ರಾಯಚೂರು

ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ. ವಾರ್ತೆ  ಲಿಂಗಸ್ಗೂರು  ನ.11
ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಿಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ (ಸಿಐಟಿಯು) ದಿಂದ ನೌಕರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಗುರುಭವನದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ನೌಕರರು ಗ್ರೇಡ್-2 ತಹಸೀಲ್ದಾರ್ ಖಾಜಾಹುಸೇನ್ಗೆ ಮನವಿ ಸಲ್ಲಿಸಿದರು. ಭಾರತ ಸರ್ಕಾರದ ಮಹತ್ವಾಕಾಂಕ್ಷಿಯ ಬಿಸಿಯೂಟ ಯೋಜನೆ ಬಡಮಕ್ಕಳ ಹಾಜರಾತಿ, ಪೌಷ್ಠಿಕ ಆಹಾರ ನೀಡುವ ಯೋಜನೆಯಾಗಿದ್ದು, ಹಲವಾರು ಸಮಸ್ಯೆಗಳ ಮಧ್ಯೆ ಯಶಸ್ವಿಯಾಗಿ ನಡೆಯುತ್ತಿದೆ. ಆದರೆ ಅಡುಗೆ ಕೆಲಸಗಾರರಿಗೆ ಮಾತ್ರ ಯಾವುದೇ ಸಾಮಾಜಿಕ ಭದ್ರತೆ ನೀಡದೆ ಸರ್ಕಾರ ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಅನಾನುಕೂಲಗಳು: ತಾಲೂಕಿನ ಕೆಲ ಶಾಲೆಗಳ ಎಸ್ಡಿಎಂಸಿ ಅಧ್ಯಕ್ಷರ ಹಾಗೂ ಮುಖ್ಯಗುರುಗಳ ಹಸ್ತಕ್ಷೇಪ, ಸಮಯಕ್ಕೆ ಸರಿಯಾಗಿ ಗೌರವಧನ ಹಾಗೂ ಸಾದಿಲ್ವಾರು ಹಣ ಪಾವತಿಸುವುದಿಲ್ಲ. ಸರಿಯಾಗಿ ಅಡುಗೆ ಅನಿಲ ಪೂರೈಕೆ ಮಾಡುವುದಿಲ್ಲ. ಕೆಲ ಶಾಲೆಗಳಲ್ಲಿ ಆಹಾರ ದಾಸ್ತಾನು ಸಂಗ್ರಹಿಸಲು ಹಾಗೂ ಅಡುಗೆ ಮಾಡಲು ಕೊಠಡಿಗಳಿರುವುದಿಲ್ಲ. ಕುಡಿವ ನೀರಿನ ವ್ಯವಸ್ಥೆ ಇಲ್ಲದೆ ಅಡುಗೆ ಕೆಲಸದವರು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಆಗುವ ಅನಾಹುತಗಳಿಗೆ ಅಡುಗೆ ಸಿಬ್ಬಂದಿ ಜವಾಬ್ದಾರಿಯನ್ನಾಗಿ ಮಾಡಲಾಗುತ್ತಿದೆ. ಅಡುಗೆ ಕೆಲಸದವರಿಗೆ ಕನಿಷ್ಠ ವೇತನವಿಲ್ಲದೆ ಗೌರವಧನದ ಆಧಾರದಲ್ಲಿ ಅತ್ಯಂತ ಕಡಿಮೆ ಕೂಲಿ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಆದರೆ ಸರ್ಕಾರ ಹೆಚ್ಚು ಹಣ ನೀಡುವ ಖಾಸಗಿ ಸಂಸ್ಥೆಗಳಿಗೆ ನೀಡಲು ಯೋಚಿಸುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇಡಿಕೆಗಳು: ಬಿಸಿಯೂಟ ಯೋಜನೆಯನ್ನು ಖಾಸಗಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಬಾರದು. ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ 10 ಸಾವಿರ ನಿಗದಿ ಪಡಿಸಿ, ಬಿಸಿಯೂಟ ನೌಕರರನ್ನು ಖಾಯಂಗೊಳಿಸಿ ಶಿಕ್ಷಣ ಇಲಾಖೆ ನೌಕರರೆಂದು ಪರಿಗಣಿಸಬೇಕು. ಖಾತ್ರಿ ಪಿಂಚಣಿ ಯೋಜನೆ ಜಾರಿಗೊಳಿಸಿ, ಅಡುಗೆ ದಾಸ್ತಾನು ಸಂಗ್ರಹಕ್ಕೆ ಕೊಠಡಿ ನಿರ್ಮಿಸಲು ಕ್ರಮ ಜರುಗಿಸಬೇಕು. ಆಹಾರ ದಾಸ್ತಾನು ವಿತರಣೆ ಸಮಯದಲ್ಲಿ ಕಡಿಮೆ ಪ್ರಮಾಣ ನೀಡುವುದನ್ನು ತಡೆಯಲು ತೂಕ ಯಂತ್ರವನ್ನು ಕಡ್ಡಾಯವಾಗಿ ನೀಡುವಂತೆ ಕ್ರಮ ಜರುಗಿಸಬೇಕು. ವಿನಾಕಾರಣ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುವುದನ್ನು ನಿಲ್ಲಿಸಬೇಕು. ಎಸ್ಡಿಎಂಸಿ ಹಾಗೂ ಕೆಲ ಮುಖ್ಯಗುರುಗಳಿಂದ ಆಗುವ ಕಿರುಕುಳವನ್ನು ನಿವಾರಿಸಲು ಕ್ರಮ ಜರುಗಿಸಬೇಕು. ಸಮಯಕ್ಕೆ ಸರಿಯಾಗಿ ಗೌರವಧನ, ಸಾದಿಲ್ವಾರು ಹಣ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು. ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವಿನಾಕಾರಣ ಕೆಲಸದಿಂದ ವಜಾ ಮಾಡಿದ ನೌಕರರನ್ನು ಪುನಾ ಕೆಲಸಕ್ಕೆ ನೇಮಿಸಿಕೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ತುಳಜಾಬಾಯಿ, ಗೌರವಾಧ್ಯಕ್ಷ ಜಿ.ಎಸ್. ಯಂಕೋಬ, ಪದ್ಮಾವತಿ, ಶಂಕ್ರಮ್ಮ, ಯಲ್ಲಮ್ಮ, ಎಸ್. ಅಮರೇಶ, ಅಯ್ಯಪ್ಪ, ಅನೀಫ್ ಸೇರಿದಂತೆ ಬಿಸಿಯೂಟ ಅಡುಗೆದಾರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.