ಓರೆಕೋರೆ ತಿದ್ದುವ ಸಾಹಿತ್ಯ ರಚಿಸಿ
ರಾಯಚೂರು: ಪ್ರಖರ ಚಳವಳಿಗಳಿಲ್ಲದ ಇಂದಿನ ಕಾಲಘಟ್ಟದಲ್ಲಿ ಸಾಹಿತ್ಯದ ಕುರಿತು ವಿಮರ್ಶಾತ್ಮಕ ದೃಷ್ಟಿಕೋನದ ಕೊರತೆ ಎದ್ದುಕಾಣುತ್ತಿದೆ. ಸಮಾಜದ ಓರೆಕೋರೆಗಳನ್ನು ತಿದ್ದುವಂಥ ಸಾಹಿತ್ಯ ರಚನೆಯ ಅವಶ್ಯಕತೆಯಿದೆ ಎಂದು ಕಥೆಗಾರ ಮಹಾಂತೇಶ್ ನವಲಕಲ್ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹೊಸ ತಲೆಮಾರಿನ ಕಥಾ ಸಾಹಿತ್ಯದ ಗ್ರಹಿಕೆ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಸ ತಲೆಮಾರಿನ ಸಾಹಿತಿಗಳಲ್ಲಿ ಸಾಹಿತ್ಯ ರಚನೆಯೆಡೆಗೆ ಪ್ರಬಲ ಶಕ್ತಿಯಿದೆ ಎಂದರು.
ವಿದ್ಯಾರ್ಥಿಗಳಿಗೆ ಸಾಹಿತ್ಯ ಪರಿಚಯ ಅಗತ್ಯ: ಪ್ರಬಲ ಶಕ್ತಿಯನ್ನು ಹೊಂದಿರುವ ಹೊಸ ತಲೆಮಾರಿನ ಸಾಹಿತಿಗಳು ನವೋದಯ, ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ ಕಾಲಘಟ್ಟ ದಾಟಿ ಶೂನ್ಯ ವಲಯದಲ್ಲಿರುವುದರಿಂದ ಸಾಹಿತ್ಯದಿಂದ ಧನಾತ್ಮಕ ಇಲ್ಲವೇ ಋಣಾತ್ಮಕ ವಿಚಾರ ಮೂಡುತ್ತವೆಂಬ ಆತಂಕ ಎದುರಾಗಿದೆ. ಹೊಸ ತಲೆಮಾರಿನವರಿಗೆ ಸಾಹಿತ್ಯದ ಬಗ್ಗೆಯೇ ಅಧ್ಯಯನ ತರಬೇತಿ ನೀಡುವಂಥ ಪರಿಸ್ಥಿತಿಯಿದೆ. ಸಾಹಿತ್ಯದ ಓದಿಗೆ ಪ್ರೋತ್ಸಾಹಿಸುವಂಥ ಪರಿಸರ ನಿರ್ಮಾಣವಾಗಬೇಕಿದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯದ ಪರಿಚಯ ಮಾಡಿಕೊಡುವ ಕೆಲಸ ಆಗಬೇಕೆಂದರು.
ರಷಿಯಾ ದೇಶದಲ್ಲಿ ಅಲ್ಲಿನ ಸಾಹಿತಿಗಳು ರಚಿಸಿದ ಕೃತಿಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಪರಿಚಯಿಸುವ ಕಾರ್ಯಕ್ರಮಗಳು ಒಂದು ಕಾಲಘಟ್ಟದಲ್ಲಿ ನಡೆಸಲಾಗುತ್ತಿತ್ತು. ಆ ಮೂಲಕ ರಷಿಯಾ ಸಾಹಿತ್ಯಿಕ ಪ್ರಗತಿ ಸಾಧಿಸಲು ಸಾಧ್ಯವಾಯಿತು. ಅಂಥ ಕಾರ್ಯಕ್ರಮಗಳು ನಮ್ಮಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ನಡೆಯುವಂತಾಗಬೇಕೆಂದರು.
ಇತಿಹಾಸದ ವಾಸ್ತವಗಳು ತೆರೆಮರೆಗೆ: ಇಂದಿನ ದಿನಮಾನದಲ್ಲಿ ಶಾಲಾ- ಕಾಲೇಜುಗಳಲ್ಲಿ ನಮ್ಮ ಇತಿಹಾಸ ಸಂಬಂಧಿ ವಿಚಾರಗಳ ವಾಸ್ತವಾಂಶ ಮರೆಮಾಚಲಾಗುತ್ತಿದೆ. ಹಂಗಿನ ಇತಿಹಾಸ ಬೋಧನೆಗೆ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಗತಕಾಲದಲ್ಲಿ ರಾಜರು ತಮ್ಮ ಮನಸಿಗೆ ಇಷ್ಟವಾಗುವಂತೆ ಸಾಹಿತ್ಯ ರಚಿಸಲು ಸೂಚಿಸುತ್ತಿದ್ದರು. ಅದಕ್ಕಾಗಿ ಅನೇಕ ರೀತಿಯ ಆಸೆ- ಆಮಿಷಗಳನ್ನೂ ಒಡ್ಡುತ್ತಿದ್ದರು. ಅದರಿಂದಾಗಿಯೇ ಇತಿಹಾಸದ ವಾಸ್ತವಗಳು ತೆರೆಮರೆಗೆ ಸರಿದಿವೆ ಎಂದರು.
ಇತಿಹಾಸದಲ್ಲಿರುವ ವಿವಿಧ ಅಂಶಗಳ ಹಿಂದಿನ ಸತ್ಯವನ್ನು ಅರಿಯದಿದ್ದಲ್ಲಿ ಅದು ಅಪಾಯ ಆಹ್ವಾನಿಸಿದಂತೆಯೇ ಸರಿ ಎಂದ ಅವರು, ಈ ದೇಶದ ಇತಿಹಾಸದಲ್ಲಿ ದಲಿತರು ಮತ್ತು ರೈತರನ್ನು ಕಡೆಗಣಿಸಲಾಗಿದೆ. ಕೃಷಿ ಮಹಾವಿದ್ಯಾಲಯಗಳಿಂದ ರೈತರಿಗೆ ಯಾವುದೇ ರೀತಿಯ ತಾಂತ್ರಿಕ ನೆರವು ಸಿಗುತ್ತಿಲ್ಲ. ದಲಿತರನ್ನು ಸಮಾಜದಲ್ಲಿ ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಕಾಲೇಜಿನ ಪ್ರಮುಖರಾದ ಡಾ. ದಸ್ತಗೀರಸಾಬ್ ದಿನ್ನಿ, ಜೆ.ಎಲ್. ಈರಣ್ಣ ಸೇರಿದಂತೆ ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

