ಮನೋವಿಕಾಸಕ್ಕೆ ಶಿಕ್ಷಣ ಪೂರಕ
ಮಕ್ಕಳ ರಕ್ಷಣೆ, ಬಾಲನ್ಯಾಯ ಕಾಯಿದೆ ಕುರಿತ ಕಾರ್ಯಾಗಾರದಲ್ಲಿ ನ್ಯಾ.ರಮೇಶ್
ಕ.ಪ್ರ.ವಾರ್ತೆ ರಾಯಚೂರು ಅ.27
ಮಕ್ಕಳ ಮನೋವಿಕಾಸ, ಸಮಗ್ರ ಅಭಿವೃದ್ಧಿಗೆ ಪೂರಕ ಗುಣಮಟ್ಟದ ಶಿಕ್ಷಣ ನೀಡಿಕೆ ಅವಶ್ಯಕ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಮಾಜಮುಖಿ ಚಿಂತನೆಗಳನ್ನು ಮೂಡಿಸುವಲ್ಲಿ ಶಿಕ್ಷಕರ ಹೊಣೆಗಾರಿಕೆ ಮಹತ್ವದ್ದು ಎಂದು ಹೈಕೋರ್ಟಿನ ನ್ಯಾಯಮೂರ್ತಿ ಹಾಗೂ ಬಾಲನ್ಯಾಯ ಸಮಿತಿಯ ಅಧ್ಯರಾದ ಹುಲುವಾಡಿ ಜಿ. ರಮೇಶ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತಿತರೆ ಸಂಸ್ಥೆಗಳಿಂದ ಆಯೋಜಿಸಿದ್ದ ಮಕ್ಕಳ ರಕ್ಷಣೆ ಮತ್ತು ಬಾಲನ್ಯಾಯ ಕಾಯಿದೆ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ ಕುರಿತ ಕಾರ್ಯಾಗಾರ ಹೈಕೋರ್ಟಿನ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ದೊರೆಯಲು ಸಾಧ್ಯ: ಒಳ್ಳೆಯ ಶಿಕ್ಷಣ ನೀಡಿಕೆ ಮತ್ತು ವ್ಯವಸ್ಥೆಯ ನಿರ್ಮಾಣದಿಂದ ಮಾತ್ರ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ದೊರೆಯಲು ಸಾಧ್ಯ. ದೇಶದ ಪ್ರಗತಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ದೊಡ್ಡದು. ಆರೋಗ್ಯಕರ ಸಮಾಜ, ದೇಶದ ಪ್ರಗತಿಗೆ ಮಕ್ಕಳ ಸರ್ವಾಂಗೀಣ ಪ್ರಗತಿ ತೀರಾ ಅವಶ್ಯಕ ಎಂದು ಹೇಳಿದರು.
ಎಲ್ಲ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಬೇಕು. ಅಂಥ ಪರಿಸರ ನಿರ್ಮಾಣ ಪ್ರತಿಯೊಬ್ಬರ ಕರ್ತವ್ಯ. ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಬೋಧನೆಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟಿನ ಆದೇಶದಂತೆ ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ಎಲ್ಲರೂ ಶ್ರಮಿಸಬೇಕೆಂದರು.
ಅಸಾಧ್ಯದ ಪರಿಸರ ನಿರ್ಮಾಣ: ಶಾಲೆಗಳಲ್ಲಿ ಮಾತೃಭಾಷೆಯಲ್ಲಿಯೇ ಕಲಿಕೆ ಆಗಬೇಕೆಂಬ ಒತ್ತಾಯವಿದೆ. ಆದರೆ ಸದ್ಯದ ಜಾಗತಿಕ ಬದಲಾವಣೆಗಳು, ಪೈಪೋಟಿಯ ಜಗತ್ತಿನಲ್ಲಿ ಕೇವಲ ಮಾತೃಭಾಷೆಯಿಂದ ಪ್ರಗತಿ ಕಾಣುವುದು ಅಸಾಧ್ಯ ಎಂಬಂಥ ಪರಿಸರ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಈಗಲೇ ಪಟ್ಟಣ ಮತ್ತು ನಗರ ಪ್ರದೇಶದ ಮಕ್ಕಳಿಗೆ ಕಲಿಕೆಯಲ್ಲಿ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಜತೆಗೆ ಜಾಗತಿಕ ಮಟ್ಟದಲ್ಲಿ ಗುರುತಿಸುವ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯ ಎಂಬಂಥ ಸ್ಥಿತಿಯಿದೆ ಎಂದು ಹೇಳಿದರು.
