ರಾಯಚೂರು

ವಿದ್ಯಾರ್ಥಿಗೆ ವಿಜ್ಞಾನ ಕ್ಷೇತ್ರದ ಆಸಕ್ತಿ ಮೂಡಿಸಿ: ಲಲಿತಮ್ಮ

Published On :

ಕನ್ನಡಪ್ರಭವಾರ್ತೆ ರಾಯಚೂರು ನ. 7
ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಮಹತ್ವದ ಪ್ರಬಂಧ ಮಂಡಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ವಿಜ್ಞಾನ ಕ್ಷೇತ್ರದ ಬಗ್ಗೆ ಹೆಚ್ಚು ಆಸಕ್ತಿ ಮೂಡುವಂತೆ ಮಾಡಬೇಕೆಂದು ಜಿಪಂ ಅಧ್ಯಕ್ಷೆ ಲಲಿತಮ್ಮ ಲಿಂಗರಾಜು ಕರೆ ನೀಡಿದರು.
ನಗರದ ಎಲ್‌ವಿಡಿ ಕಾಲೇಜು ಸಭಾಂಗಣದಲ್ಲಿ ಮಾತೃವೇದಿಕೆ, ಸ್ವದೇಶಿ ವಿಜ್ಞಾನ ಆಂದೋಲನ ಕರ್ನಾಟಕ ಹಾಗೂ ತಾರಾನಾಥ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ 6ನೇ ರಾಷ್ಟ್ರೀಯ ಮಹಿಳಾ ವಿಜ್ಞಾನ ಸಮ್ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಸಾಹಿತ್ಯ, ಸಂಸ್ಕೃತಿ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಜೊತೆಗೆ ವಿಶ್ವದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಖ್ಯಾತಿ ಹೊಂದಿದ್ದಾರೆ. ಅದರಂತೆ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಸಾಧನೆ ಮಾಡುವಂತಾಗಬೇಕೆಂದು ಕಿವಿ ಮಾತು ಹೇಳಿದರು.
ಹೆಮ್ಮೆಯ ಸಂಗತಿ: ಸಿ.ವಿ. ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರ ಪಡೆದ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಬೆಂಗಳೂರು ಪ್ರೊಜೆಕ್ಟ್ ಡೈರೆಕ್ಟರ್ ಡಾ.ಎನ್. ವಾಲಾರಮತಿ ಮಾತನಾಡಿ, ಭಾರತ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುತ್ತಿದ್ದು, ದೇಶವು ಇಸ್ರೋ ಸಹಕಾರದಿಂದ ಮಂಗಳ ಗ್ರಹದ ಸಂಶೋಧನೆಗೆ ಯಶಸ್ವಿ ರಾಕೆಟ್ ಉಡಾವಣೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಅನೇಕ ರಂಗಗಳಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದು, ವೃತ್ತಿ ರಂಗದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುವಂತೆ ಎಲ್ಲ ರಂಗಗಳಲ್ಲಿಯೂ ಸಮಾನವಾಗಿ ಕಾಣುವಂತಾಗಬೇಕು. ಇದರಿಂದ ದೇಶದ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಪುರಸ್ಕಾರ: ಸಮ್ಮೇಳನದಲ್ಲಿ ಮೇರಿಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರ ಪಡೆದ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ ಎಚ್.ಎಸ್. ಸಾವಿತ್ರಿ, ಸ್ವದೇಶಿ ವಿಜ್ಞಾನ ಆಂದೋಲನ ಉಪಾಧ್ಯಕ್ಷೆ ಡಾ.ಕೆ.ಎಸ್. ಪುಷ್ಪಲತಾ, ವಿಜ್ಞಾನಿ ಮೀರಾ ಕೌಶಲ್, ಡಾ. ವಿಜಯಲಕ್ಷ್ಮೀ ದೇಶಮಾನೆ, ಪ್ರೊ. ವೈದೇಹಿ ಗಣೇಶ, ಡಾ. ನಿರ್ಮಲಾ ಕೆಳಮನಿ, ಡಾ. ಜಾಗೃತಿ ದೇಶಮಾನ್ಯ, ರಾಜೇಶ್ವರಿ ಪತ್ತಾರ, ಡಾ.ವೈ.ಎಸ್. ಗಾಯತ್ರಿ, ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಬೆಂಗಳೂರು ಪ್ರೊಜೆಕ್ಟ್ ಡೈರೆಕ್ಟರ್ ಡಾ.ಎನ್. ವಾಲಾರಮತಿ ಅವರಿಗೆ ಸಿ.ವಿ. ರಾಮನ್ ಮಹಿಳಾ ವಿಜ್ಞಾನ ಪುರಸ್ಕಾರ ಹಾಗೂ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ.ಎಚ್.ಎಸ್. ಸಾವಿತ್ರಿ ಮೇರಿಕ್ಯೂರಿ ಮಹಿಳಾ ವಿಜ್ಞಾನ ಪುರಸ್ಕಾರ ನೀಡಿ ಗೌರವಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.