ರಾಯಚೂರು

ಕಾರ್ಮಿಕರ ಹಿತರಕ್ಷಣೆ ಜೆಡಿಎಸ್‌ನಿಂದ ಸಾಧ್ಯ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 26
ದೇಶದ ಪ್ರಗತಿಯಲ್ಲಿ ರೈತ ಕಾರ್ಮಿಕರು ಹಾಗೂ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಇಂಥ ಕಾರ್ಮಿಕರ ಹಿತ ಕಾಯುವಲ್ಲಿ ಕಳೆದ ಐದು ವರ್ಷ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜೆಡಿಎಸ್‌ನಿಂದ ಮಾತ್ರ ಕಾರ್ಮಿಕರ ಹಿತರಕ್ಷಣೆ ಸಾಧ್ಯ ಎಂದು ಪಕ್ಷದ ಮಾಜಿ ಶಾಸಕ ರಾಜಣ್ಣ ಹೇಳಿದರು.
ನಗರದ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ಜೆಡಿಎಸ್ ಕಾರ್ಮಿಕ ಘಟಕದಿಂದ ಆಯೋಜಿಸಿದ್ದ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಹಗಲಿರುಳು ದುಡಿಯುತ್ತಿರುವ ಕೃಷಿ ಕಾರ್ಮಿಕರು ದೇಶದ ಜನಸಂಖ್ಯೆಯ ಬೇಡಿಕೆಗೆ ಅನುಗುಣವಾಗಿ ಆಹಾರ ಉತ್ಪಾದಿಸುತ್ತಿದ್ದಾರೆ. ಆದರೆ ಅವರಿಗೆ ಒದಗುವ ಸಂಕಷ್ಟ ನಿವಾರಣೆಗೆ ಅಧಿಕಾರಸ್ಥರು ಮುಂದಾಗುತ್ತಿಲ್ಲ ಎಂದು ಟೀಕಿಸಿದರು.
ಅನೇಕ ಸಮಸ್ಯೆ ಜೀವಂತ: ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಆದರೆ ಅವರಿಗೆ ಸೂಕ್ತ ಸವಲತ್ತು ಒದಗಿಸುತ್ತಿಲ್ಲ. ಕಾರ್ಮಿಕರಲ್ಲಿ ಒಗ್ಗಟ್ಟಿನ ಕೊರತೆಯಿಂದಲೇ ಅನೇಕ ಸಮಸ್ಯೆಗಳು ಹತ್ತಾರು ವರ್ಷಗಳ ನಂತರವೂ ಜೀವಂತವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಮಿಕರು ಒಗ್ಗಟ್ಟಿನಿಂದ ಹೋರಾಟದಲ್ಲಿ ಮುನ್ನಡೆದರೆ ಬೇಡಿಕೆಗಳ ಈಡೇರಿಕೆ ಸಾಧ್ಯ ಎಂದರು.
ರಾಜ್ಯದಲ್ಲಿ ಈ ಹಿಂದೆ ಅನೇಕ ಬೃಹತ್ ಕೈಗಾರಿಕೆಗಳಿದ್ದು, ಅವುಗಳ ನಂತರದಲ್ಲಿ ಕಾರ್ಮಿಕರ ಪ್ರಾಮಾಣಿಕ ಕಾರ್ಯ ನಿರ್ವಹಣೆಯ ಕೊರತೆಯಿಂದ ಮುಚ್ಚಿವೆ. ಅಷ್ಟೇ ಅಲ್ಲ ಕಾರ್ಮಿಕರನ್ನು ಸಂಸ್ಥೆಗಳ ಆಡಳಿತಗಳು ಕಾಣುವ ರೀತಿಯಿಂದ ಆಯಾ ಕಂಪನಿಗಳಿಗೆ ತೀವ್ರ ಹಿನ್ನಡೆಯಾಗಿದ್ದಿದೆ ಎಂದು ಹೇಳಿದರು.
ಭರವಸೆ ಹುಸಿಯಾಯ್ತು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಫಲವತ್ತಾದ ರೈತರ ಜಮೀನು ಸ್ವಾಧೀನಪಡಿಸಿಕೊಂಡು 2 ಲಕ್ಷ ಎಕರೆ ಜಮೀನು ಕೈಗಾರಿಕೆಗಳಿಗೆ ಹಸ್ತಾಂತರಿಸಲಾಗಿದೆ. ಆ ಮೂಲಕ 10 ಲಕ್ಷ ಜನರಿಗೆ ಉದ್ಯೋಗ ದೊರಕಿಸುವ ಭರವಸೆ ನೀಡಲಾಗಿತ್ತು. ಆದರೆ ಜಮೀನು ಹಸ್ತಾಂತರಿಸಿದ್ದಷ್ಟೇ ಸಾಧನೆಯಾಯಿತು. ಕೇವಲ 8 ಸಾವಿರ ಜನರಿಗೆ ಉದ್ಯೋಗ ದೊರೆಯಿತು ಎಂದು ಟೀಕಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಮತ್ತು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಕೈಗೊಂಡ ತಪ್ಪು ನಿರ್ಧಾರಗಳಿಂದಾಗಿ ಕಳೆದ ಐದು ವರ್ಷಗಳಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕರ ಫಲವತ್ತಾದ ಜಮೀನು ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ಒತ್ತಾಯಪೂರ್ವಕವಾಗಿ ಕಿತ್ತುಕೊಂಡಿದ್ದರಿಂದ ರೈತರು ಬೀದಿಗೆ ಬಂದಿದ್ದಾರೆಂದು ಆರೋಪಿಸಿದರು.
ಯಾವ ಪಕ್ಷವೂ ಬಡವರ ಪರವಾಗಿಲ್ಲ: ಈ ಹಿನ್ನೆಲೆಯಲ್ಲಿ ದೇಶದಲ್ಲಿ ರೈತರ ಮತ್ತು ಕಾರ್ಮಿಕರ ಹಿತ ಕಾಯುವುದು ಕೇವಲ ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಬೇರಾವ ಪಕ್ಷಗಳೂ ಬಡವರ ಪರವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್, ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಶ್ರೀರಾಮಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಕಾರ್ಯಾಧ್ಯಕ್ಷ ಯುಸೂಫ್ ಖಾನ್, ಶಿವಶಂಕರ್, ವಿರೂಪಾಕ್ಷಿ ಸೇರಿದಂತೆ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಕಾರ್ಮಿಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ನೂತನ ಶಾಸಕ ಡಾ. ಶಿವರಾಜ್ ಪಾಟೀಲ್, ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು ಮತ್ತಿತರರನ್ನು ಪಕ್ಷದ ಕಾರ್ಮಿಕ ಘಟಕದಿಂದ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.