ಬಾಯ್ಲರ್ ನಿರ್ವಹಣೆಯಿಂದ ಪರಿಸರ ರಕ್ಷಿಸಿ
ಕ.ಪ್ರ.ವಾರ್ತೆ , ರಾಯಚೂರು , ಅ.30
ಅಕ್ಕಿ ಗಿರಣಿಗಳಲ್ಲಿ ಬಳಕೆಯಾಗುವ ಬಾಯ್ಲರ್ಗಳ ಸಮರ್ಪಕ ನಿರ್ವಹಣೆಗೆ ಎಲ್ಲರೂ ಹೆಚ್ಚು ಗಮನಹರಿಸಬೇಕು. ಆ ಮೂಲಕ ಸುರಕ್ಷಿತ ಪರಿಸರ ನಿರ್ಮಿಸಬೇಕೆಂದು ರಾಯಚೂರು ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಾಪಾರೆಡ್ಡಿ ಕರೆ ನೀಡಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಬುಧವಾರ ಆಯೋಜಿಸಿದ್ದ ಅಕ್ಕಿ ಗಿರಣಿಗಳಲ್ಲಿ ಪ್ಯಾರಾ ಬಾಯ್ಲಿಂಗ್ ಘಟಕಗಳಲ್ಲಿ ಇಂಧನ ಮಿತವ್ಯಯ ಕ್ರಮಗಳ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚಿನ ಅಕ್ಕಿ ಗಿರಣಿಗಳಿದ್ದು, ಗುಣಮಟ್ಟದ ಅಕ್ಕಿ ಉತ್ಪಾದಿಸಲಾಗುತ್ತಿದೆ. ಉದ್ಯಮದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಉದ್ಯಮಿಗಳು ಗಿರಣಿಗಳಲ್ಲಿ ತಾಂತ್ರಿಕ ನ್ಯೂನತೆ ಸರಿಪಡಿಸಿಕೊಂಡು ಪ್ರಗತಿ ಹೊಂದುವಂತೆ ಮನವಿ ಮಾಡಿದರು.
ಹಬೆಯ ಏರುಪೇರು ನಿಯಂತ್ರಣ: ಸರ್ಕಾರದ ಕಾರ್ಖಾನೆಗಳು, ಬಾಯ್ಲರ್ಗಳು, ಕೈಗಾರಿಕೆಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯ ನಿರ್ದೇಶಕ ಬಿ.ಎಸ್. ರಾಮಚಂದ್ರ ಮಾತನಾಡಿ, ಅಕ್ಕಿ ಗಿರಣಿಗಳು, ಸಿದ್ಧ ಉಡುಪು ತಯಾರಕರು, ಯಟರ್ ತಯಾರಕರು, ಹೊಟೇಲ್ ಸೇರಿ ವಿವಿಧ ಉದ್ಯಮಗಳಲ್ಲಿ ಬಾಯ್ಲರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಬಾಯ್ಲರ್ಗಳಲ್ಲಿ ಹಬೆಯ ಏರುಪೇರು ನಿಯಂತ್ರಣದಿಂದ ಸ್ಥಿರತೆ ಕಾಯ್ದುಕೊಂಡಲ್ಲಿ ಇಂಧನ ಉಳಿತಾಯ ಸಾಧ್ಯ ಎಂದರು.
ಅಪಘಾತಗಳ ತಡೆಗೆ: ರಾಜ್ಯದಲ್ಲಿ 13800 ಕಾರ್ಖಾನೆಗಳಿದ್ದು, 3900 ಬಾಯ್ಲರ್ಗಳನ್ನು ಅಳವಡಿಸಿದ ಬಗ್ಗೆ ಇಲಾಖೆಯಲ್ಲಿ ನೋಂದಾಯಿಸಿ ಕೊಳ್ಳಲಾಗಿದೆ. 3151 ಬಾಯ್ಲರ್ಗಳಿಗೆ ಹಬೆ ಕೊಳವೆ ಅಳವಡಿಸಿದ ಬಗ್ಗೆ ಮಾಹಿತಿಯಿದೆ. 13.05 ಲಕ್ಷ ಕಾರ್ಮಿಕರು ಬಾಯ್ಲರ್ಗಳ ನಿರ್ವಹಣೆಯ ಕಾರ್ಯ ಮಾಡುತ್ತಿದ್ದು, ಇವರಲ್ಲಿ 4 ಲಕ್ಷ ಮಹಿಳೆಯರಿದ್ದಾರೆ. ಬಾಯ್ಲರ್ಗಳಲ್ಲಿನ ನ್ಯೂನತೆ ಸರಿಪಡಿಸಿಕೊಳ್ಳುವ ಮೂಲಕ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ಹೇಳಿದರು.
