ಚಿನ್ನದ ಆಮದು ತಡೆಗೆ ಕ್ರಮ; ಕೇಂದ್ರಕ್ಕೆ ಪತ್ರ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.8
ದೇಶದ ರುಪಾಯಿ ಮೌಲ್ಯ ಕುಸಿತ ತಡೆಗೆ ಚಿನ್ನದ ಆಮದು ತಡೆಯಬೇಕು. ದೇಶದ ನಿವಾಸಿಗಳಲ್ಲಿರುವ ಚಿನ್ನದ ಪ್ರಮಾಣವನ್ನೂ ಮೂರು ತಿಂಗಳಲ್ಲಿ ಬಹಿರಂಗಪಡಿಸುವಂತೆ ಆದೇಶ ಹೊರಡಿಸಿ ಅಂಥ ಚಿನ್ನದ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತೆ ಕೇಂದ್ರ ಅರ್ಥ ಸಚಿವ ಪಿ.ಚಿದಂಬರಂ ಅವರಿಗೆ ಪತ್ರ ಬರೆದಿರುವುದಾಗಿ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶವು ಆರ್ಥಿಕ ಸಂಕಷ್ಟದ ಸ್ಥಿತಿಯಲ್ಲಿದೆ. ಅದಕ್ಕೆ ಕೇಂದ್ರ ಸರ್ಕಾರ ಹೊಣೆಯಲ್ಲ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಏರಿಳಿತವೇ ಕಾರಣವಾಗಿದೆ. ಕೇಂದ್ರ ಸರ್ಕಾರ ಚಿನ್ನ ಆಮದಿಗೆ ವ್ಯಯಿಸುತ್ತಿರುವ ಹಣವನ್ನು ಕಡಿತಗೊಳಿಸುವುದು ಅವಶ್ಯಕ ಎಂದರು.
ಸಿದ್ದು ಪೂರ್ಣಾವಧಿ ಸಿಎಂ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರ್ ಟೇಕರ್ ಸಿಎಂ ಅಲ್ಲ. ಅವರು ಪೂರ್ಣಾವಧಿಗೆ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಸಮರ್ಪಕ ಆಡಳಿತ, ಭ್ರಷ್ಟಾಚಾರ ಮುಕ್ತ, ಅಕ್ರಮಗಳಿಂದ ಹೊರತಾದ ಹಾಗೂ ಜನಪರ ಯೋಜನೆಗಳ ಮೂಲಕ ಸರ್ಕಾರ ಜನಮನ್ನಣೆ ಗಳಿಸುವ ಕಾರ್ಯ ಮಾಡುತ್ತಿದೆ. ಮುಂದೆಯೂ ಮಾಡಲಿದೆ ಎಂದು ಹೇಳಿದರು.
ಅಹಿಂದ ಬಲಪಡಿಸಲು ರಾಜ್ಯಾದ್ಯಂತ ಪ್ರವಾಸ: ರಾಜ್ಯದಲ್ಲಿ ಇದುವರೆಗೆ ರಾಜಕೀಯ ಕೆಲಸದ ಒತ್ತಡದಲ್ಲಿದ್ದ ತಾವು ಮುಂದಿನ ದಿನಗಳಲ್ಲಿ ಅಹಿಂದ ಸಂಘಟನೆಯನ್ನು ಬಲಪಡಿಸಲು ಯೋಜಿಸಿದ್ದು ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಉದ್ದೇಶವಿರಿಸಿಕೊಂಡಿದ್ದಾಗಿ ತಿಳಿಸಿ, ಸಿಎಂ ಸಿದ್ದರಾಮಯ್ಯ ಅವರು ಅಹಿಂದ ಸ್ಥಾಪಿಸಿದ್ದರು. ಆದರೆ ಅವರು ಸದ್ಯ ಸಿಎಂ ಹುದ್ದೆಯಲ್ಲಿದ್ದು ಬಿಡುವಿಲ್ಲದ ಕೆಲಸಗಳ ಕಾರಣಕ್ಕೆ ತಾವೇ ಅಹಿಂದ ಬಲಪಡಿಸಲು ನಿರ್ಧರಿಸಿದ್ದಾಗಿ ಹೇಳಿದರು.
