ಕಾರ್ಮಿಕರ ಮರೆತ ಕೇಂದ್ರ ಸರ್ಕಾರ; ಸಿಂಘ್ವಿ ಕಿಡಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಆ.2
ಕೇಂದ್ರ ಸರ್ಕಾರ ಕಾರ್ಮಿಕರ ಹೋರಾಟ ಹತ್ತಿಕ್ಕುವ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ(ಟಿಯುಸಿಐ) ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಜಯ್ ಸಿಂಘ್ವಿ ಆರೋಪಿಸಿದರು.
ತಾಲೂಕಿನ ಹಟ್ಟಿಯಲ್ಲಿ ಟಿಯುಸಿಐ ಸಂಘಟನೆಯಿಂದ ಆಯೋಜಿಸಿದ್ದ ಜಿಲ್ಲಾ ಕಾರ್ಮಿಕರ ಸಮಾವೇಶ ಮತ್ತು ಹಟ್ಟಿ ಚಿನ್ನದಗಣಿಯ 498 ಜನ ಹಂಗಾಮಿ ಕಾರ್ಮಿಕರ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆರ್ಥಿಕ ಕುಸಿತಕ್ಕೆ ವಿದೇಶಿ ಬಂಡವಾಳ ಕಾರಣ: ಕೇಂದ್ರ ಸರ್ಕಾರವು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಹೆಚ್ಚಿಸಿದ್ದರಿಂದಲೇ ದೇಶದ ಆರ್ಥಿಕ ಪರಿಸ್ಥಿತಿ ತಳಕಚ್ಚುತ್ತಿದೆ. ಅದರಿಂದ ಬಡ ವರ್ಗದವರು ಸಂಕಷ್ಟದಲ್ಲಿಯೇ ಬದುಕು ಕಳೆಯುವಂತಾಗಿದೆ. ಕಾರ್ಮಿಕರ ಬದುಕಿಗೆ ಭದ್ರತೆಯಿಲ್ಲವಾಗಿದೆ ಎಂದು ಟೀಕಿಸಿದರು.
ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಮಾತನಾಡಿ, ಹಟ್ಟಿ ಚಿನ್ನದಗಣಿ ಆಡಳಿತಕ್ಕೆ ಕಾರ್ಮಿಕರ ಕಲ್ಯಾಣದ ಬಗ್ಗೆ ಕಾಳಜಿಯಿಲ್ಲವಾಗಿದೆ. ಸಾವಿರಾರು ಕಾರ್ಮಿಕರು ದಿನವೂ ಸಾಕಷ್ಟು ಪರಿಶ್ರಮ ವಹಿಸಿ ಚಿನ್ನದ ಉತ್ಪಾದನೆ ಮಾಡುತ್ತಿದ್ದು, ಅಂಥ ಕಾರ್ಮಿಕರ ಪರ ಸಮಾವೇಶ ಆಯೋಜನೆಯನ್ನು ತಡೆಯಲು ಆಡಳಿತ ಪ್ರಯತ್ನಿಸಿತೆಂದು ಆರೋಪಿಸಿದರು.
ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿಲ್ಲ: ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಹಟ್ಟಿ ಗಣಿ ಕಾರ್ಮಿಕರು ಪಾಲ್ಗೊಳ್ಳದಂತೆ ತಡೆಯುವ ನಿಟ್ಟಿನಲ್ಲಿ ಗಣಿ ಆಡಳಿತವು ಬಹುತೇಕ ಕಾರ್ಮಿಕರನ್ನು ಸೇವೆಗೆ ತಪ್ಪದೇ ಹಾಜರಾಗುವಂತೆ ಎಚ್ಚರಿಕೆ ನೀಡಿದೆ. ಕಂಪನಿಯಲ್ಲಿ ದುಡಿಯುವ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಿಲ್ಲ. ಗಣಿ ಕಂಪನಿಯ ಅಧಿಕಾರಿಗಳ ಬೆಂಬಲಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ದೂರಿದ ಅವರು, ಕಾನೂನಿನಂತೆ ವಿವಿಧ 19 ಭತ್ಯೆಗಳನ್ನು ಒದಗಿಸಬೇಕೆಂದರು.
ಸಮಾವೇಶದಲ್ಲಿ ಟಿಯುಸಿಐನ ರಾಜ್ಯ ಕಾರ್ಯದರ್ಶಿ ಚಿನ್ನಪ್ಪ ಕೊಟ್ರಿಕಿ, ಜಿಲ್ಲಾ ಕಾರ್ಯದರ್ಶಿ ಎನ್.ನಾಗರಾಜ, ಗುಲ್ಬರ್ಗ ಹೈಕೋರ್ಟಿನ ನ್ಯಾಯವಾದಿಗಳಾದ ಅರುಣಕುಮಾರ, ಮೋಹನ ಹಿಪ್ಪರಗಿ, ಟಿಯುಸಿಐ ಮುಖಂಡರಾದ ಡಿ.ಕೆ. ಲಿಂಗಸ್ಗೂರು, ಸೂರ್ಯಕಾಂತ, ನಾಗಲಿಂಗಯ್ಯ ಸ್ವಾಮಿ, ವಕೀಲರ ಸಂಘದ ಅಧ್ಯಕ್ಷ ಮುದುಕಪ್ಪ ನೀರಲಕೇರಿ, ರಾಯಚೂರು ಓಪೆಕ್ ಆಸ್ಪತ್ರೆ ಹಂಗಾಮಿ ಕಾರ್ಮಿಕ ಸಂಘದ ಮುಖಂಡ ಮಲ್ಲೇಶ, ಕೃಷಿ ಮಹಾವಿದ್ಯಾಲಯ ಹಂಗಾಮಿ ಕಾರ್ಮಿಕ ಸಂಘದ ಬಸವರಾಜ ಯಾದವ್, ಬಸವರಾಜ ಹೊಸಳ್ಳಿ, ರವಿಕುಮಾರ ದಾಸ, ಉಮೇಶ, ರಮೇಶ ಆನ್ವರಿ, ಗೋಪಾಲದಾಸ, ಇಂದಿರಾಬಾಯಿ, ಬಸವರಾಜ ನಗನೂರು ಸೇರಿ ಅನೇಕರಿದ್ದರು.
ಸಮಾವೇಶಕ್ಕೂ ಮುನ್ನ ಹಟ್ಟಿ ಪಟ್ಟಣದಲ್ಲಿ ತೆರೆದ ವಾಹನದಲ್ಲಿ ಮುಖಂಡರಾದ ಸಂಜಯ್ ಸಿಂಘ್ವಿ ಮತ್ತು ಆರ್.ಮಾನಸಯ್ಯ ಮತ್ತಿತರರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

