ಲೆವಿ ಸಂಗ್ರಹ ಪ್ರಮಾಣ ಕಡಿತ ಅಸಾಧ್ಯ; ಸಮಸ್ಯೆಗೆ ಶೀಘ್ರ ಪರಿಹಾರ
ರಾಯಚೂರು: ಕಳೆದ ವರ್ಷ ಲೆವಿ ಅಕ್ಕಿ ಸಂಗ್ರಹಣೆ ವೇಳೆ ಅಕ್ಕಿ ಗಿರಣಿ ಮಾಲೀಕರು ಗುರಿ ತಲುಪದ್ದರಿಂದ ಪ್ರಸಕ್ತ ವರ್ಷ ಅಕ್ಕಿ ಲೆವಿ ಪ್ರಮಾಣ ಹೆಚ್ಚಳ ಕಂಡಿದೆ. ಈ ಬಾರಿ ಅಕ್ಕಿ ಲೆವಿ ಗುರಿ ತಗ್ಗಿಸುವ ಯಾವುದೇ ಇರಾದೆ ಸರ್ಕಾರಕ್ಕಿಲ್ಲ. ಆದರೆ ಅಕ್ಕಿ ಗಿರಣಿಗಳ ಮಾಲೀಕರು ಎದುರಿಸುತ್ತಿರುವ ಇನ್ನಿತರೆ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದು ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಜಿಲ್ಲಾ ಅಕ್ಕಿ ಗಿರಣಿಗಳ ಮಾಲೀಕರ ಸಂಘದೊಂದಿಗಿನ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ಅಕ್ಕಿ ಗಿರಣಿಗಳಿಗೆ ನಿಗದಿಪಡಿಸಿದ್ದ ಲೆವಿ ಅಕ್ಕಿಯ ಗುರಿಗಿಂತ ಕಡಿಮೆ ಸಂಗ್ರಹವಾಗಿತ್ತು. ಆ ಸಂದರ್ಭ ಮಾಲೀಕರು ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಗುರಿ ಹೆಚ್ಚಿಸಲಾಗಿದೆ. ಈ ಬಾರಿ ಲೆವಿ ಅಕ್ಕಿ ಸಂಗ್ರಹದ ಪ್ರಮಾಣ ಕಡಿತಗೊಳಿಸುವ ಸಾಧ್ಯತೆಯಿಲ್ಲ ಎಂದು ಸ್ಪಷ್ಟಗೊಳಿಸಿದರು.
ಖರೀದಿಸಿ ವಿಲೇವಾರಿ: ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಅಧ್ಯಕ್ಷ ಪಾಪಾರೆಡ್ಡಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಕೇವಲ ಸೋನಾ ಮಸೂರಿ ಬತ್ತ ಬೆಳೆಯಲಾಗುತ್ತದೆ. ಅದರಿಂದಾಗಿ ಸರ್ಕಾರಕ್ಕೆ ಲೆವಿ ಅಕ್ಕಿ ಸಂಗ್ರಹಿಸಿ ನೀಡುವುದು ಕಷ್ಟವಾಗಿದೆ. ಹೊರ ರಾಜ್ಯಗಳಿಂದ ಲೆವಿ ಅಕ್ಕಿ ಖರೀದಿಸಿ ಸರ್ಕಾರಕ್ಕೆ ನೀಡುವಂತಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಬತ್ತಕ್ಕೆ ಈಚೆಗೆ ಬೆಂಬಲ ಬೆಲೆಯ ಜತೆಗೆ ಹೆಚ್ಚುವರಿಯಾಗಿ ಪ್ರೋತ್ಸಾಹ ಬೆಲೆ ನೀಡಿದೆ. ಅದರಿಂದಾಗಿ ರೈತರು ಅಕ್ಕಿ ಗಿರಣಿಗಳಿಗೆ ಬತ್ತ ಮಾರಾಟ ಮಾಡುವುದು ಅನುಮಾನ. ಕಾರಣ ಬತ್ತಕ್ಕೆ ಬೆಂಬಲ ಬೆಲೆ ನೀಡಿದ ಮಾದರಿಯಲ್ಲಿಯೇ ಲೆವಿ ಅಕ್ಕಿಗೆ ಸದ್ಯ ನಿಗದಿ ಮಾಡಿರುವ ಬೆಲೆಯನ್ನೂ ಹೆಚ್ಚಿಸುವಂತೆ ಒತ್ತಾಯಿಸಿದರು.
