ರಾಯಚೂರು

ನಾಳೆ ವಿಶ್ವ ಆಹಾರ ದಿನಾಚರಣೆ ಸಮಾರಂಭ

Published On :

ಕೃಷಿ ತಂತ್ರಜ್ಞರ ಸಂಸ್ಥೆಯಿಂದ ಆಯೋಜನೆ  ರೈತರಿಗೆ ಕೃಷಿ ಪೂರಕ ಮಾಹಿತಿ ರವಾನೆಯ ಉದ್ದೇಶ
ಕನ್ನಡಪ್ರಭ ವಾರ್ತೆ ರಾಯಚೂರು ಅ.27
ಕೃಷಿ ತಂತ್ರಜ್ಞರ ಸಂಸ್ಥೆಯು ಕಳೆದ ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ಕೃಷಿ ಮತ್ತು ಕೃಷಿಕರಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯಿಂದ ಅ.29ರಂದು ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಸಿದ್ದಾರೆಡ್ಡಿ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೃಷಿ ವಿವಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿಕ ಸಮಾಜ ಮತ್ತಿತರೆ ಸಂಸ್ಥೆಗಳ ಸಹಯೋಗದಲ್ಲಿ ಕೃಷಿ ವಿವಿ ಪ್ರೇಕ್ಷಾಗೃಹದಲ್ಲಿ ಅ.29ರಂದು ಬೆಳಗ್ಗೆ 11ಕ್ಕೆ ದಿನಾಚರಣೆ ಸಮಾರಂಭವನ್ನು ಕೃವಿವಿ ಕುಲಪತಿ ಡಾ. ಬಿ.ವಿ. ಪಾಟೀಲ್ ಉದ್ಘಾಟಿಸಲಿದ್ದಾರೆಂದು ಹೇಳಿದರು.
1968ರಿಂದ ಕೃಷಿಕರಿಗೆ ಮಾಹಿತಿ: ಮುಖ್ಯ ಅತಿಥಿಗಳಾಗಿ ಆಹಾರ ತಜ್ಞ ಡಾ. ಕೆ.ಸಿ. ರಘು, ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಪಾಟೀಲ್, ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ರುದ್ರೇಶಪ್ಪ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದ ಅವರು, ಕೃಷಿ ತಂತ್ರಜ್ಞರ ಸಂಸ್ಥೆಯು ರಾಜ್ಯದಲ್ಲಿ 1968ರಲ್ಲಿ ಕಾರ್ಯಾರಂಭ ಮಾಡಿದೆ. ಅಂದಿನಿಂದ ಇಂದಿನವರೆಗೆ ಕೃಷಿಕರಿಗೆ ವಿವಿಧ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹೇಳಿದರು.
ರಾಯಚೂರು ಜಿಲ್ಲಾ ಘಟಕವು 2003ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ 175 ಜನ ಕೃಷಿ, ಕೃಷಿ ತಾಂತ್ರಿಕ, ತೋಟಗಾರಿಕೆ ಪದವೀಧರರು ಸಂಸ್ಥೆಯಲ್ಲಿ ಸದಸ್ಯತ್ವ ಪಡೆದಿದ್ದಾರೆ. ಸಂಸ್ಥೆಯ ಸದಸ್ಯರು ರೈತರಿಗೆ ಕೃಷಿಯಲ್ಲಿ ನೆರವಾಗುವ ಅಂಶಗಳು, ತಂತ್ರಜ್ಞಾನದ ಕುರಿತು ಮಾಹಿತಿಯನ್ನು ಕಾಲದಿಂದ ಕಾಲಕ್ಕೆ ನೀಡುವ ಮೂಲಕ ನೆರವಾಗುತ್ತಿದ್ದಾರೆಂದು ಹೇಳಿದರು.
