ಚಹಾ ಹುಡುಗ ಪ್ರಧಾನಿಯಾದ್ರೆ ತಪ್ಪೇನು?
ಕ.ಪ್ರ. ವಾರ್ತೆ ಸಿಂಧನೂರು ಏ.2
ಗುಜರಾತ್ನಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ದೇಶವೇ ನಿಬ್ಬೆರಗಾಗುವ ರೀತಿಯಲ್ಲಿ ಅಭಿವೃದ್ಧಿಗೆ ಕಾರಣವಾಗಿರುವ ನರೇಂದ್ರ ಮೋದಿಯನ್ನು ದೇಶದ ಯುವಜನತೆ ಬೆಂಬಲಿಸುತ್ತಿದೆ. ಅವರಂಥ ಸಮರ್ಥ ನಾಯಕ ಕಾಂಗ್ರೆಸ್ನಲ್ಲಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಲೇವಡಿ ಮಾಡಿದರು.
ನಗರದ ಆರ್ಜಿಎಂ ಮೈದಾನದಲ್ಲಿ ಕೊಪ್ಪಳ ಲೋಕಸಭಾ ಚುನಾವಣೆ ಪ್ರಚಾರಾರ್ಥ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಗುಜರಾತ್ನಲ್ಲಿ ಮೋದಿಯವರ ತಾಯಿ ಮಗನನ್ನು ಕಡು ಬಡತನದಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ಬೆಳೆಸಿದಳು. ಅದೇ ಮಗ ರೇಲ್ವೆ ನಿಲ್ದಾಣದಲ್ಲಿ ಚಹಾ ಮಾರಿ ತನ್ನ ಬದುಕು ಕಟ್ಟಿಕೊಂಡ. ಇಂತಹ ಬಡ ಹುಡುಗ ಗುಜರಾತ್ ರಾಜ್ಯಕ್ಕೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಭಾವಿ ಪ್ರಧಾನಿಯಾಗುವ ಅರ್ಹತೆ ಪಡೆದುಕೊಂಡದ್ದು ಸಾಮಾನ್ಯ ಸಾಧನೆಯಲ್ಲ. ಆದರೆ ಇಂದು ಮುದ್ದೇಬಿಹಾಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೋದಿ ನಾಯಕತ್ವವನ್ನು ಹೀಯಾಳಿಸಿ ಮಾತನಾಡಿರುವುದು ಅವರ ಘನತೆಗೆ ಶೋಭೆಯಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯ ವಿರುದ್ಧ ಆಕ್ರೋಶ: ತಮ್ಮ ಭಾಷಣದುದ್ದಕ್ಕೂ ಸಿದ್ದರಾಮಯ್ಯರ ಹೇಳಿಕೆಯನ್ನೇ ಪ್ರಸ್ತಾಪಿಸಿದ ಯಡಿಯೂರಪ್ಪ, 'ಆಡ್ವಾಣಿ, ವಾಜಪೇಯಿ, ಜಸ್ವಂತಸಿಂಗ್ರಂತಹ ನಾಯಕರನ್ನು ಬಿಜೆಪಿ ವರಿಷ್ಠ ಮಂಡಳಿ ಮೂಲೆಗೆ ತಳ್ಳಿ ಕೋಮು ದಳ್ಳುರಿ ಹಬ್ಬಿಸಲು ಕಾರಣರಾಗಿರುವ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಹೊರಟಿದೆ' ಎಂದು ಸಿದ್ದರಾಮಯ್ಯ ಮಾತನಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಬಿಜೆಪಿ ಯೋಜನೆ ಕೈಬಿಟ್ಟದ್ದೇಕೆ?- ಸವಾಲು: ದೇವೇಗೌಡರ ಪಕ್ಷವನ್ನು ತಂದೆ- ಮಕ್ಕಳ ಪಕ್ಷ, ಕಾಂಗ್ರೆಸ್ ಆಡಳಿತವನ್ನು ವಂಶ ಪಾರಂಪರ್ಯದ ಆಡಳಿತವೆಂದು ಈ ಹಿಂದೆ ಸಿದ್ದರಾಮಯ್ಯ ಟೀಕಿಸಿದ್ದನ್ನು ಇಷ್ಟು ಬೇಗ ಮರೆತರೇ. ರಾಜ್ಯದಲ್ಲಿ 11 ತಿಂಗಳ ಆಡಳಿತ ನಡೆಸಿರುವ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ಯೋಜನೆಗಳನ್ನು ಕೈಬಿಟ್ಟು ರಾಜ್ಯದ ಜನತೆಗೆ ಮೋಸ ಮಾಡಿದ್ದಾರೆ. ಸಂಧ್ಯಾ ಸುರಕ್ಷಾ, ಭಾಗ್ಯಲಕ್ಷ್ಮೀ, ಬಡ ಮಕ್ಕಳಿಗೆ ಬೈಸಿಕಲ್, ಸಹಕಾರಿ ಸಂಘಗಳಲ್ಲಿ ಬಡ್ಡಿರಹಿತ ಸಾಲ, ಸುವರ್ಣ ಭೂಮಿ ಯೋಜನೆಗಳನ್ನು ಏಕೆ ಕೈಬಿಟ್ಟರು ಎಂದು ಬಹಿರಂಗವಾಗಿ ಉತ್ತರಿಸಲು ಯಡಿಯೂರಪ್ಪ ಸವಾಲು ಹಾಕಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರಾಷ್ಟ್ರೀಯ ಕೃಷಿ ನೀತಿ, ಬೆಳೆ ವಿಮೆ, ವಿದ್ಯುತ್ ಸಮಸ್ಯೆ ನಿವಾರಣೆ, ರೈತರಿಗೆ ಬಡ್ಡಿ ರಹಿತ ಬೆಳೆ ಸಾಲ, ಹತ್ತು ಕೋಟಿ ಯುವಕರಿಗೆ ಉದ್ಯೋಗ, ಸ್ವಿಸ್ ಬ್ಯಾಂಕಿನಲ್ಲಿರುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡಲು ಬಿಜೆಪಿ ಪಣತೊಟ್ಟಿರುವುದಾಗಿ ಹೇಳಿದರು.