ದಾಸ್ತಾನಿಗೆ ಅವಕಾಶ: ಸರ್ಕಾರ ಕೆಎಫ್ಸಿಎಸ್ಸಿಯಿಂದ ಖರೀದಿಸುವ ಅಕ್ಕಿಗೆ ಮಾರುಕಟ್ಟೆ ಶುಲ್ಕ ಮನ್ನಾ ಮಾಡಿದೆ. ಅದೇ ರೀತಿ ಅಕ್ಕಿ ಲೆವಿ ನೀಡುವ ಗಿರಣಿಗಳ ಮಾಲೀಕರಿಗೂ ಸೌಲಭ್ಯ ಒದಗಿಸಬೇಕು. ಬತ್ತವು ಕೇವಲ ಹಂಗಾಮಿನ ಅಂತ್ಯಕ್ಕೆ ಲಭ್ಯವಾಗುತ್ತದೆ. ಹಾಗಾಗಿ ಅಕ್ಕಿ ಗಿರಣಿಗಳಿಗೆ ಬತ್ತದ ದಾಸ್ತಾನಿಗೆ ಅವಕಾಶ ಕಲ್ಪಿಸಬೇಕು. ಸದ್ಯ ಬತ್ತವನ್ನು ಒಂದು ತಿಂಗಳಿಗೂ ಹೆಚ್ಚಿನ ಅವಧಿಗೆ ದಾಸ್ತಾನಿರಿಸದಂತೆ ಅಧಿಕಾರಿಗಳು ಸೂಚಿಸುತ್ತಿದ್ದಾರೆಂದು ಮನವಿ ಮಾಡಿದರು.
ಸರ್ಕಾರ ಲೆವಿ ಅಕ್ಕಿ ಬದಲಿಗೆ ಬತ್ತವನ್ನು ರೈತರಿಂದ ಖರೀದಿಸಿ, ಗಿರಣಿಗಳಿಗೆ ಒದಗಿಸಿದಲ್ಲಿ ಅಂಥ ಬತ್ತವನ್ನು ಅಕ್ಕಿ ಯಾಗಿಸಿ ನೀಡಲು ಸಂಘದವರು ಸಿದ್ಧರಿದ್ದು, ಗಿರಣಿಗಳ ಕಾರ್ಮಿಕರಿಗೆ ಉದ್ಯೋಗ ನೀಡಿದಂತಾಗಲಿದೆ. ಜಿಲ್ಲೆಯಲ್ಲಿ ಅಕ್ಕಿ ಗಿರಣಿಗಳು ಆಧುನಿಕ ಯಂತ್ರೋಪಕರಣಗಳನ್ನು ಹೊಂದಿದ್ದು, ಅದರಿಂದ ವಿದ್ಯುತ್ ಬಳಕೆ ಪ್ರಮಾಣ ಹೆಚ್ಚಳ ಕಂಡಿದೆ. ಗಿರಣಿಗಳ ನಿರ್ವಹಣೆಯ ವೆಚ್ಚವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂಥ ವೆಚ್ಚವನ್ನಾಧರಿಸಿ ಲೆವಿ ಅಕ್ಕಿ ಪ್ರಮಾಣ ನಿಗದಿ ಮಾಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಲೆವಿ ಅಕ್ಕಿ ಪ್ರಮಾಣ ಕಡಿತಗೊಳಿಸಲು ಸಾಧ್ಯವಿಲ್ಲ. ಆದರೆ ಗಿರಣಿ ಮಾಲೀಕರ ಇನ್ನಿತರ ಬೇಡಿಕೆಗಳ ಪರಿಹಾರಕ್ಕೆ ಗಮನ ಹರಿಸಲಾಗುತ್ತದೆ. ಅಕ್ಕಿ ಲೆವಿ ಸಂಗ್ರಹದ ನಂತರ ತುರ್ತಾಗಿ ಅದರ ಹಣ ಪಾವತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಪ್ರಮುಖರಾದ ಮಾರಂ ತಿಪ್ಪಣ್ಣ ಸಾವಿತ್ರಿ ಪುರುಷೋತ್ತಮ ಸೇರಿ ಅನೇಕರಿದ್ದರು. ಅಧಿಕಾರಿಗಳಾದ ಆಹಾರ ಇಲಾಖೆಯ ಆಯುಕ್ತ ಹರ್ಷ ಗುಪ್ತಾ, ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣರಾವ್, ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು, ಎಸ್ಪಿ ಎಂ.ಎನ್. ನಾಗರಾಜ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