ರೈತರ ಶ್ರೇಯೋಭಿವೃದ್ಧಿ ಗುರಿ: ಕೃಷಿ ತಂತ್ರಜ್ಞರ ಸಂಸ್ಥೆಯು ಲಾಭ ಗಳಿಕೆಯಲ್ಲದ ಉದ್ದೇಶದಿಂದ ಸ್ಥಾಪಿತ ಸಂಸ್ಥೆಯಾಗಿದೆ. ನಾಡಿನ ಎಲ್ಲ ಕೃಷಿ ಸಂಬಂಧಿ ತಂತ್ರಜ್ಞರನ್ನು ಒಂದೇ ವೇದಿಕೆಯಡಿ ತರುವ ಮೂಲಕ ರೈತಾಪಿ ಜನರ ಶ್ರೇಯೋಭಿವೃದ್ಧಿ ಗುರಿ ಹೊಂದಲಾಗಿದೆ. ಕೃಷಿ ವ್ಯವಹಾರ ಜ್ಞಾನ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಂಸ್ಥೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ ಸದ್ಯ ಸಂಸ್ಥೆಯಲ್ಲಿ 3,500 ಸದಸ್ಯರಿದ್ದು ಜಿಲ್ಲೆಯಲ್ಲಿ 175 ಸದಸ್ಯರಿದ್ದಾರೆ. ಅನಾದಿ ಕಾಲದಿಂದ ಲಭ್ಯವಿರುವ ಕೃಷಿ ಜ್ಞಾನದ ಆಧಾರದಲ್ಲಿ ಈಚೆಗೆ ಅಭಿವೃದ್ಧಿ ಹೊಂದಿದ ನವೀನ ತಂತ್ರಜ್ಞಾನ ಮತ್ತು ಕೌಶಲ್ಯತೆಗಳನ್ನು ಸದಸ್ಯರಿಗೆ, ರೈತಾಪಿ ಜನಾಂಗಕ್ಕೆ ತಲುಪಿಸಿ ವೈಜ್ಞಾನಿಕ ಕೃಷಿಯತ್ತ ಮುನ್ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ರೈತಪರ ಕಾರ್ಯಕ್ರಮಗಳು: ಕೃಷಿ ಸಂಬಂಧಿ ವಿಶೇಷ ಉಪನ್ಯಾಸ, ವಿಚಾರ ಸಂಕಿರಣ, ಕಾರ್ಯಾಗಾರಗಳು, ವಿಷಯಾಧರಿತ ಚರ್ಚೆ, ಶಿಕ್ಷಣ ಪ್ರವಾಸಗಳನ್ನು ಕೂಡಾ ಹಮ್ಮಿಕೊಳ್ಳಲಾಗುತ್ತಿದೆ. ವಿವಿಧ ಕೃಷಿ ಸಂಬಂಧಿ ಇಲಾಖೆಗಳು, ಸಂಸ್ಥೆಗಳ ಜತೆಗೂಡಿ ರೈತರಪರ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಹೇಳಿದರು.
ರಾಯಚೂರು ಘಟಕಕ್ಕೆ ಉಪಾಧ್ಯಕ್ಷರಾಗಿ ಡಾ. ವಾಸುದೇವನ್, ಕಾರ್ಯದರ್ಶಿಯಾಗಿ ಡಾ. ಎಂ.ಬಿ. ಪಾಟೀಲ್, ಖಜಾಂಚಿಯಾಗಿ ಡಾ. ಎಂ.ಭೀಮಣ್ಣ, ಜಂಟಿ ಕಾರ್ಯದರ್ಶಿಯಾಗಿ ಡಾ. ಶರಣಕುಮಾರ್ ಸೇರಿ ಒಟ್ಟು 8 ಜನ ಕಾರ್ಯಕಾರಿ ಮಂಡಳಿಯ ಸದಸ್ಯರಿದ್ದಾರೆಂದು ತಿಳಿಸಿದರು.
ಸಲಹೆ- ಸೂಚನೆ ಕೇಂದ್ರ: ಸಂಸ್ಥೆಯಿಂದ ಜಿಲ್ಲೆಯಲ್ಲಿ ಇದುವರೆಗೆ ವಿಶ್ವ ಪರಿಸರ ದಿನ, ಡಿಎಪಿ ರಸಗೊಬ್ಬರಕ್ಕೆ ಪರ್ಯಾಯ ರಸಗೊಬ್ಬರಗಳ ಬಗ್ಗೆ ಮಾಹಿತಿ ನೀಡಿಕೆ ಕಾರ್ಯಕ್ರಮ, ಕಿಸಾನ್ ಗೋಷ್ಠಿ, ಕಾರಾಗೃಹವಾಸಿಗಳಿಗೆ ಕೃಷಿ ಸಂಬಂಧಿ ಮಾಹಿತಿ ನೀಡಿಕೆ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಸಲಹೆ ಸೂಚನೆ ಕೇಂದ್ರಾರಂಭ, ಆಹಾರ ಸಂಸ್ಕರಣ ಮತ್ತು ಸಾವಯವ ಕೃಷಿ ಕುರಿತ ವಿಚಾರ ಸಂಕಿರಣ, ತುಂಗಭದ್ರಾ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಅಡಿ ಸವಳು ಭೂಮಿ ಸುಧಾರಣೆ ಕುರಿತು ವಿಚಾರ ಸಂಕಿರಣ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರಾದ ಡಾ.ಎಂ.ಬಿ.ಪಾಟೀಲ್, ಡಾ.ವಾಸುದೇವನ್, ವೀರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.