ರಾಯಚೂರು

ಕೊಚ್ಚೆ ರಸ್ತೆಗಳ ದುರಸ್ತಿಗೆ ಆಗ್ರಹ: ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ , ರಾಯಚೂರು , ಸೆ.21
ನಗರದಲ್ಲಿ ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ರಾಯಚೂರು ಸ್ವಚ್ಛಗೊಳಿಸಿ, ಹೋರಾಟ ಸಮಿತಿ, ನಿಜಲಿಂಗಪ್ಪ ನಗರ ನಾಗರಿಕ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗಳ ನಿವಾಸಕ್ಕೆ ಮನವಿ ಸಲ್ಲಿಸಲು ಶನಿವಾರ ತೆರಳಿದ ವೇಳೆ ವಾಗ್ವಾದ ನಡೆದು ದಿಢೀರ್ ರಸ್ತೆ ತಡೆಗೆ ಮುಂದಾದ ಪ್ರಸಂಗ ನಡೆಯಿತು.
ನಗರದ ನಿಜಲಿಂಗಪ್ಪ ಕಾಲನಿಯಲ್ಲಿರುವ ಜಿಲ್ಲಾಧಿಕಾರಿಗಳ ನಿವಾಸಕ್ಕೆ ಮನವಿ ಸಲ್ಲಿಸಲು ಶನಿವಾರ ಬೆಳಗ್ಗೆ ಸಂಘಟನೆಗಳ ಕಾರ್ಯಕರ್ತರು, ಪ್ರಮುಖರು ತೆರಳಿದ ವೇಳೆ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ನಿರಾಕರಿಸಿ ನಗರದಲ್ಲಿನ ರಸ್ತೆಗಳ ದುರಸ್ತಿಗೆ ಈಗಾಗಲೇ ಅನುದಾನ ಬಿಡುಗಡೆಗೊಳಿಸಲಾಗಿದೆ. ನಗರಸಭೆ ಸದಸ್ಯರನ್ನು ದುರಸ್ತಿಗೆ ಮುಂದಾಗುವಂತೆ ಪ್ರಶ್ನಿಸುವಂತೆ ಸೂಚಿಸಿದ್ದು, ಹೋರಾಟಗಾರರನ್ನು ಕೆರಳಿಸಿತು.
ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ನಿರಾಕರಿಸಿದ್ದು ಸರಿಯಲ್ಲ. ಹೋರಾಟಗಾರರಿಗೆ ನಿವಾಸದ ಬಳಿ ಮನವಿ ಸಲ್ಲಿಸಲು ಆಗಮಿಸದಂತೆ ತಾಕೀತು ಮಾಡಿದ್ದಾರೆಂದು ಆರೋಪಿಸಿ ಹೋರಾಟಗಾರರು ಜಿಲ್ಲಾಧಿಕಾರಿಗಳ ನಿವಾಸಿದ ಮುಂದೆ ರಸ್ತೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಸಂಚಾರಕ್ಕೆ ಅಯೋಗ್ಯ: ಇದರಿಂದಾಗಿ ಜಿಲ್ಲಾಧಿಕಾರಿಗಳ ನಿವಾಸದ ಮುಂದಿನ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ನಗರದಲ್ಲಿ ರಸ್ತೆಗಳು ಈಚೆಗೆ ಸುರಿದ ಮಳೆಗೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿವೆ. ಅದೇ ರೀತಿ ನಿಜಲಿಂಗಪ್ಪ ಕಾಲನಿಗೆ ನಗರವನ್ನು ಜೋಡಿಸುವ ಬಸವೇಶ್ವರ ವೃತ್ತದ ಬಳಿಯ. ನಿರ್ಮಾಣ ಹಂತದಲ್ಲಿರುವ ರೇಲ್ವೆ ಮೇಲ್ಸೇತುವೆ ಕಾಮಗಾರಿ ಚುರುಕುಗೊಳಿಸುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ನಗರಕ್ಕೆ ಲಿಂಗಸ್ಗೂರು ಕಡೆಯಿಂದ ಸಂಪರ್ಕ ಕಲ್ಪಿಸಲು ತಾತ್ಕಾಲಿಕವಾಗಿ ಮನ್ಸಲಾಪುರ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆ ರಸ್ತೆಯು ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ನಿಜಲಿಂಗಪ್ಪ ಕಾಲನಿಯಲ್ಲಿನ ರಸ್ತೆಗಳೂ ಸೇರಿ ನಗರದ ಬಹುತೇಕ ರಸ್ತೆಗಳು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳದ ಜಿಲ್ಲಾಡಳಿತ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಶಾಸಕ ಡಾ.ಶಿವರಾಜ್ ಪಾಟೀಲ್, ನಗರದಲ್ಲಿನ ರಸ್ತೆಗಳು ಹದಗೆಟ್ಟಿರುವುದು ಗಮನದಲ್ಲಿದ್ದು, ಸಮರ್ಪಕ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ಸಂಚಾಲಕ ಡಾ.ಚಂದ್ರಗಿರೀಶ್, ನಿಜಲಿಂಗಪ್ಪ ಕಾಲನಿ ನಾಗರಿಕ ಸಮಿತಿ ಅಧ್ಯಕ್ಷ ಬಸನಗೌಡ ಪಾಟೀಲ್, ಸ್ವಾತಂತ್ರ್ಯ ಹೋರಾಟಗಾರ ಅಮರೇಶ ಪಾಟೀಲ್, ಸದಾಶಿವಪ್ಪ ಪಾಟೀಲ್, ಚನ್ನಬಸವನಗೌಡ ಬಲ್ಲಟಗಿ, ಮಲ್ಲಣ್ಣ ಪಾಟೀಲ್, ವಿರಪನಗೌಡ ಇಟಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.