ರಾಯಚೂರು

ಸಹಕಾರ ಕ್ಷೇತ್ರದಲ್ಲಿ ಹಸ್ತಕ್ಷೇಪ ಸರಿಯಲ್ಲ

Published On :

ಕನ್ನಡಪ್ರಭ ವಾರ್ತೆ  ಬೀದರ್  ನ.17
ಸಹಕಾರ ಕ್ಷೇತ್ರ ಪವಿತ್ರವಾದದ್ದು. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಪ್ರತಿಯೊಂದು ಕೆಲಸಕ್ಕೆ ಸಹಕಾರ ಮುಖ್ಯವಾಗಿದೆ ಎಂದು ಡಿಸಿಸಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ನೀಜಪ್ಪ ಪತ್ರಿ ನುಡಿದರು.
ಅವರು ಶನಿವಾರ ಬೀದರ್ ತಾಲೂಕಿನ ಇಮಾಮಪೂರ ಗ್ರಾಮದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಸಂಯುಕ್ತಾಶ್ರಯದಲ್ಲಿ 60ನೇ ಅಖಿಲ ಭಾರತ ಸಹಕಾರ ಸಪ್ತಾಹದ 3ನೇ ದಿನ ಸಹಕಾರ ಮಾರಾಟ ಸಂಸ್ಕರಣ ಮತ್ತು ಗ್ರಾಹಕ ದಿನದ ಕಾರ್ಯಕ್ರಮವನ್ನು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ, ಕಲ್ಲನ್ನು ಕೆತ್ತಿ ಶಿಲೆ ಮಾಡುವ ಕಲೆ ಈ ಸಹಕಾರ ಕ್ಷೇತ್ರಕ್ಕಿದೆ. ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸಾಧನೆ ಸಾಧ್ಯ. ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರ ಸಂಘಗಳು ಬಲಗೊಳ್ಳಬೇಕು ಎಂದರು.
ಕಾಲೆಳೆಯದಿರಿ: ಮುಖ್ಯ ಅತಿಥಿಯಾಗಿದ್ದ ರಾಜ್ಯ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಹಾಗೂ ಬೀದರ್ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಮಹ್ಮದ್ ಸಲೀಮೋದ್ದಿನ್ ಮಾತನಾಡಿ, ಸಹಕಾರ ಕ್ಷೇತ್ರವು ಕೇವಲ ಹಣಕಾಸು ವ್ಯವಹಾರ ಮಾಡುತ್ತಿಲ್ಲ. ಇತರೆ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ. ಮಧ್ಯವರ್ತಿ ದಲ್ಲಾಳಿಗಳನ್ನು ತಪ್ಪಿಸಿ ನೇರ ಲಾಭ ಪಡೆಯುವಂತೆ ನಮ್ಮ ಸಹಕಾರ ಕ್ಷೇತ್ರ ಮಾಡುತ್ತಿದೆ ಎಂದರು. 'ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರ ಕೈಗೂಡಿಸಿ, ಆದರೆ ಕಾಲೆಳೆಯುವ ಕೆಲಸ ಎಂದಿಗೂ ಮಾಡಬೇಡಿ' ಎಂದು ನುಡಿದರು.
ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರು ಹಾಗೂ ಜಿಲ್ಲಾ ಯುನಿಯನ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು, ಹಿಂದುಳಿದ ವರ್ಗದವರು ಮತ್ತು ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಪ್ತಾಹದಲ್ಲಿ ಭಾಗವಹಿಸಿ ಸಹಕಾರ ಚಳುವಳಿ ಯಶಸ್ವಿಗೊಳಿಸಬೇಕು ಎಂದರು.
ಪರಿಶ್ರಮಕ್ಕೆ ಫಲ: ದಕ್ಷ ಆಡಳಿತ, ನಿಷ್ಠಾವಂತ ಸಿಬ್ಬಂದಿ ಇದ್ದರೆ ಖಂಡಿತವಾಗಿ ಸಂಸ್ಥೆ ಬೆಳೆಯುತ್ತದೆ. ಸಹಕಾರ ಕ್ಷೇತ್ರದಲ್ಲಿ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಎಂದು ಹೇಳಿದ ಅವರು ನಾವು ಎಂದಿಗೂ ಕಾನೂನು ಚೌಕಟ್ಟಿನಲ್ಲಿ ನಡೆಯಬೇಕಾಗಿದ್ದು, ಸತತ ಶ್ರಮ, ಪರಿಶ್ರಮಕ್ಕೆ ಫಲ ಇದ್ದೇ ಇರುತ್ತದೆ. ಆದ್ದರಿಂದ ಯಾರು ಎದೆಗುಂದದೆ ಪ್ರಯತ್ನಿಸಬೇಕು ಎಂದರು.
ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ  ಬಿ.ಎಸ್. ಅಪರಂಜಿ ಉಪನ್ಯಾಸ ನೀಡಿದರು. ನಿರ್ದೇಶಕರಾದ ಅಣ್ಣಾರಾವ್ ಪಾಟೀಲ್, ಚಂದ್ರಕಾಂತ ಪಾಟೀಲ್ ಭೀಮರಾವ ಪಾಟೀಲ ಡಿಗ್ಗಿ, ಚಾಂಬೋಳ ಪಿಕೆಪಿಎಸ್ ಅಧ್ಯಕ್ಷ ಸುಭಾಷ ಪಾಟೀಲ್, ಜನವಾಡಾ ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಪನಸಾಲೆ, ಜನತಾ ಬಜಾರ ನಿರ್ದೇಶಕ ಪರಮೇಶ್ವರ ಮುಗಟೆ, ಸಹಕಾರ ಸಂಘಗಳ ಉಪನಿಬಂಧಕರಾದ ಟಿ. ಪೈರೋಜ್, ಪ್ರಧಾನ ವ್ಯವಸ್ಥಾಪಕರಾದ ಐ.ಟಿ. ಹಿಟ್ನಾಳ್, ಕಬ್ಬು ಅಭಿವೃದ್ಧಿ ಅಧಿಕಾರಿಗಳಾದ ಕಾಶಿನಾಥ ಕಾಡಾದೆ, ವಿನೋದ ಕೋಟೆ ಮತ್ತಿತರರು ಉಪಸ್ಥಿತರಿದ್ದರು. ಡಿ.ಎಂ. ಜತ್ತಿ,  ಸ್ವಾಗತಿಸಿದರು. ಮಂಜುಳಾ ಎಸ್. ಬಿರಾದಾರ ನಿರೂಪಿಸಿದರು. ಹಾವಗಿರಾವ್ ಬಿರಾದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.