ಅತಿವೃಷ್ಟಿ; ಬೆಳೆಗಳ ನಿರ್ವಹಣೆ ಕುರಿತು ಸಲಹೆ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.23
ಜಿಲ್ಲಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆಗಳ ನಿರ್ವಹಣೆ ಕುರಿತು ರಾಯಚೂರು ಕೃಷಿ ವಿಶ್ವವಿದ್ಯಾಲಯ ರೈತರಿಗೆ ಸಲಹೆ ನೀಡಿದೆ.
ಹತ್ತಿಯಲ್ಲಿ ಎಲೆ ಕೆಂಪಾಗುವಿಕೆ, ಕಾಯಿ ಮೊಗ್ಗು ಉದುರುವುದು, ತೊಗರಿ ಗಿಡಗಳ ಒಣಗುವಿಕೆ, ಎಲೆಗಳು ಹಳದಿ ಬಣ್ಣಕ್ಕೆ ಬರುವುದು, ಹೂವು ಉದುರುವುದು ಕಂಡುಬರಲಿದೆ. ಇದಕ್ಕಾಗಿ ಹೊಲದಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ತೋಡಿ ನೀರು ಹೊರ ಹಾಕಬೇಕೆಂದು ತಿಳಿಸಿದೆ.
ಔಷಧ ಸಿಂಪಡಿಸಿ: ಕನಿಷ್ಠ 24 ಗಂಟೆ ನೀರು ನಿಂತರೆ ತೊಗರಿ, ಹತ್ತಿ ಮತ್ತು ಮೆಕ್ಕೆಜೋಳ ಬೆಳೆಗಳು ಒಣಗಳು ಪ್ರಾರಂಭಿಸುತ್ತವೆ. ಬೆಳೆಯನ್ನು ಬದುವುಗಳ ಸಾಲಿನ ಮೇಲೆ ಬಿತ್ತನೆ ಮಾಡಿದ್ದರೆ ಪ್ರತಿಕೂಲ ಪರಿಣಾಮ ಕಡಿಮೆ ಆಗುತ್ತದೆ. ಅತಿವೃಷ್ಟಿಯ ನಂತರದಲ್ಲಿ ಹತ್ತಿಯಲ್ಲಿ ಎಲೆಗಳು ಕೆಂಪಾಗುವುದನ್ನು ತಪ್ಪಿಸಲು 10 ಗ್ರಾಂ ಮೆಗ್ನೇಶಿಯಂ ಸಲ್ಫೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತದ ನಂತರ 10 ಗ್ರಾಂ 19-19-19 ರಸಗೊಬ್ಬರವನ್ನು ಒಂದು ಲೀಟರ್ ನೀರಿಗೆ ಬೆರೆಸಿ ಅಥವಾ 15 ಗ್ರಾಂ ಡಿಎಪಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ತಕ್ಷಣವೇ ಸಿಂಪಡಿಸಿದರೆ ಪೋಷಕಾಂಶಗಳು ಲಭ್ಯವಾಗಿ ಹಸಿರು ಬಣ್ಣಕ್ಕೆ ತಿರುಗುತ್ತವೆ ಎಂದು ಸಲಹೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕಾಯಿ ಬಿಡುವ ಹಂತದಲ್ಲಿ 3 ಬಾರಿ ಶೇಕಡಾ ಒಂದರ ಮೆಗ್ನೇಶಿಯಂ ಸಲ್ಫೇಟ್ ಮತ್ತು ಶೇಕಡಾ ಒಂದರ 19-19-19 ರಸಾಯನಿಕ ಗೊಬ್ಬರಗಳ ದ್ರಾವಣವನ್ನು ಸಿಂಪರಣೆ ಮಾಡಬೇಕು. ಎಕರೆಗೆ 10 ಕೆಜಿ ಮೇಲು ಗೊಬ್ಬರವಾಗಿ ಸಾರಜನಕ ನೀಡಬೇಕೆಂದು ವಿವಿ ತಿಳಿಸಿದೆ.
ಮೊಗ್ಗು, ಹೂವು ಉದುರುವುದಕ್ಕೆ..: ಮೋಡ ಕವಿದ ವಾತಾವರಣವಿರುವುದರಿಂದ ಹತ್ತಿ ಮತ್ತು ತೊಗರಿಯಲ್ಲಿ ಹೂವು ಮತ್ತು ಮೊಗ್ಗು ಉದುರುವುದು ತಡೆಗೆ ಪ್ರತಿ 18 ಲೀಟರ್ ನೀರಿಗೆ 4.5 ಮಿಲೀ ಪ್ಲಾಮೋಪಿಕ್ಸ್ ದ್ರಾವಣ ಬೆರೆಸಿ 2 ರಿಂದ 3 ಬಾರಿ ಸಿಂಪರಣೆ ಮಾಡಬೇಕು. ಪ್ರತಿ ಎಕರೆಗೆ 300ರಿಂದ 400 ಲೀಟರ್ ದ್ರಾವಣ ಬಳಕೆ ಮಾಡಬೇಕೆಂದು ಹೇಳಿದೆ.
ಬತ್ತದ ಬೆಳೆ 45 ದಿನಗಳದ್ದಾಗಿದ್ದು, ಸತತ ಮಳೆಯಿಂದ ಬೆಳವಣಿಗೆ ಕುಂಠಿತಗೊಂಡಿದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಸಾರಜನಕ, ರಂಜಕ, ಪೋಷಕಾಂಶಗಳ ಕೊರತೆಯಿದೆ ಎಂದು ಪತ್ತೆ ಮಾಡಿ, ಎಕರೆಗೆ ಮೇಲು ಗೊಬ್ಬರವಾಗಿ 25 ಕೆಜಿ ಸಾರಜನಕ, ಶೇ.0.5ರ ಯೂರಿಯಾ ದ್ರಾವಣವನ್ನು ಸಿಂಪರಣೆ ಮಾಡಬೇಕು. ಶೇ.1ರಂತೆ ಸತುವಿನ ಸಲ್ಫೇಟ್ ದ್ರಾವಣ ಸಿಂಪಡಿಸಬೇಕು. ಇದರಿಂದ ಹಳದಿ ಬಣ್ಣದ ಎಲೆಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ ಎಂದು ವಿವಿ ಹೇಳಿದೆ.
ಹೆಚ್ಚಿನ ಮಾಹಿತಿಗೆ ರಾಯಚೂರು ಕೃಷಿ ವಿವಿಯ ಸಂಶೋಧನಾ ನಿರ್ದೇಶಕ ಡಾ. ಬಿ.ಎಸ್. ಜನಗೌಡರ್ ಅವರನ್ನು ದೂ. 08532-220154ಕ್ಕೆ ಸಂಪರ್ಕಿಸಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

