19ರಂದು ಕಾಂಗ್ರೆಸ್ ಕಚೇರಿ ಮುಂದೆ ಧರಣಿ
ಕನ್ನಡಪ್ರಭ ವಾರ್ತೆ, ರಾಯಚೂರು, ಸೆ.4
ನಾರಾಯಣಪುರ ಬಲದಂಡೆ ಕಾಲುವೆ 95ರಿಂದ 157 ಕಿಮೀವರೆಗೆ ವಿಸ್ತರಿಸುವ ಕುರಿತು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಒತ್ತಾಯಿಸಿ ಸೆ. 19ರಂದು ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಮುಂದೆ ಜನ ಸಂಗ್ರಾಮ ಪರಿಷತ್ ರಾಜ್ಯ ಸಂಚಾಲಕ ರಾಘವೇಂದ್ರ ಕುಷ್ಟಗಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಕುರಿತಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ ಅವರು ನಿಯೋಗ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಅಲ್ಲದೆ ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮತ್ತು ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಅವರ ನಿವಾಸದ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದರು.
ಸರ್ಕಾರ ಬದ್ಧತೆ ಪ್ರದರ್ಶಿಸಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರ ಹಗರಣಗಳ ಆರೋಪ ಮತ್ತು ಪರಸ್ಪರ ಕಚ್ಚಾಟದಿಂದ ರೋಸಿ ಹೋದ ಜನತೆ ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ನಾರಾಯಣಪುರ ಬಲದಂಡೆ ಕಾಲುವೆ ಕೇವಲ ರಾಜಕೀಯ ಘೋಷಣೆಯಾಗದೆ ಜನತೆಗೆ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ನೀರಾವರಿ ಯೋಜನೆಗಳು ಹಾಗೂ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಬದ್ಧತೆ ಪ್ರದರ್ಶಿಸಬೇಕಿದೆ.
ಅಂದಿನ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡರು ಅಂದಿನ ಸ್ಪೀಕರ್ ಆಗಿದ್ದ ಎಂ.ಎಸ್. ಪಾಟೀಲರ ಒತ್ತಾಯದ ಮೇರೆಗೆ ಕೊಟ್ಟ ಮಾತಿನಂತೆ ಕಾಲುವೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ 17 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದ್ಯತೆ ಮೇರೆಗೆ ಮೊದಲು ಬಲದಂಡೆ ಕಾಲುವೆ ವಿಸ್ತರಣೆಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪಕ್ಷಭೇದ ಮರೆತು ಹೋರಾಡಬೇಕು: ಕೃಷ್ಣಾ ನ್ಯಾಯಾಧಿಕರಣದಿಂದ ನೀರಿನ ಬಳಕೆಗೆ ತೊಂದರೆ ಇರುವುದಿಲ್ಲ. ಆಲಮಟ್ಟಿ ಜಲಾಶಯದ ಎತ್ತರಕ್ಕೆ ಸರ್ಕಾರ ನೀಡಿರುವ ಆದ್ಯತೆಯಂತೆ ಎನ್ಆರ್ಬಿಸಿ ವಿಸ್ತರಣೆಗೂ ಆದ್ಯತೆ ನೀಡಬೇಕು. ಈ ಕುರಿತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎ.ವಸಂತಕುಮಾರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ಜಿಲ್ಲೆಯ ಎಲ್ಲ ಶಾಸಕರ ಹಾಗೂ ಪಕ್ಷದ ಮುಖಂಡರ ನಿಯೋಗ ತೆರಳಿ ಕಾಲುವೆ ವಿಸ್ತರಣೆಗೆ ಒತ್ತಡ ಹೇರಬೇಕು. ಅಲ್ಲದೆ ಎಲ್ಲ ರಾಜಕೀಯ ಪಕ್ಷಗಳು ರಾಜಕೀಯ ಬದಿಗಿಟ್ಟು ಬಲದಂಡೆ ಕಾಲುವೆ ವಿಸ್ತರಣೆಗೆ ಹೋರಾಟಕ್ಕೆ ಮುಂದಾಗಬೇಕು.
ಸಿಎಂ ನುಡಿದಂತೆ ನಡೆಯಲಿ: ಕೆಪಿಸಿಸಿ ಕಾರ್ಯದರ್ಶಿ ಎನ್.ಎಸ್. ಭೋಸರಾಜ ಅವರು ಪ್ರತಿಪಕ್ಷದಲ್ಲಿದ್ದಾಗ ನೀರಾವರಿ ಯೋಜನೆಗಳ ಜಾರಿಗೆ ತೋರಿದ್ದ ಕಾಳಜಿಯನ್ನು ತಮ್ಮದೇ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ತೋರುತ್ತಿಲ್ಲ. ಜಿಲ್ಲೆಯಲ್ಲಿ ಬಾಕಿ ಉಳಿದ ನೀರಾವರಿ ಯೋಜನೆಗಳ ಜಾರಿಗೆ ಅವರು ಗಮನಹರಿಬೇಕಿದೆ. ಮುಖ್ಯಮಂತ್ರಿಗಳು ಇತ್ತೀಚೆಗೆ ಜಿಲ್ಲೆಯ ಜೇಗರಕಲ್ ಗ್ರಾಮಕ್ಕೆ ಹಾಗೂ ಸಿಂಧನೂರಿಗೆ ಆಗಮಿಸಿದ ಸಂದರ್ಭದಲ್ಲಿ ಕಾಲುವೆ ವಿಸ್ತರಣೆಗೆ ಆದ್ಯತೆ ನೀಡುವುದಾಗಿ ಹೇಳಿಕೆ ನೀಡಿ ರೈತರಲ್ಲಿ ಹರ್ಷ ಮೂಡಿಸಿದ್ದರು.
ಎಲ್ಲ ರಾಜಕೀಯ ಗಣ್ಯರು ಪಕ್ಷಬೇಧ ಮರೆತು ಹೈ.ಕ. ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಸಂವಿಧಾನದ 371(ಜೆ)ನೇ ಕಲಂ ತಿದ್ದುಪಡಿ ಜಾರಿಗೆ ಹೋರಾಡಿದಂತೆ ಎನ್ಆರ್ಬಿಸಿ ಕಾಲುವೆ ವಿಸ್ತರಣೆಗೆ ಹೋರಾಡುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಕರೆ ನೀಡಿದರು.
ಪರಿಷತ್ ಸದಸ್ಯರಾದ ಬಿ.ಬಸವರಾಜ, ವೆಂಕಟೇಶ ಯಾದವ, ಅಕ್ಬರ್ಸಾಬ ನಾಗುಂಡಿ, ಬಂಡೆಪ್ಪಗೌಡ, ಅಯ್ಯರೆಡ್ಡಿ, ಪರಪ್ಪ ನಾಗೋಲಿ ಸೇರಿದಂತೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

