ರಾಯಚೂರು

ಎಂಪಿಸಿಎಲ್ ಕಾರ್ಖಾನೆ ಪುನಾರಂಭಿಸಿ

Published On :

ರಾಯಚೂರು: ಕಾನೂನು ಬಾಹಿರವಾಗಿ ಮುಚ್ಚಿರುವ ಮೈಸೂರು ಪೆಟ್ರೋಕೆಮಿಕಲ್ಸ್ ಕಾರ್ಖಾನೆಯ ಆಡಳಿತ ಮಂಡಳಿಗೆ ಚುರುಕು ಮುಟ್ಟಿಸುವ ಮೂಲಕ ಕಾರ್ಮಿಕರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು. ಇಲ್ಲವೇ ಸರ್ಕಾರವೇ ಕಂಪನಿಯನ್ನು ಸ್ವಾಧೀನಕ್ಕೆ ಪಡೆದು ಪುನಾರಂಭಿಸುವಂತೆ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಶೇಕ್ಷಾ ಖಾದ್ರಿ ಒತ್ತಾಯಿಸಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 37 ವರ್ಷಗಳಿಂದ ಲಾಭದಲ್ಲಿದ್ದ ಎಂಪಿ ಸಿಎಲ್ ಕಂಪನಿಯನ್ನು ಕಾರ್ಮಿಕರಿಗೆ ಮುನ್ಸೂಚನೆ ನೀಡದೇ ಮುಚ್ಚಿರುವುದು ಕಾನೂನುಬಾಹಿರ ಕೃತ್ಯವಾಗಿದೆ. ಕಂಪನಿಯ ಆಡಳಿತ ಮಂಡಳಿಯು ನಷ್ಟದ ಕಾರಣ ನೀಡಿ ಸರ್ಕಾರ ಮತ್ತು ಕಾರ್ಮಿಕರನ್ನು ವಂಚಿಸುತ್ತಿದೆ ಎಂದು ದೂರಿದರು.
ತಪ್ಪು ಮಾಹಿತಿ: ಕಾರ್ಖಾನೆಯಲ್ಲಿ 113 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಆಡಳಿತ ಮಂಡಳಿಯು ಕೇವಲ 86 ಜನ ಕಾರ್ಮಿಕರಿದ್ದರು ಎಂಬ ತಪ್ಪು ಮಾಹಿತಿ ನೀಡುತ್ತಿದೆ. ಅಷ್ಟೇ ಅಲ್ಲ ಕಂಪನಿ ಮುಚ್ಚಿದ್ದರಿಂದ ಕಾರ್ಮಿಕರಿಗೆ ಪರಿಹಾರ ಸೌಲಭ್ಯ ಒದಗಿಸಲಾಗುತ್ತದೆ. ಆದರೆ ಕಂಪನಿಯ ಪುನಾರಂಭ ಅಸಾಧ್ಯ ಎಂಬ ಮಾತು ಹೇಳುತ್ತಿರುವುದು ಕಂಪನಿಯ ಹಠಮಾರಿ ಧೋರಣೆ ಪ್ರದರ್ಶಿಸಿದೆ ಎಂದು ಟೀಕಿಸಿದರು.
ಕಾರ್ಮಿಕರ ವಿರೋಧಿ ನೀತಿ: ಕಂಪನಿಯ ಆಡಳಿತ ಮಂಡಳಿಯ ಪ್ರಮುಖರು, ಕಾರ್ಮಿಕರು ಹಾಗೂ ಜಿಲ್ಲಾಡಳಿತ ಮತ್ತು ಕಾರ್ಮಿಕರ ಆಯುಕ್ತರ ಸಮ್ಮುಖದಲ್ಲಿ ಈಗಾಗಲೇ ಮೂರು ಸಂಧಾನ ಸಭೆಗಳು ನಡೆದಿವೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕಂಪನಿಯ ಆಡಳಿತವು ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಕಂಪನಿಯೊಂದಿಗೆ ನಡೆದ ಸಭೆಗಳಲ್ಲಿ ಕಾರ್ಮಿಕರು