ರಷ್ಟು ಪೂರೈಕೆ: ಕೃಷಿ ವಿವಿಯ ಸಹಾಯಕ ನಿರ್ದೇಶಕ ಹಾಗೂ ಬೀಜೋತ್ಪಾದನಾಧಿಕಾರಿ ಡಾ.ಬಿ.ಬಿ.ಬಿರಾದಾರ ಮಾತನಾಡಿ, ರಾಜ್ಯಾದ್ಯಂತ ಕರ್ನಾಟಕ ಬೀಜ ನಿಗಮದಿಂದ ರೈತ ಸಂಪರ್ಕ ಕೇಂದ್ರಗಳ ಮುಖಾಂತರ ಸುಮಾರು 4 ಲಕ್ಷ ಕ್ವಿಂಟಲ್ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಶೇ.60 ರಷ್ಟು ಪೂರೈಕೆ ಮಾಡಲಾಗುತ್ತಿದೆ. ಇತ್ತೀಚಿಗೆ ಸರ್ಕಾರಿ ಸ್ವಾಮ್ಯ ಮತ್ತು ಖಾಸಗಿಯಾಗಿ ಬೀಜೋತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ರೈತರು ಬಿತ್ತನೆ ಹಾಂಗಾಮಿಗೆ ಮುನ್ನ ಬೀಜ, ರಸಗೊಬ್ಬರ ಸೇರಿದಂತೆ ಕೃಷಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಪಡೆದು ಬಿತ್ತನೆ ಮಾಡುವುದು ಅವಶ್ಯವಾಗಿದೆ. ರೈತರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಗುಣ ಮಟ್ಟದ ಬೀಜ ಮಾರಾಟ ಮಾಡಲಾಗುತ್ತಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಂಡು ತಾಂತ್ರಿಕತೆ ಅಳವಡಿಸಿಕೊಂಡು ಉತ್ತಮ ಬೀಜ ಬಿತ್ತನೆ ಮಾಡುವ ಮೂಲಕ ಉತ್ತಮ ಬೆಳೆ ಬೆಳೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿಯ ಸಹ ಸಂಶೋಧಕ ಡಾ. ಅಬ್ಬಾಸ್ ಹುಸೇನ, ದಡೇಸುಗೂರು ಡಿಎಪಿಪಿ ಅಧಿಕಾರಿ ಡಾ.ರೂಪಾ ಉಪಸ್ಥಿತರಿದ್ದರು. ವಿಜಯಕುಮಾರ ಸ್ವಾಗತಿಸಿದರು. ರಾಕೇಶ ವಂದಿಸಿದರು. ಎಂ.ಆರ್.ಪಮ್ಮಾರ ಕಾರ್ಯಕ್ರಮ ನಿರೂಪಿಸಿದರು.
ಇದೇ ಸಂದರ್ಭದಲ್ಲಿ 2012 ಮುಂಗಾರು ಹಂಗಾಮಿನಲ್ಲಿ ಅಧಿಕ ಇಳುವರಿ ಮತ್ತು ಗುಣಮಟ್ಟದ ಬೀಜೋತ್ಪಾದನೆ ಮಾಡಿದ ಮರ್ಚೇಡ್ ಗ್ರಾಮದ ರೈತ ಗೌರೀಶ್ ಕಟ್ಟೆಪ್ಪ ಕುಂಬಾರ್ ಅವರನ್ನು ಉತ್ತಮ ಬೀಜ ಬೆಳೆಗಾರ ಎಂದು ಗೌರವಿಸಿ ಸನ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

