ರಾಯಚೂರು

ಭೂರಹಿತರಿಗೆ ಹಕ್ಕುಪತ್ರ ನೀಡಲು ಸರ್ಕಾರಗಳ ಹಿಂದೇಟು

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ನ.25
ಸರ್ಕಾರಿ ಭೂಮಿಯ ಸಾಗುವಳಿದಾರರಿಗೆ ಮತ್ತು ವಸತಿಹೀನರಿಗೆ ಹಕ್ಕುಪತ್ರ ನೀಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರೈತ ಸಂಘದಿಂದ ಡಿ.2ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ನಾಗಲಿಂಗಸ್ವಾಮಿ ಹೇಳಿದರು.
ಅವರು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಂದ ನಂತರ ಹತ್ತಾರು ರೀತಿಯ ಭಾಗ್ಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ರೈತರ ವಿಚಾರದಲ್ಲಿ ಸರ್ಕಾರ ಇಂದಿಗೂ ನಿರ್ಲಕ್ಷ್ಯದ ಧೋರಣೆ ತಳೆದಿದೆ ಎಂದು ಆರೋಪಿಸಿದರು.
ಹಕ್ಕುಪತ್ರಕ್ಕೆ ಹಿಂದೇಟು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಭೂಬ್ಯಾಂಕ್ ಯೋಜನೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೂ ಮುಂದುವರಿದಿದೆ. ಸರ್ಕಾರವು ರೈತರ ಫಲವತ್ತಾದ ಜಮೀನು ಕಿತ್ತುಕೊಳ್ಳುವ ಕಾರ್ಯ ಮುಂದುವರಿಸಿದೆ. 1992ರಿಂದ ರಾಜ್ಯದ ವಿವಿಧೆಡೆ ಸರ್ಕಾರಿ ಜಮೀನಿನಲ್ಲಿ ಕೃಷಿಯಲ್ಲಿ ತೊಡಗಿರುವವರಿಗೆ ಹಾಗೂ ಭೂಮಿಯಿಲ್ಲದಂಥವರಿಗೆ ಹಕ್ಕುಪತ್ರ ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ ಎಂದು ದೂರಿದರು.
ಜಿಲ್ಲೆಯಲ್ಲಿ ಸರ್ಕಾರಿ ಜಮೀನಿನಲ್ಲಿ ಅನೇಕ ಕಡೆ ಸಾವಿರಾರು ರೈತರು ಸಾಗುವಳಿ ನಡೆಸಿದ್ದಾರೆ. ಅದೇ ರೀತಿ ಅನೇಕ ಬಡವರು ಸರ್ಕಾರಿ ಜಮೀನಿನಲ್ಲಿ ವಾಸವಾಗಿದ್ದಾರೆ. ಶೆಡ್ ಮತ್ತು ಗುಡಿಸಲುಗಳಲ್ಲಿ ವಾಸವಾಗಿರುವವರಿಗೆ ವಸತಿ ಯೋಜನೆ ಅಡಿ ಸರ್ಕಾರ ಸೌಲಭ್ಯ ಒದಗಿಸಿಲ್ಲ ಎಂದು ಆರೋಪಿಸಿದರು.
ಮಾನವಿ ಸೇರಿ ಜಿಲ್ಲೆಯ ಬಹುತೇಕ ಕಡೆ ಅಪಾರ ಪ್ರಮಾಣದಲ್ಲಿ ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಮಾನವಿ ಹೊರ ವಲಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲಿನ ಗಣಿಗಾರಿಕೆಯಲ್ಲಿ ಶಾಮೀಲಾಗಿರುವ ಎಂ.ಈರಣ್ಣ ಮತ್ತು ಅಕ್ಬರ್ ಪಾಷಾ ಮತ್ತಿತರರು ಅಕ್ರಮದಲ್ಲಿ ತೊಡಗಿರುವ ಬಗ್ಗೆ ಜಿಲ್ಲಾಡಳಿತದ ತನಿಖೆಯಿಂದ ಆರೋಪ ಸಾಬೀತಾಗಿದ್ದರೂ, ಪ್ರಕರಣ ದಾಖಲಿಸಿಲ್ಲ ಎಂದು ದೂರಿದರು.
ಕಿರುಕುಳ: ಹಟ್ಟಿಚಿನ್ನದ ಗಣಿಯಲ್ಲಿ ರು. 3525ಕೋಟಿಗಳಷ್ಟು ಬೆಳೆಬಾಳುವ ಸೈನೈಡ್ ತ್ಯಾಜ್ಯವನ್ನು ಕೇವಲ ರು. 53ಕೋಟಿಗೆ ಮಾರಾಟ ಮಾಡಿರುವ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ದರೂ ಅದರ ಬಗ್ಗೆ ಕ್ರಮ ಕೈಗೊಳ್ಳುವತ್ತ ಸರ್ಕಾರ ಮೌನವಹಿಸಿದೆ. ಹಟ್ಟಿ ಗಣಿ ಕಂಪನಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವಂಥ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಟೀಕಿಸಿದರು.
ರಾಯಚೂರು ತಾಲೂಕಿನ ಯರಗೇರಾ ಬಳಿಯಿರುವ ಪಿಜಿ ಸೆಂಟರ್ ರೈತರ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದು, ಕಳೆದ 20 ವರ್ಷಗಳಿಂದ ರೈತರಿಗೆ ಪರಿಹಾರ ನೀಡಿಲ್ಲ. ಇಲ್ಲವೇ ಜಮೀನನ್ನೂ ಮರಳಿಸಿಲ್ಲ ಎಂದ ಅವರು, ಈ ಹಿನ್ನೆಲೆಯಲ್ಲಿ ಡಿ.2ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಜಮೀನು ಸಾಗುವಳಿದಾರರಿಗೆ ಮತ್ತು ವಸತಿಹೀನರಿಗೆ ಹಕ್ಕುಪತ್ರ ನೀಡಬೇಕು. ಪಿಜಿ ಸೆಂಟರ್ನ್ ಜಮೀನನ್ನು ರೈತರಿಗೆ ಪರಿಹಾರ ಸಮೇತ ಮರಳಿಸಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಟ್ಟಿ ಗಣಿಯ ಸೈನೈಡ್ ಬೂದಿಯ ಅಕ್ರಮ ಮಾರಾಟದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಲಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯ ಪ್ರಮುಖರಾದ ಮುದುಕಪ್ಪ ನಾಯಕ, ಮಲ್ಲಯ್ಯ ಕಟ್ಟಿಮನಿ, ರಮೇಶ್ ಪಾಟೀಲ್, ಅಶೋಕ ನಿಲೋಗಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.