ಬಾಲಿ ಶೃಂಗಸಭೆ; ಡಿ.16ರಿಂದ ರಾಸ್ತಾರೋಕೋ
ಕನ್ನಡಪ್ರಭ ವಾರ್ತೆ, ರಾಯಚೂರು, ನ.27
ದೇಶದ ಆಹಾರ ಭದ್ರತೆ ಕಾಯಿದೆ, ಬೆಂಬಲ ಬೆಲೆ ಪದ್ಧತಿ ಮತ್ತು ಸಬ್ಸಿಡಿ ನೀಡಿಕೆ ವ್ಯವಸ್ಥೆಗೆ ಪೆಟ್ಟು ನೀಡುವ ಒಪ್ಪಂದಕ್ಕೆ ಡಿಸೆಂಬರ್ನಲ್ಲಿ ಕೇಂದ್ರದ ಯುಪಿಎ ಸರ್ಕಾರ ಬಾಲಿಯಲ್ಲಿ ನಡೆಯಲಿರುವ ಜಿ-33 ಶೃಂಗಸಭೆಯಲ್ಲಿ ಸಹಿ ಹಾಕುವುದನ್ನು ವಿರೋಧಿಸಿರುವ ಪ್ರಾಂತ ರೈತ ಸಂಘವು ಈ ನಿಟ್ಟಿನಲ್ಲಿ ಡಿ.16ರಂದು ರಾಜ್ಯಾದ್ಯಂತ ರಸ್ತಾರೋಕೋ ಚಳವಳಿ ಆಯೋಜಿಸಿದೆ.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಅವರು, ಬಾಲಿಯಲ್ಲಿ ಆಯೋಜಿಸಿರುವ ಶೃಂಗಸಭೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳನ್ನು ನಿಯಂತ್ರಿಸಲು ಹುನ್ನಾರ ನಡೆಸಿವೆ. ಸಬ್ಸಿಡಿ ಮತ್ತು ಬೆಂಬಲ ಬೆಲೆ ಪದ್ಧತಿಯನ್ನು ಬಹುತೇಕ ರದ್ದುಗೊಳಿಸುವಂಥ ಪರಿಸ್ಥಿತಿ ನಿರ್ಮಾಣ ಮಾಡುತ್ತಿವೆ ಎಂದು ಟೀಕಿಸಿದರು.
ಒತ್ತಡ ತಂತ್ರ: ಅಮೆರಿಕ, ಜಪಾನ್ ಮತ್ತು ಚೀನಾದಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಅಲ್ಲಿನ ರೈತರಿಗೆ ಹೆಚ್ಚಿನ ಪ್ರಮಾಣದ ಸಬ್ಸಿಡಿ ನೀಡಲಾಗುತ್ತಿದೆ. ಆದರೆ ಕೃಷಿ ಪ್ರಧಾನ ದೇಶ ಭಾರತ ಸೇರಿ ವಿವಿಧ ಬಡರಾಷ್ಟ್ರಗಳ ಮೇಲೆ ಸಬ್ಸಿಡಿ ನೀಡಿಕೆ ಸೇರಿ ವಿವಿಧ ಸೌಲತ್ತು ನೀಡದಂತೆ ಒತ್ತಡ ಹೇರುವ ಕಾರ್ಯ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾಡುತ್ತಿವೆ ಎಂದು ಟೀಕಿಸಿದರು.
ಕೇಂದ್ರದ ಯುಪಿಎ ಸರ್ಕಾರ ದೇಶದಲ್ಲಿ ಆಹಾರ ಭದ್ರತೆ ಕಾಯಿದೆ ಜಾರಿಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯ ಉದ್ದೇಶದಿಂದಲೇ ಜಾರಿಗೆ ತರಲಾಗುತ್ತಿರುವ ಆಹಾರ ಭದ್ರತೆ ಕಾಯಿದೆಗೆ ಬಾಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಅಣತಿಯಂತೆ ಬೆಂಬಲ ಬೆಲೆ ಪದ್ಧತಿ ರದ್ದತಿಗೆ ಮತ್ತು ಸಬ್ಸಿಡಿ ಕಡಿತಗೊಳಿಸುವಂಥ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ಆಹಾರದ ಅಭದ್ರತೆ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಥಗಿತ: ಅದೇ ರೀತಿ ರಾಜ್ಯದಲ್ಲಿ ಈಗಾಗಲೇ ಸಿದ್ದರಾಮಯ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆ ಜಾಗತಿಕ ಮಟ್ಟದಲ್ಲಿ ಮಾಡಿಕೊಳ್ಳುವ ಒಪ್ಪಂದದಿಂದ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸಿದ ಅವರು, ಕೇಂದ್ರ ಸರ್ಕಾರ ಸ್ವಾಮಿನಾಥನ್ ಆಯೋಗವು ಸೂಚಿಸಿದಂತೆ ದೇಶದ ಆಹಾರ ಭದ್ರತೆಗೆಗಾಗಿ ಆಹಾರ ಪೆಟ್ಟಿಗೆ ರಚಿಸುವ ಕಾರ್ಯ ಮಾಡುತ್ತಿಲ್ಲ ಎಂದು ಟೀಕಿಸಿದರು.
ಬಾಲಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಒತ್ತಡಕ್ಕೆ ಮಣಿಯಬಾರದು. ಅಷ್ಟೇ ಅಲ್ಲ ಇನ್ನಿತರ ರಾಷ್ಟ್ರಗಳೊಂದಿಗೆ ಸೇರಿ ಮುಂದಾಳತ್ವ ವಹಿಸಿ ಇಂಥ ಅಪಾಯಕಾರಿ ಒಪ್ಪಂದವನ್ನು ವಿರೋಧಿಸುವತ್ತ ಗಮನಹರಿಸುವಂತೆ ಆಗ್ರಹಿಸಿದರು.
ಕೇಂದ್ರ ಸರ್ಕಾರ ರು. 30ಲಕ್ಷ ಕೋಟಿ ಸಾಲವನ್ನು ವರ್ಲ್ಡ್ ಬ್ಯಾಂಕಿನಿಂದ ಪಡೆದಿದ್ದು, ಬ್ಯಾಂಕಿನ ಅಣತಿಯಂತೆ ಎಲ್ಲ ನೀತಿಗಳನ್ನು ಜಾರಿಗೆ ಮುಂದಾಗಿದೆ. ಇದು ದೇಶದ ನಿವಾಸಿಗಳಿಗೆ ಅಭದ್ರತೆ ತಂದೊಡ್ಡಲಿವೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರಲು ಯೋಜಿಸಿದ್ದು ಅದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಸಂಕಷ್ಟ: ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದು ಖಾಸಗಿಯವರಿಗೆ ಪರ್ಯಾಯ ಮಾರುಕಟ್ಟೆಯನ್ನು ಕಲ್ಪಿಸುವ ಕಾರ್ಯ ಮಾಡಲು ಸರ್ಕಾರ ಹೊರಟಿದೆ. ಅದರಿಂದಾಗಿ ಸ್ಥಳೀಯ ವರ್ತಕರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸದ್ಯ ಎಪಿಎಂಸಿಗಳಿಂದ ವಹಿವಾಟು ನಡೆಸಲು ನೀಡುತ್ತಿರುವ ಪರವಾನಗಿಯನ್ನು ಮುಂದಿನ ದಿನಗಳಲ್ಲಿ ರಾಜ್ಯಮಟ್ಟದಿಂದಲೇ ಮಂಜೂರು ಮಾಡುವ ತಂತ್ರಗಾರಿಕೆ ನಡೆದಿದೆ. ಹೊಸ ನೀತಿ ಜಾರಿಗೆ ಬಂದಲ್ಲಿ ವಿದೇಶಿ ಖಾಸಗಿ ಸಂಸ್ಥೆಗಳಿಗೆ ಮುಕ್ತ ಮಾರುಕಟ್ಟೆ ವಹಿವಾಟಿಗೆ ಅವಕಾಶ ದೊರೆಯಲಿದೆ. ಅದರಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆಂದು ಆರೋಪಿಸಿದರು.
ಬಾಲಿ ಶೃಂಗಸಭೆಯಲ್ಲಿ ಸಬ್ಸಿಡಿ ಕಡಿತ, ಬೆಂಬಲಬೆಲೆ ಪದ್ಧತಿ ರದ್ದತಿಯ ಒಪ್ಪಂದಕ್ಕೆ ಸಹಿ ಹಾಕಲು ವಿರೋಧ, ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮತ್ತು ಜಾರಿಗೆ ವಿರೋಧ ಸೇರಿ 11 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.16ರಂದು ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ರಸ್ತಾರೋಕೋ ಚಳವಳಿ ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಡಿ.1ರಿಂದ ಡಿ.15ರವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಕೈಗೊಳ್ಳಲಾಗುತ್ತದೆ ಎಂದು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಹೇಳಿದರು. ಈ ಸಂದರ್ಭದಲ್ಲಿ ಸಂಘಟನೆ ಪ್ರಮುಖ ಕೆ.ಜಿ. ವೀರೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