ಕೇಂದ್ರ ಸರ್ಕಾರ ಸಾಚಾರ್ ಕಮಿಟಿ ವರದಿ ಶಿಫಾರಸು ಜಾರಿಯಲ್ಲಿ ನಿಧಾನಗತಿಯನ್ನು ಅನುಸರಿಸುತ್ತಿರುವುದು ವಾಸ್ತವ. ಆದರೆ ಈ ಕುರಿತು ಅನೇಕ ಸಂದರ್ಭದಲ್ಲಿ ಕೇಂದ್ರದ ನಾಯಕರ ಗಮನ ಸೆಳೆದಿದ್ದಾಗಿ ತಿಳಿಸಿದ ಅವರು, ಬಿಜೆಪಿ ಮತೀಯವಾದಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಗೆ ಹೆಸರು ಸೂಚಿಸಲು ಮುಂದಾಗಿರುವುದು ಆ ಪಕ್ಷಕ್ಕೆ ಸದ್ಯ ಜಾತಿವಾದವೇ ಬಂಡವಾಳ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಟೀಕಿಸಿದರು.
ಮೋದಿಗಿಂತ ಆಡ್ವಾಣಿ ಬೆಸ್ಟ್: ನರೇಂದ್ರ ಮೋದಿಗಿಂತ ಬಿಜೆಪಿಯಲ್ಲಿ ಎಲ್.ಕೆ. ಆಡ್ವಾಣಿ ಪ್ರಧಾನಿ ಹುದ್ದೆಗೆ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಾವು ಆಡ್ವಾಣಿ ಅವರೊಂದಿಗೆ ಕಾರಾಗೃಹದಲ್ಲಿ ಕಾಲ ಕಳೆದ ತಾವು ಆಡ್ವಾಣಿಯವರ ಬಗ್ಗೆ ಅರಿತಿದ್ದು, ರಾಷ್ಟ್ರೀಯ ಮನೋಭಾವನೆ ಆಡ್ವಾಣಿಗಿದೆ ಎಂದು ಹೇಳಿದರು.
ರಾಹುಲ್ಗೆ ಮೋದಿ ಸರಿಸಾಟಿಯಲ್ಲ: ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿಯ ನರೇಂದ್ರ ಮೋದಿ ಅವರ ಮಧ್ಯೆ ಪ್ರಧಾನಿ ಹುದ್ದೆಗೆ ಸೂಕ್ತ ಯಾರೆಂಬುದರ ಬಗ್ಗೆ ಚರ್ಚೆ ನಡೆದಿದೆ. ಆದರೆ ಹೀಗೆ ಹೋಲಿಕೆ ಮಾಡುವುದೇ ತಪ್ಪಾದೀತು. ರಾಹುಲ್ಗೆ ಮೋದಿ ಸರಿಸಾಟಿಯಲ್ಲ. ಮೋದಿ ಒಬ್ಬ ಕೋಮುವಾದಿಯಾಗಿದ್ದಾರೆಂದು ಆರೋಪಿಸಿದರು.
ಗುಜರಾತ್ನ ಗೋಧ್ರಾ ಹತ್ಯಾಂಕಾಂಡದ ತನಿಖೆಯನ್ನು ಚುರುಕುಗೊಳಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕಿದೆ. ಆ ಮೂಲಕ ವಾಸ್ತವಾಂಶ ಬಯಲು ಮಾಡಬೇಕು. ಮತೀಯವಾದಕ್ಕೆ ಗುಜರಾಜ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ನೋಬೆಲ್ ಪ್ರಶಸ್ತಿ ಕೊಟ್ಟರೂ ಕಡಿಮೆಯೇ ಎಂದು ಲೇವಡಿ ಮಾಡಿದರು.
ಗುರಿ ಈಡೇರಿದೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನತೆಗೆ ಉತ್ತಮ ಆಡಳಿತ ನೀಡುತ್ತಿದೆ. ಸರ್ವರಿಗೂ ಸಮಬಾಳು, ಸಮಪಾಲು ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿದೆ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನು ಕಾಣುವುದು ತಮ್ಮ ಜೀವನದ ಪರಮ ಗುರಿಯಾಗಿತ್ತು. ಅದೀಗ ಈಡೇರಿದೆ. ಸಿದ್ದರಾಮಯ್ಯ ಅವರೂ ಎಲ್ಲರ ನಿರೀಕ್ಷೆಯಂತೆ ಆಡಳಿತ ನಡೆಸುತ್ತಿದ್ದಾರೆಂದು ಹೇಳಿದರು.
ಕಾಂಗ್ರೆಸ್ ನಾಯಕರಾದ ಬಷೀರುದ್ದೀನ್, ಅಸ್ಲಂಪಾಷಾ, ರವೀಂದ್ರ ಜಲ್ದಾರ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