ಅಸುರಕ್ಷಿತ ಬಾಯ್ಲರ್ಗಳಿಂದ ಕೈಗಾರಿಕೆಗಳಲ್ಲಿ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದ ಅವರು, ಇಲಾಖೆಯು ಉದ್ಯಮಿಗಳ ಬೇಡಿಕೆಗೆ ಅನುಗುಣವಾಗಿ ಬಾಯ್ಲರ್ ಒದಗಿಸುತ್ತದೆ. ಇಲಾಖೆಯಿಂದ ಒದಗಿಸುವ ಐಬಿಆರ್ ಮಾದರಿಯ ಬಾಯ್ಲರ್ಗಳು ಹೆಚ್ಚು ಸುರಕ್ಷಿತ ಎಂಬ ಹೆಸರು ಪಡೆದಿವೆ ಎಂದು ಹೇಳಿದರು.
108 ಮಿಲಿಯನ್ ಟನ್ ಅಕ್ಕಿ: ದೇಶದಲ್ಲಿ 2012-13ನೇ ಸಾಲಿನಲ್ಲಿ ಒಟ್ಟು 108 ಮಿಲಿಯನ್ ಟನ್ ಅಕ್ಕಿ ಉತ್ಪಾದಿಸಲಾಗಿದೆ. ಇದರಿಂದ 33 ಮಿಲಿಯನ್ ಟನ್ನಷ್ಟು ಬತ್ತದ ತೌಡು ಉತ್ಪಾದನೆಯಾಗಿದೆ. ಇದನ್ನು ಬಳಸಿ ಇಂಧನ ಉತ್ಪಾದಿಸಬಹುದಾಗಿದೆ. ಇಷ್ಟೊಂದು ಪ್ರಮಾಣದ ಬತ್ತದ ತೌಡು 28 ಮಿಲಿಯನ್ ಟನ್ ಕಲ್ಲಿದ್ದಲು ನೀಡುವಷ್ಟು ಶಕ್ತಿ ಒದಗಿಸುತ್ತದೆ ಎಂದು ತಿಳಿಸಿದರು.
ದೇಶವು ಕಳೆದ ಅನೇಕ ದಶಕಗಳಿಂದ ಇಂಧನ ಮಿತವ್ಯಯ ಸಾಧಿಸಲು ಪ್ರಯಾಸ ಪಡುತ್ತಿದ್ದು, ಇಂಧನದ ಆಮದು ಪ್ರಮಾಣ ಹೆಚ್ಚಳ ಕಂಡಿದೆ. ಇಂಧನವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲೆಂದೇ ಕೋಟ್ಯಂತರ ರು. ವ್ಯಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇಂಧನ ಮಿತ ವ್ಯಯ ಸಾಧಿಸಲು ಪರ್ಯಾಯ ಮಾರ್ಗೋಪಾಯಗಳ ಬಳಕೆಗೆ ಉದ್ಯಮಿಗಳು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ನೋಂದಣಿ ಪ್ರಕ್ರಿಯೆ: ಕಾರ್ಖಾನೆಗಳ ಸುರಕ್ಷತೆ ಮತ್ತು ಆರೋಗ್ಯ ಕಾಪಾಡುವ ದೃಷ್ಟಿಯಿಂದ ಇಲಾಖೆಯು ಗುಣಮಟ್ಟದ ಬಾಯ್ಲರ್ಗಳ ಪೂರೈಕೆ ಮತ್ತು ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಿದೆ. ಆನ್ಲೈನ್ ಮೂಲಕ ನೋಂದಣಿ ಗೆ ಅವಕಾಶ ಕಲ್ಪಿಸಲಾಗಿದೆ. ಹಾಗೆಯೇ ಸರ್ಕಾರದ ಸಕಾಲ ಯೋಜನೆ ಅಡಿ ಇಲಾಖೆಯು ನೋಂದಣಿ ಪ್ರಕ್ರಿಯೆಯನ್ನು ಸೇರಿಸಿದ್ದು, ನಿಗದಿತ ಕಾಲಮಿತಿಯಲ್ಲಿ ನೋಂದಣಿ ಪತ್ರ ಉದ್ಯಮಿಗಳಿಗೆ ದೊರೆಯುವಲ್ಲಿ ನೆರವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕಾರ್ಖಾನೆಗಳು, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಎಸ್.ಬಿ. ಬಿರಾದಾರ್, ಕೆ.ವಿ. ಚಂದ್ರಮೌಳಿ, ಎಂ.ಎಚ್. ಚಿಕ್ಕಮುನಿಯಪ್ಪ, ಜಿಲ್ಲಾ ಪರಿಸರ ಇಲಾಖೆಯ ಆರ್.ಪದ್ಮನಾಭನ್ ಸೇರಿ ಅನೇಕರಿದ್ದರು.
ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಅಕ್ಕಿ ಗಿರಣಿಗಳ ಮಾಲೀಕರು ಹಾಗೂ ಕಾರ್ಮಿಕರು ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

