ರಾಯಚೂರು

ಸರ್ಕಾರಿ ಶಾಲೆಗಳ ಮೌಲ್ಯಾಂಕನ ಅವೈಜ್ಞಾನಿಕ; ಆರೋಪ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ನ.27
ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಗುಣಮಟ್ಟದ ಮೌಲ್ಯಾಂಕನ ಪದ್ಧತಿಯು ತೀರಾ ಅವೈಜ್ಞಾನಿಕ ಎಂದು ಬಣ್ಣಿಸಿರುವ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು, ಇದರಿಂದ ಸರ್ಕಾರಿ ಶಾಲೆಗಳು ಮತ್ತು ಸಮುದಾಯದ ಮಧ್ಯೆ ಕಂದಕ ಸೃಷ್ಟಿಯಾಗಲಿದೆ. ರಾಜ್ಯ ಸರ್ಕಾರದ ಇಂಥ ಧೋರಣೆ ಖಂಡಿಸಿ ನ. 30ರಂದು ಮೌನ ಮೆರವಣಿಗೆ ನಡೆಸಲು ಸಂಘ ನಿರ್ಧರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಜಿಲ್ಲಾಧ್ಯಕ್ಷ ಜಿ.ತಿಮ್ಮಣ್ಣ, ರಾಜ್ಯ ಸರ್ಕಾರವು ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಿಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಸೌಲಭ್ಯ ಕಲ್ಪಿಸದೇ ಶಾಲೆಗಳಿಗೆ ವಿದ್ಯಾರ್ಥಿಗಳು ಬಾರದಂತೆ ತಡೆದಿದೆ ಎಂದು ಆರೋಪಿಸಿದರು.
ಸರ್ಕಾರಿ ಶಾಲೆಗಳು ಜಿಲ್ಲೆಯ ಅನೇಕ ಕಡೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದರೂ ಅಂಥ ಶಾಲೆಗಳನ್ನು ಮರೆ ಮಾಚಲಾಗಿದೆ. ಕೇವಲ ಸೌಲಭ್ಯಗಳಿಂದ ದೂರವಿರುವ ಶಾಲೆಗಳ ಮೌಲ್ಯಾಂಕನವನ್ನು ಹೊಣೆಹೊತ್ತಿರುವ ಸಂಸ್ಥೆಯು ಮಾಡಿದೆ. ಸರ್ಕಾರದ ಇಂಥ ಧೋರಣೆಯು ಖಾಸಗಿ ಸಂಸ್ಥೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ತಂತ್ರವಾಗಿದೆ ಎಂದು ಆರೋಪಿಸಿದರು.
ಕಳಪೆ ಸಾಧನೆಗೆ ಸರ್ಕಾರವೇ ಕಾರಣ: ಶಾಲಾ ಗುಣಮಟ್ಟದ ಮೌಲ್ಯಾಂಕನದಲ್ಲಿ ಸರ್ಕಾರಿ ಶಾಲೆಗಳು ಕಳಪೆ ಸಾಧನೆ ಮಾಡಿವೆ ಎಂದು ವರದಿಯಲ್ಲಿ ತಿಳಿಸಿದ್ದು, ಸರ್ಕಾರವೇ ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಒದಗಿಸದೇ ಗುಣಮಟ್ಟದ ಶಿಕ್ಷಣ ನೀಡಿಕೆ ಅಸಾಧ್ಯ ಎಂಬುದನ್ನು ಮರೆಯುವಂತಿಲ್ಲ. ಈಗಾಗಲೇ ಶಿಕ್ಷಕರನ್ನು ವಿವಿಧ ಕೆಲಸ ಕಾರ್ಯಗಳಿಗೆ ನಿಯೋಜಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಬೋಧನೆಗಿಂತ ಬೋಧನೇತರ ಕಾರ್ಯಗಳಿಗೆ ಹೆಚ್ಚು ಬಳಕೆಯಾಗುತ್ತಿದ್ದು, ಅದರಿಂದ ಮಕ್ಕಳ ಕಲಿಕೆ ಮೇಲೆ ಅಡ್ಡಪರಿಣಾಮ ಬೀರುತ್ತಿದೆ ಎಂದು ದೂರಿದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ತಮ್ಮ ಮೇಲಿರುವ ಎಲ್ಲ ಅನ್ಯ ಕಾರ್ಯಗಳ ಹೊರತಾಗಿಯೂ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮತ್ತೆ ಹೊಸದಾಗಿ ಬೇರೊಂದು ಸಂಸ್ಥೆಯ ಮೂಲಕ ಮೌಲ್ಯಾಂಕನ ನಡೆಸುವುದು ಅನಾವಶ್ಯಕ ಎಂದ ಅವರು, ಸರ್ಕಾರ ಕೂಡಲೇ ಸರ್ಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಭದ್ರತೆ ಒದಗಿಸುವಂತೆ ಒತ್ತಾಯಿಸಿದರು.
ಮೌಲ್ಯಾಂಕನ ಪದ್ಧತಿ ಹಿಂಪಡೆಯಿರಿ: ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವತ್ತ ಸರ್ಕಾರ ನಿರ್ದೇಶನ ನೀಡಬೇಕು. ಸರ್ಕಾರಿ ಶಾಲೆಗಳನ್ನು ಗ್ರೇಡ್ ಪದ್ಧತಿಯಲ್ಲಿ ಅಳತೆ ಮಾಡುವುದು ಸಮಂಜಸವಲ್ಲ. ಈಗಾಗಲೇ ಕೈಗೊಂಡಿರುವ ಮೌಲ್ಯಾಂಕನ ಪದ್ಧತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ನವೋದಯ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಕೇಂದ್ರೀಯ ವಿದ್ಯಾಲಯ ಸೇರಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ ಜಾರಿಗೆ ತರಬೇಕು. ವಿಷಯವಾರು ಶಿಕ್ಷಕರನ್ನು ಶಾಲೆಗೆ ಒದಗಿಸಬೇಕು. ಸರ್ಕಾರಿ ಶಾಲೆಗಳಿಗೆ ಪರಿಚಾರಕರನ್ನು ನೇಮಿಸಬೇಕು. ಸದ್ಯ ಶಾಲೆಗಳಲ್ಲಿ ಎಲ್ಲ ಕೆಲಸ ಕಾರ್ಯಗಳನ್ನು ಶಿಕ್ಷಕರೇ ನಿಭಾಯಿಸುವಂತಾಗಿದ್ದು ಅದರಿಂದ ಬೋಧನೆಗೆ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
30ರಂದು ಮೌನ ಮೆರವಣಿಗೆ: ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಾಗೂ ಪೂರಕ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಹಂತಹಂತವಾಗಿ ಹೋರಾಟ ನಡೆಸಲಿದ್ದು, ಇದರಂಗವಾಗಿ ನ.30ರಂದು ನಗರದ ಡಿಡಿಪಿಐ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೌನ ಮೆರವಣಿಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಗುರುಲಿಂಗಯ್ಯ, ಅಬ್ದುಲ್ ಅಜೀಜ್, ತಿಮ್ಮಣ್ಣ ನಾಯಕ, ತಿಮ್ಮಪ್ಪ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.