ಪುನಾರಂಭ ಮತ್ತು ಕಾರ್ಮಿಕರಿಗೆ ಪರಿಹಾರ ಸೌಲಭ್ಯ ಒದಗಿಸಲು ಬೇಡಿಕೆಯಿಟ್ಟಿದ್ದರೂ ಆಡಳಿತ ಮಾತ್ರ ಅದಕ್ಕೆ ಬೆಲೆ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕಂಪನಿಯು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ಮುಂದುವರಿಸಿದರೆ, ರಾಜ್ಯ ಸರ್ಕಾರವೇ ಕಂಪನಿಯ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಕಾರ್ಖಾನೆಯನ್ನು ನಿರ್ವಹಿಸಬೇಕೆಂದು ಒತ್ತಾಯಿಸಿದರು.
ಸಿಎಂ ಬಳಿಯ ಭರವಸೆ: ಕಾರ್ಮಿಕರು ಎದುರಿಸುತ್ತಿರುವ ಈ ರೀತಿಯ ಸಮಸ್ಯೆ ಪರಿಹಾರಕ್ಕೆ ಈಗಾಗಲೇ ಜಿಲ್ಲೆಯ ಶಾಸಕರಿಗೆ ಮನವಿ ಮಾಡಲಾಗಿದೆ. ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಸಂಪರ್ಕಿಸಿ ಸಮಸ್ಯೆಯ ಕುರಿತು ಮನವಿ ಮಾಡಿದ್ದು, ಅವರು ಜಿಲ್ಲೆಯ ಎಲ್ಲ ಶಾಸಕರ ನಿಯೋಗವನ್ನು ಸಿಎಂ ಸಿದ್ದರಾಮಯ್ಯ ಅವರ ಬಳಿ ಕೊಂಡೊಯ್ಯುವ ಭರವಸೆ ನೀಡಿದ್ದಾರೆಂದು ಹೇಳಿದರು.
ನ್ಯಾಯಯುತ ಸೌಲಭ್ಯಗಳ ವಿಳಂಬ: ಆಡಳಿತ ಮಂಡಳಿಯು ಕಾರ್ಮಿಕರನ್ನು ವಂಚಿಸಿ ದುಡಿಸಿಕೊಂಡಿದ್ದು, ಇದರಿಂದಾಗಿ ಕಾರ್ಮಿಕರಿಗೆ ನ್ಯಾಯಯುತ ಸೌಲಭ್ಯಗಳು ದೊರೆಯುವುದು ವಿಳಂಬವಾಗಲಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂಡಲೇ ಎಂಪಿಸಿಎಲ್ ಕಾಲನಿಯಲ್ಲಿರುವ ಕಾರ್ಮಿಕರಿಗೆ ಮುಚ್ಚಿರುವ ಕಾರ್ಖಾನೆಯ 108 ಎಕರೆ ಪ್ರದೇಶದಲ್ಲಿ ನಿವೇಶನಗಳನ್ನು ಕಾರ್ಮಿಕರಿಗೆ ಒದಗಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಮತ್ತು ಎಂಪಿಸಿಎಲ್ ನೌಕರರ ಸಂಘದ ಪ್ರಮುಖರಾದ ಎಚ್. ಪದ್ಮಾ, ಡಿ.ಎಸ್. ಶರಣಬಸವ, ಕೆ.ಜಿ. ವೀರೇಶ್, ಭೀಮಣ್ಣ, ಅಬ್ದುಲ್ ಗನಿ, ಸುರೇಶ್, ಮರದಿಸಾಬ್, ಅಮರೇಶ, ಬಾಷುಮಿಯಾ ಶರಣಗೌಡ, ಪ್ರವೀಣ ರೆಡ್ಡಿ, ಸೂಗನಗೌಡ ನಾಗೇಂದ್ರ ಸೇರಿ ಅನೇಕ ಕಾರ್ಮಿಕ ನಾಯಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.