ಮೋದಿ ಪ್ರಧಾನಿಯಾದ್ರೆ ದೇಶ ಅಭಿವೃದ್ಧಿ: ಕೊಪ್ಪಳ ಕ್ಷೇತ್ರದ ಅಭ್ಯರ್ಥಿ ಕರಡಿ ಸಂಗಣ್ಣ ಮಾತನಾಡಿ, ದೇಶದಲ್ಲಿ ಶೇ.62ರಷ್ಟು ಯುವಕರು ಮೋದಿಯ ಭಾಷಣಕ್ಕೆ ಮಾರು ಹೋಗಿದ್ದಾರೆ. ಗುಜರಾತ್ನಂತೆ ದೇಶ ಅಭಿವೃದ್ಧಿಯಾಗುವುದು ಸಂಶಯವಿಲ್ಲ. ಮೋದಿಯನ್ನು ಪ್ರಧಾನಿಯಾಗಿ ಮಾಡಬೇಕಾದರೆ ತಮ್ಮನ್ನು ಲೋಕಸಭೆಗೆ ಆರಿಸಿ ಎಂದು ಮನವಿ ಮಾಡಿದರು.
ಮಾಜಿ ಸಂಸದ ಕೆ.ವಿರುಪಾಕ್ಷಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಸನಗೌಡ ಬ್ಯಾಗವಾಟ, ಸೋಮಲಿಂಗಪ್ಪ, ವೀರೇಶ ಈಲ್ಲೂರು ಪಾಲ್ಗೊಂಡಿದ್ದರು.
ಸಿದ್ದರಾಮಯ್ಯ ಜಪ...
ಯಡಿಯೂರಪ್ಪ ಪ್ರಚಾರ ಭಾಷಣದ ಆರಂಭದಿಂದ ಅಂತ್ಯದವರೆಗೆ ಸಿದ್ದರಾಮಯ್ಯ ಅವರ ಜಪ ಮಾಡಿದ್ದು ವಿಶೇಷವಾಗಿತ್ತು. ಪ್ರತಿ ಮಾತಿನಲ್ಲೂ ಸಿದ್ದರಾಮಣ್ಣ, ಸಿದ್ದರಾಮಯ್ಯ ಎಂದು ಸಂಭೋದಿಸುತ್ತಲೇ ಮಾತನಾಡಿದ್ದು ಪ್ರೇಕ್ಷಕರ ನಿರಂತರ ಚಪ್ಪಾಳೆಗೆ ಕಾರಣವಾಯಿತು. ಬಿಎಸ್ವೈ ಆಗಮನದ ಹಿನ್ನೆಲೆಯಲ್ಲಿ ಕುಷ್ಟಗಿ ರಸ್ತೆಯ ಹೆಲಿಪ್ಯಾಡ್ ಸೇರಿದಂತೆ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು. ಗಾಂಧೀ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಹೆಲಿಕ್ಯಾಪ್ಟರ್ ಶಬ್ದ ಕೇಳಿಸುತ್ತಿದ್ದಂತೆ ಪಟಾಕಿ ಹಚ್ಚಿ ಸಂಭ್ರಮಿಸಿದರು. ಯಡಿಯೂರಪ್ಪನವರ ಭಾಷಣ ಮುಗಿದ ನಂತರ ವಾಹನಗಳ, ಪಾದಚಾರಿಗಳ ದಟ್ಟನೆಯಿಂದಾಗಿ ಸಂಚಾರ ಕೆಲಕಾಲ ಅಸ್ತವ್ಯಸ್ತವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

