ರಾಯಚೂರು

ಸಿಎಂ ಭೇಟಿ ಹಿನ್ನೆಲೆ: ಇಂದು ಸಭೆ

Published On :

ರಾಯಚೂರು: ಜಿಲ್ಲೆಗೆ 16ರಂದು ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನೆಲೆ 8ರಂದು ಪೂರ್ವಭಾವಿ ಸಿದ್ಧತೆ ಸಭೆ ಕರೆಯಲಾಗಿದೆ. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನ.8 ರಂದು ಮಧ್ಯಾಹ್ನ 12ಕ್ಕೆ ಸಭೆ ಕರೆದಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಗೆ ಹಾಜರಾಗುವಂತೆ ಜಿಲ್ಲಾಡಳಿತ ಸೂಚಿಸಿದೆ.

ಉಚಿತ ತರಬೇತಿ: ಅರ್ಜಿ ಆಹ್ವಾನ
ರಾಯಚೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಿಂದುಳಿದ ವರ್ಗಗಳ ಅರ್ಹ ನಿರುದ್ಯೋಗಿ ಮಹಿಳಾ- ಪುರುಷ ಅಭ್ಯರ್ಥಿಗಳಿಗೆ ಮೈಸೂರಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆಯಲ್ಲಿ ವಿವಿಧ ಐದು ವಿಷಯಗಳ ಮೇಲೆ ಉಚಿತ ತರಬೇತಿ ನೀಡಲಾಗುವುದು.  ಆಸಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು ಇವರಿಂದ ಅರ್ಜಿ ಪಡೆದು 15 ರೊಳಗೆ ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.

ಬುದ್ಧಿವಾದ ಹೇಳಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಗುಂಜಳ್ಳಿಯಲ್ಲಿ ಬುದ್ದಿಹೇಳಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಮೀದಾ ಬೇಗಂ (14) ಮೃತಪಟ್ಟವಳು.ಅಡುಗೆ ಮಾಡುವ ವಿಷಯಕ್ಕೆ ಸಂಬಂಧಿಸಿ ಮನೆಯವರು ಬುದ್ಧಿಮಾತು ಹೇಳಿದ್ದರಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿದ್ದಾಳೆ. ತುರುವಿಹಾಳ ಠಾಣೆಯಲ್ಲಿ ದೂರು ದಾಖಲಾಗಿದೆ.

ಮನೋಜ್ ಭಾಂಡಗೆ ಭರ್ಜರಿ ಶತಕ
ಸಿಂಧನೂರು:  ನಗರದ ರುದ್ರಗೌಡ ಕ್ರಿಕೆಟ್ ಕ್ಲಬ್‌ನ ಯುವಪ್ರತಿಭೆ ಮನೋಜ್ ಭಾಂಡಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಕೆಎಸ್ಸಿಎ ವಲಯಮಟ್ಟದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಬೆಂಗಳೂರು ವಲಯ ತಂಡದ ವಿರುದ್ಧ ರಾಯಚೂರು ವಲಯ ತಂಡದ ಪರವಾಗಿ ಭರ್ಜರಿ ಶತಕ ಬಾರಿಸಿದ್ದಾರೆ. ತಂಡದ ಉಪನಾಯಕನಾಗಿ ಆಯ್ಕೆಯಾಗಿರುವ ಮನೋಜ್ ತಿವಾರಿ, ಬೆಂಗಳೂರು ವಲಯ ತಂಡ ವಿರುದ್ಧದ ಪಂದ್ಯದಲ್ಲಿ ಗುರುವಾರ ಉತ್ತಮ ಆಟ ಪ್ರದರ್ಶಿಸಿದರು. 18 ಬೌಂಡರಿ, 3 ಸಿಕ್ಸರ್ ಒಳಗೊಂಡ ಅಮೋಘ 130 ರನ್ ಗಳಿಸಿದರು. ಅಭಿನಂದನೆ:  ಶತಕವೀರ ಮನೋಜ್ ಭಾಂಡಗೆಗೆ ರುದ್ರಗೌಡ ಕ್ರಿಕೆಟ್ ಕ್ಲಬ್ ಗೌರವಾಧ್ಯಕ್ಷ ಎಸ್.ಶರಣೇಗೌಡ, ಅಧ್ಯಕ್ಷ ರಾಜಶೇಖರ ಪಾಟೀಲ್, ಸದಸ್ಯರು, ಸ್ನೇಹಿತರು ಅಭಿನಂದಿಸಿದ್ದಾರೆ.

