'ಖಾತ್ರಿ' ಕೂಲಿ ಪಾವತಿಗೆ ಆಗ್ರಹಿಸಿ ಧರಣಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮೇ 29
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ಕೂಲಿ ಕಾರ್ಮಿಕರಿಗೆ ಜಾಬ್ ಕಾರ್ಡ್ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಗ್ರಾಮೀಣ ಕೂಲಿಕಾರ ಕಾರ್ಮಿಕರ ಸಂಘ(ಗ್ರಾಕೂಸ್) ನೇತೃತ್ವದಲ್ಲಿ ಕೂಲಿಕಾರ್ಮಿಕರು ಧರಣಿ ನಡೆಸಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿ ತಾಪಂ ಇಒ ಅವರಿಗೆ ಮನವಿ ಸಲ್ಲಿಸಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿಕಾರ್ಮಿಕರಿಗೆ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಜಾಬ್ ಕಾರ್ಡ್ ಸಮರ್ಪಕವಾಗಿ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.
ಪಿಡಿಒಗಳ ಅಲಭ್ಯತೆ: ಕೂಲಿ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಿಬ್ಬಂದಿಯಿಂದ ಸೂಕ್ತ ಸಹಕಾರ ದೊರೆಯುತ್ತಿಲ್ಲ. ಗ್ರಾಪಂ ಪಿಡಿಒಗಳು ಕೂಲಿಕಾರ್ಮಿಕರಿಗೆ ಲಭ್ಯವಾಗುತ್ತಿಲ್ಲ. ಅದರಿಂದಾಗಿ ಕೂಲಿಕಾರ್ಮಿಕರಿಗೆ ಸರ್ಮಪಕವಾಗಿ ಕೂಲಿ ಹಣ ಪಾವತಿಯಾಗುತ್ತಿಲ್ಲ ಎಂದು ಧರಣಿ ನಿರತರು ದೂರಿದರು.
ಜಾಬ್ ಕಾರ್ಡ್ ಹೊಂದಿದ ಕೂಲಿ ಕಾರ್ಮಿಕರಿಗೆ ಆಡಳಿತ ಕೆಲಸ ಕೊಡದೇ ನಿರುದ್ಯೋಗ ಭತ್ಯೆಯನ್ನೂ ಸರಿಯಾಗಿ ವಿತರಿಸುತ್ತಿಲ್ಲ. ಇದರಿಂದಾಗಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಮಾನವಿ ತಾಲೂಕಿನ 13 ಗ್ರಾಪಂ ಗಳಲ್ಲಿ ಗ್ರಾಮೀಣ ಕೂಲಿಕಾರ್ಮಿಕರ ಸಂಘಟನೆಯಿಂದ ಕೆಲಸಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.
ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿದರೂ ಕಳೆದ ಎರಡು ಮೂರು ತಿಂಗಳಿಂದ ಕೆಲಸಕ್ಕೆ ಅರ್ಜಿ ಸಲ್ಲಿಸಿದಂಥ ಕಾರ್ಮಿಕರಿಗೆ ಕೆಲಸವನ್ನೇ ಅಧಿಕಾರಿಗಳು ನೀಡಿಲ್ಲ. ಇದರಿಂದ ಉದ್ಯೋಗ ಖಾತ್ರಿ ಯೋಜನೆಯ ಆಶಯಕ್ಕೆ ಹಿನ್ನಡೆಯಾಗಿದೆ ಎಂದು ಟೀಕಿಸಿದರು.
ಎರಡು ತಿಂಗಳಿಂದ ಕೆಲಸ ನೀಡಿಲ್ಲ: ಉದ್ಯೋಗ ಖಾತ್ರಿ ಯೋಜನೆಯಡಿ ರೈತರು, ಕೃಷಿ ಕೂಲಿಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕ ಹಾಗೂ ಲಿಖಿತ ರೂಪದಲ್ಲಿ ದೂರಿತ್ತರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ಎರಡು ತಿಂಗಳಿನಿಂದ ವಿವಿಧ ಚುನಾವಣೆಗಳಲ್ಲಿ ಅಧಿಕಾರಿಗಳು ನಿರತರಾಗಿದ್ದು, ಕೂಲಿಕಾರ್ಮಿಕರಿಗೆ ಉದ್ಯೋಗ ನೀಡಿಕೆಯನ್ನೇ ಮರೆತಿದ್ದಾರೆಂದು ಆರೋಪಿಸಿದರು.
ಈ ಮಧ್ಯೆ ಸರ್ಕಾರದ ಆದೇಶದಂತೆ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡುವ ಕೂಲಿಕಾರ್ಮಿಕರು ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆಯುವಂತೆ ಸೂಚಿಸಲಾಗಿದೆ. ಹೊಸದಾಗಿ ಜಾರಿಗೆ ತಂದಿರುವ ಈ ವ್ಯವಸ್ಥೆಯಿಂದಾಗಿ ಕೂಲಿಕಾರ್ಮಿಕರು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆಂದು ದೂರಿದರು.
ಪಿಡಿಒಗಳಿಗೆ ಹುಡುಕಾಟ: ಕಳೆದ 15 ದಿನಗಳಿಂದ ಬ್ಯಾಂಕ್ ಖಾತೆ ತೆರೆಯಲು ಕಾರ್ಮಿಕರು ಪರದಾಡುತ್ತಿದ್ದು, ಖಾತೆ ತೆರೆದವರು ಆ ಬಗ್ಗೆ ಮಾಹಿತಿ ನೀಡಲು ಗ್ರಾಪಂ.ಗಳಿಗೆ ತೆರಳಿದರೆ ಅಲ್ಲಿ ಪಿಡಿಒಗಳು ಲಭ್ಯವಾಗುತ್ತಿಲ್ಲ. ದೂರವಾಣಿ ಕರೆಗೂ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗ್ರಾಪಂ ಮಟ್ಟದಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನೇಕರಿಗೆ ಉದ್ಯೋಗ ಖಾತ್ರಿ ಯೋಜನೆ ಅಡಿ ಉದ್ಯೋಗ, ನಿರುದ್ಯೋಗ ಭತ್ಯೆ, ಕೂಲಿ ಹಣದ ಬಾಕಿ ಪಾವತಿಯಾಗುತ್ತಿಲ್ಲ. ಕಾರಣ ಕೂಡಲೇ ಈ ನಿಟ್ಟಿನಲ್ಲಿ ಗಮನಹರಿಸಿ ಸಮಸ್ಯೆ ಪರಿಹರಿಸುವಂತೆ ಹೋರಾಟಗಾರರು ಆಗ್ರಹಿಸಿದರು.
ಗ್ರಾಕೂಸ್ ಸಂಘಟನೆಯ ಲಕ್ಷ್ಮಿ, ನರಸರೆಡ್ಡಿ ಬಾಯಿದೊಡ್ಡಿ, ಈರಣ್ಣ, ಗುರುರಾಜ್, ದೊಡ್ಡ ನರಸರೆಡ್ಡಿ, ಅಂಜನಾ, ಬಸವರಾಜ್ ಸೇರಿದಂತೆ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

