ರಾಯಚೂರು

ಪಡಿತರ ಧಾನ್ಯವಾಗಿ ಜೋಳ ವಿತರಿಸಿ

Published On :

ಸಿಂಧನೂರು:  ಉತ್ತರ ಕರ್ನಾಟಕದ ಪ್ರಮುಖ ಬೆಳೆಯಾದ ಜೋಳಕ್ಕೆ ಬೆಂಬಲ ಬೆಲೆ ನೀಡುವುದರೊಂದಿಗೆ, ಸರ್ಕಾರದ ಅನ್ನಭಾಗ್ಯ ಯೋಜನೆಯಲ್ಲಿ ಅದನ್ನು ಪಡಿತರ ಧಾನ್ಯವಾಗಿ ವಿತರಿಸಬೇಕೆಂದು ಒತ್ತಾಯಿಸಿ ಕನ್ನಡಿಗರ ಜನಪರ ವೇದಿಕೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಜೋಳದ ರೊಟ್ಟಿ, ಎಣ್ಣೆಬದನೆಕಾಯಿ ಪಲ್ಲೆ ಸೇವಿಸುವ ಮೂಲಕ ಶನಿವಾರ ವಿನೂತನವಾಗಿ ಪ್ರತಿಭಟಿಸಿತು.
ಉತ್ತರ ಕರ್ನಾಟಕದ ಪ್ರಮುಖ ಆಹಾರ ಧಾನ್ಯ ಜೋಳ. ಈ ಭಾಗದ ಬಹುತೇಕರು ರೊಟ್ಟಿಯಿಲ್ಲದೆ ಊಟ ಮಾಡುವುದಿಲ್ಲ. ಬತ್ತದ ಬೆಳೆ ಇಲ್ಲದ ಸಂದರ್ಭ ರೊಟ್ಟಿ, ಸಂಗಟಿ ಸಾರು, ಇಲ್ಲವೇ ಮಜ್ಜಿಗೆ ಊಟ ಮಾಡುತ್ತಿದ್ದರು. ಬರುಬರುತ್ತಾ ಈಗ ಅದು ಅನ್ನಕ್ಕೆ ಮಾರ್ಪಾಡಾಗಿದೆ. ಆದರೆ ಇನ್ನೂ ಉತ್ತರ ಕರ್ನಾಟಕ ಭಾಗದಲ್ಲಿ ಜೋಳವನ್ನು ಯಥೇಚ್ಛವಾಗಿ ಬೆಳೆಯುತ್ತಾರೆ. ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಇಲ್ಲ. ಇದರಿಂದಾಗಿ ಆರೋಗ್ಯಕರ ಮತ್ತು ಉತ್ತಮ ಜೋಳ ಬೆಳೆ ದಿನದಿಂದ ದಿನಕ್ಕೆ ನಶಿಸುತ್ತಾ ಸಾಗಿದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ಹೆಸರು, ತೊಗರೆ, ಅಲಸಂದಿ, ಮೆಟಗಿ ಬೆಳೆಗಳು ಕ್ಷೀಣಿಸುತ್ತಿದ್ದು, ಇವುಗಳ ಪುನಶ್ಚೇತನಕ್ಕೂ ಸರ್ಕಾರ ಗಮನಹರಿಸಬೇಕು ಎಂದು ವೇದಿಕೆ ಜಿಲ್ಲಾ ಉಪಾಧ್ಯಕ್ಷ ಧರ್ಮರಾಜ್ ಉಪ್ಪಾರ ಮನವಿ ಮಾಡಿದರು.
ಪಡಿತರದಾರರಿಗೆ ಸೌಲಭ್ಯ: ಜೋಳವನ್ನು ಪಡಿತರ ಧಾನ್ಯವಾಗಿ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸಬೇಕು. ತೊಗರೆ, ಅಲಸಂದಿ, ಹೆಸರುಕಾಳು, ಮೆಟಗಿಕಾಳನ್ನು ಪಡಿತರದಾರರಿಗೆ ಒದಗಿಸಬೇಕು. ಜೋಳಕ್ಕೆ ಬೆಂಬಲ ಬೆಲೆ ಘೋಷಿಸಬೇಕು. ಜೋಳದ ಬೆಳೆಯನ್ನು ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದ್ದು, ಬತ್ತದ ಬೆಳೆ ಬೆಳೆಯಲು ಬ್ಯಾಂಕ್ಗಳಿಂದ ಸಾಲ ಒದಗಿಸಿದಂತೆ ಈ ಬೆಳೆಗೂ ಹೆಚ್ಚಿನ ಸಾಲ ಸೌಲಭ್ಯ ಒದಗಿಸಬೇಕು.
ಜೋಳ ಬೆಳೆಗಾರರನ್ನು ಪ್ರೋತ್ಸಾಹಿಸಲು ಯೋಜನೆ ರೂಪಿಸಬೇಕು ಎನ್ನುವ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ರಾಮಣ್ಣ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸೈ. ರಬ್ಬಾನಿ ಜಾಗೀರದಾರ, ತಾಲೂಕು ಅಧ್ಯಕ್ಷ ನಿಜಗುಣಿ ಹಡಪದ, ನಗರ ಘಟಕ ಅಧ್ಯಕ್ಷ ಹುಸೇನ್, ಉಪಾಧ್ಯಕ್ಷ ಚನ್ನನಗೌಡ, ಮುಖಂಡರಾದ ಭದ್ರಿಗೌಡ, ವೆಂಕಟೇಶ ಉಪ್ಪಾರ, ಕಿರಣಕುಮಾರ, ಮೌಲಾಪಾಶಾ, ಹನೀಫ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.