ಮಕ್ಕಳಿಗಾಗಿಯೇ ರೂಪಿಸಿರುವ ಎಲ್ಲ ಕಾನೂನುಗಳು ಸಮರ್ಪಕ ಜಾರಿಗೆ ಎಲ್ಲರೂ ಪ್ರಯತ್ನಿಸಬೇಕು. ಮಕ್ಕಳ ಹಕ್ಕುಗಳನ್ನು ಅವರಿಗೆ ಒದಗಿಸುವ ಆಸಕ್ತಿ ತೋರಬೇಕು. ಗುಣಮಟ್ಟದ ಶಿಕ್ಷಣ, ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ದೇಶದ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.
ಶಿಕ್ಷಕರ ಹೊಣೆ: ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಮಾತನಾಡಿ, ಮಕ್ಕಳಲ್ಲಿನ ದೈಹಿಕ, ಮಾನಸಿಕ ಬದಲಾವಣೆ ಗುರುತಿಸಿ ಅವರಿಗೆ ಉತ್ತಮ ದಾರಿಯಲ್ಲಿ ಸಾಗುವ ಮಾರ್ಗದರ್ಶನ ಮಾಡಿಸುವುದು ಶಿಕ್ಷಕರ ಹೊಣೆಯಾಗಿದೆ. ಅದರಲ್ಲೂ ಮಹಿಳಾ ಶಿಕ್ಷಕರು ಬಾಲಕಿಯರಿಗೆ ದೌರ್ಜನ್ಯ, ಲೈಂಗಿಕ ಕಿರುಕುಳದ ಬಗ್ಗೆ ಕಾಲದಿಂದ ಕಾಲಕ್ಕೆ ಸೂಕ್ತ ಮಾಹಿತಿ ಒದಗಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕೆಂದು ಸಲಹೆ ನೀಡಿದರು.
ಇಂದಿನ ದಿನಮಾನದಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರದಂಥ ಪ್ರಕರಣಗಳು ಹೆಚ್ಚೆಚ್ಚು ನಡೆಯುತ್ತಿದ್ದರೂ ಬೆಳಕಿಗೆ ಬರುವುದು ತೀರಾ ಕಡಿಮೆಯೇ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಶಿಕ್ಷಕರು ಮಾಡಬೇಕಿದೆ. ಅದರಿಂದ ಅನಾಹುತ ತಪ್ಪಿಸಬಹುದಾಗಿದೆ ಎಂದು ಎಚ್ಚರಿಸಿದರು.
ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಕೃಷ್ಣ ಭಟ್ ಮಾತನಾಡಿ, ದೇಶದಲ್ಲಿ ಸಾವಿರಾರು ಸಂಖ್ಯೆಯ ಕಾನೂನುಗಳಿವೆ. ಆದರೆ ಅನುಷ್ಠಾನ ವೈಫಲ್ಯದಿಂದಾಗಿ ಕಾನೂನು ಮತ್ತು ಅನುಷ್ಠಾನದ ಮಧ್ಯೆ ಭಾರೀ ಕಂದಕ ಮೂಡಿದೆ. ಇದರ ನಿವಾರಣೆಗೆ ಎಲ್ಲರೂ ಶ್ರಮಿಸಬೇಕಿದೆ ಎಂದರು.
ದೇಶದಲ್ಲಿನ ಕಾನೂನುಗಳನ್ನು ಸಮರ್ಪಕವಾಗಿ ಬಳಕೆ ಮಾಡಿ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ತೊಡಗಬೇಕು. ಆ ಮೂಲಕ ಸಾಮಾಜಿಕ ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಮಾರಂಭದಲ್ಲಿ ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಭಾನುರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ದೊರೆಸ್ವಾಮಿ, ಡಿಡಿಪಿಐ ರಾಮಾಂಜನೇಯ, ಬಿಇಒ ಮಲ್ಲಿಕಾರ್ಜುನ, ಯುನಿಸೆಫ್ನ ಅಧಿಕಾರಿ ರಾಘವೇಂದ್ರ ಭಟ್, ಮುಖ್ಯಶಿಕ್ಷಕಿ ಚೆನ್ನಮ್ಮ ಸೇರಿ ಅನೇಕರಿದ್ದರು.
ವಿವಿಧೆಡೆಯಿಂದ ಆಗಮಿಸಿದ್ದ ಶಿಕ್ಷಕರು ಹಾಗೂ ಜನತೆ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

