ರಾಯಚೂರು

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ನಾಗರಿಕರ ಸಹಕಾರ ಅವಶ್ಯ

Published On :

ಕನ್ನಡಪ್ರಭ ವಾರ್ತೆ ,  ಮುದಗಲ್ ,  ನ. 9
ಮೊಹರಂ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆಗೆ ಕಂದಾಯ, ಪೋಲೀಸ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಗೆ ನಾಗರಿಕರ ಸಹಕಾರ ಅತ್ಯವಶ್ಯಕವಾಗಿದೆ ಎಂದು ಲಿಂಗಸ್ಗೂರು ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಯೋಗೇಶ ಹೇಳಿದರು.
ಮುದಗಲ್ ಠಾಣೆಯಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ,   ಮುದಗಲ್ ಮೊಹರಂ ಹಬ್ಬವು ಹಿಂದೂ - ಮುಸ್ಲಿಂ ಭಾವ್ಯಕ್ಯತೆಗೆ ಹೆಸರು ವಾಸಿಯಾಗಿರುವುದು ಹೆಮ್ಮೆಯ ಸಂಗತಿ. ನಾವು ತಾಲೂಕು ಆಡಳಿತ ಪರವಾಗಿ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಶಾಂತಿಗೆ ಭಂಗ ತರುವಂತಹರ ಮೇಲೆ ಕ್ರಮ ಕೈಕೊಳ್ಳಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಆದರೆ ಶಾಂತಿಗೆ ಭಂಗವಾಗದಂತೆ ಅಧಿಕಾರ ವರ್ಗ ಮತ್ತು ಪಟ್ಟಣದ ನಾಗರಿಕರ ಮುಖಂಡರು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದಕ್ಕಾಗಿ ಈ ಶಾಂತಿ ಸಭೆ ಕರೆಯಲಾಗಿದೆ ಎಂದರು.
ಅಧಿಕಾರಿಗಳ ಸಭೆ: ಲಿಂಗಸ್ಗೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕಿ ಅನಿತಾ ಹದ್ದಣ್ಣನವರ ಮಾತನಾಡಿ, ಈಗಾಗಲೇ ಪಪಂ, ಆರೋಗ್ಯ, ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯನ್ನು ಮಾಡಲಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಯಾವ ರೀತಿಯ ಕಾರ್ಯೋನ್ಮುಖರಾಗಬೇಕೆನ್ನುವ ನಿಟ್ಟಿನಲ್ಲಿ ಚರ್ಚಿಸಲಾಗಿದೆ. ಪೊಲೀಸ್ ಇಲಾಖೆಯವರು ನಿರ್ವಹಿಸುವ ಕಾರ್ಯಕ್ಕೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸ್ವಯಂ ಸೇವಕರಾಗಿ ಕಾರ್ವನಿರ್ವಹಿಸುವ ಮೂಲಕ ಶಾಂತಿ ಭಂಗಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.
ಸೌಹಾರ್ದತೆ: ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ. ಈಶ್ವರ ಸವಡಿ ಮಾತನಾಡಿ, ಯಾವುದೇ ಒಂದು ಪಟ್ಟಣ, ಗ್ರಾಮದಲ್ಲಿ ಜಾತ್ರೆ ನಡೆದರೆ ಅದು ಕೋಮು ಸೌಹಾರ್ದತೆಯಿಂದ ಕೂಡಿರುತ್ತದೆ. ಆದರೆ ಮುದಗಲ್ ಮೊಹರಂ ಲಕ್ಷಗಟ್ಟಲೇ ಜನ ಸೇರುವ ಹಬ್ಬವಾಗಿದ್ದರೂ, ಕೋಮು ಸೌಹಾರ್ದತೆಗೆ ಹೆಸರು ತಂದಿರುವುದು ಪಟ್ಟಣಕ್ಕೆ ಕಿರೀಟವಿಟ್ಟಂತೆ ಆಗಿದೆ. ಮೊಹರಂ ಹಬ್ಬದಲ್ಲಿ ಅಧಿಕಾರಿಗಳ ಕರ್ತವ್ಯ ನಿರ್ವಹಿಸಲಿ ಎನ್ನುವುದನ್ನು ಬಿಟ್ಟು ನಾಗರಿಕರು ತಮ್ಮ ಜವಾಬ್ದಾರಿಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿದರೆ ಅಧಿಕಾರಿಗಳ ಕೆಲಸವೇ ಶೂನ್ಯವಾಗುತ್ತದೆ ಎಂದು ಸಹಕಾರ ನೀಡಲು ಉದಾಹರಣೆ ನೀಡಿ ಮಾತನಾಡಿದರು.
ಸಾರ್ವಜನಿಕರ ಪರವಾಗಿ ಗುರುಬಸಪ್ಪ ಸಜ್ಜನ, ಬಿಜೆಪಿ ಅದ್ಯಕ್ಷ ಮೋಬಿನ್‌ಸಾಬ, ಹುಸೇನಿ ಆಲಂ ಕಮಿಟಿ ಅಧ್ಯಕ್ಷ ಶೇಖ ಹುಸೇನ್ ಷರೀಫ್, ತಾಲೂಕಾ ಪತ್ರಕರ್ತರ ಸಂಘದ ಅದ್ಯಕ್ಷ ಪಂಪಯ್ಯ ಮಠ ಮಾತನಾಡಿದರು.
ವೇದಿಕೆ ಮೇಲೆ ಪ್ರೋಬೇಷನರಿ ಡಿಎಸ್‌ಪಿ ಮಹಾನಿಂಗ ನಂದಗಾಂವಿ, ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮೀ, ಜೆಸ್ಕಾಂ ಶಾಖಾಧಿಕಾರಿ ಮುದ್ದನಗೌಡ, ಉಪ ತಹಶೀಲ್ದಾರ, ಉಪಸ್ಥಿತರಿದ್ದರು.
ಸಭೆಯಲ್ಲಿ ಪಪಂ ಮಾಜಿ ಸದಸ್ಯ ರಾಮಣ್ಣ ಹಿರೇಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಹೇಮಂತ ನಾಗಲಾಪೂರ, ಮುಖಂಡರಾದ ಉದಯಕುಮಾರ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಮೀರಬೇಗ್ ಉಸ್ತಾದ, ದಲಿತ ಮುಖಂಡರು, ಪಪಂ ಸದಸ್ಯರು, ವಿವಿಧ ದರ್ಗಾಗಳ ಮುಜಾವರ್‌ಗಳು, ನಾಗರಿಕರ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.