ಸಮರ್ಪಕ ಪಡಿತರ ವಿತರಣೆ: ಸ್ಪಷ್ಟನೆ
ಸಿಂಧನೂರು:ನಗರದ ಲಕ್ಷ್ಮೀಕ್ಯಾಂಪಿನಲ್ಲಿರುವ ನ್ಯಾಯಬೆಲೆ ಅಂಗಡಿಯ ಮೂಲಕ ಆಹಾರ ಧಾನ್ಯಗಳನ್ನು ಪಡಿತರದಾರರಿಗೆ ಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂದು ಸಂಚಾಲಕ ಗೋಪಾಲರಾವ್ ಕುಲಕರ್ಣಿ ಸ್ಪಷ್ಟ ನೀಡಿದ್ದಾರೆ. ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ವಾರ್ಡ್ ನಂ.29, 30 ಹಾಗೂ 31ನೇ ವಾರ್ಡ್‌ಗಳಲ್ಲಿನ ಪಡಿತರದಾರರಿಗೆ ಪ್ರತಿ ತಿಂಗಳು ತಪ್ಪದೇ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ. ಆದರೆ ಕೆಲವರು ವಿನಾಕಾರಣ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಎಪಿಎಲ್ ಕಾರ್ಡ್‌ದಾರರಿಗೆ ಪಡಿತರ ಸಿಗುವುದಿಲ್ಲ. ಆದರೆ ಕೆಲ ಸರ್ಕಾರಿ ನೌಕರರ ಹೆಸರಿನಲ್ಲಿ ಕೆಲವರು ಆರೋಪಿಸಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದಾರೆ.

ಮೋದಿ ಕಾರ್ಯಕ್ರಮಕ್ಕೆ ಟಿಕೆಟ್ ಮಾರಾಟ
ಸಿಂಧನೂರು:  ತಾಲೂಕಿನ ಯಾಪಲಪರ್ವಿ ಗ್ರಾಮಕ್ಕೆ ಬಿಜೆಪಿ ಮುಖಂಡರು ಗುರುವಾರ ಭೇಟಿ ನೀಡಿ ಬೆಂಗಳೂರಿನಲ್ಲಿ  ನ.17ರಂದು ನಡೆಯುವ ಗುಜರಾತ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಭಾಷಣದ ಟಿಕೇಟ್ ಮಾರಾಟ ಮಾಡಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಿ.ಜೆ.ಪಿ. ಮುಖಂಡ ಕೊಲ್ಲಾ ಶೇಷಗಿರಿರಾವ್ ಮನವಿ ಮಾಡಿದರು.  ಬಿಜೆಪಿ ಮುಖಂಡರಾದ ಕೊಲ್ಲಾ ಶೇಷಗಿರಿರಾವ್, ಗ್ರಾಮೀಣ ಅಧ್ಯಕ್ಷರಾದ ದೇವೇಂದ್ರಪ್ಪ ಯಾಪಲಪರ್ವಿ, ನಗರ ಘಟಕದ ಅಧ್ಯಕ್ಷರಾದ ಮಧ್ವರಾಜ ಆಚಾರ್ಯ, ಜಿಲ್ಲಾ ಕಾರ್ಯದರ್ಶಿಯಾದ ಮಲ್ಲೇಶ್ವರರಾವ್.ಕೆ, ಎಸ್.ಟಿ. ಘಟಕದ ಅಧ್ಯಕ್ಷರಾದ ಅಂಬಣ್ಣ ನಾಯಕ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾದ ಟಿ.ಸುಬ್ಬಾರಾವ್, ಚೆನ್ನನಗೌಡ  ಇನ್ನಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.