ಕರ್ತವ್ಯ ರದ್ದು ಕೋರಿ ನೂರಾರು ಅರ್ಜಿ
ಕ.ಪ್ರ. ವಾರ್ತೆ , ರಾಯಚೂರು , ಏ.4
ಹೈ.ಕ. ಭಾಗದಲ್ಲಿನ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭರ್ತಿಯಾಗದೇ ಉಳಿದ ಹುದ್ದೆಗಳ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಸದ್ಯ ಲಭ್ಯವಿರುವ ಸಿಬ್ಬಂದಿಯನ್ನೇ ಬಳಸಿ ಎಲ್ಲ ಕೆಲಸ ಕಾರ್ಯನಿರ್ವಹಿಸುವ ಹೊಣೆ ಜಿಲ್ಲಾಡಳಿತದ್ದು. ಅದರಲ್ಲೂ ಚುನಾವಣೆ ನಿಭಾಯಿಸುವುದು ಬಹುದೊಡ್ಡ ಸವಾಲೇ ಸರಿ. ಈಗಲೂ ಹಾಗೆಯೇ ಆಗಿದೆ. ಚುನಾವಣೆಗೆ ನಿಯೋಜಿತರು ವಿವಿಧ ಕಾರಣಕ್ಕೆ ಸೇವೆಯಿಂದ ಬಿಡುಗಡೆಗೊಳಿಸುವಂತೆ ದುಂಬಾಲು ಬೀಳುತ್ತಿರುವುದು ಜಿಲ್ಲಾಡಳಿತಕ್ಕೆ ಸಂಕಷ್ಟ ತಂದಿದೆ.
ಪ್ರಸಕ್ತ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ವಾರ ಮತದಾನದ ವಿವಿಧ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿ ನೇಮಕಾತಿ ಪತ್ರಗಳು ವಿವಿಧ ಇಲಾಖೆಯಲ್ಲಿದ್ದ ಸರ್ಕಾರಿ ಸಿಬ್ಬಂದಿ ಕೈಸೇರಿದ ನಂತರದಿಂದ ಗೊಂದಲ ಶುರುವಾಗಿದೆ.
ಪ್ರಸಕ್ತ ಚುನಾವಣೆಯಲ್ಲಿ 16,61,362 ಮತದಾರರು ತಮ್ಮ ಹಕ್ಕು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮತದಾನಕ್ಕಾಗಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1878 ಮತಗಟ್ಟೆಗಳನ್ನು ಸ್ಥಾಪಿಸಲು ಆಡಳಿತ ನಿರ್ಧರಿಸಿದೆ.
ಸಿಬ್ಬಂದಿ ಎಷ್ಟು?: ಮತದಾನ ಪ್ರಕ್ರಿಯೆಯಲ್ಲಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1878 ಮತಗಟ್ಟೆಗಳಲ್ಲಿ ಒಟ್ಟು 9390 ಸಿಬ್ಬಂದಿ ಸೇವೆ ಸಲ್ಲಿಸುವುದು ಅವಶ್ಯಕ. ಪ್ರತಿ ಮತಗಟ್ಟೆಗೆ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. ಇಷ್ಟೇ ಅಲ್ಲದೇ ಹೆಚ್ಚುವರಿಯಾಗಿ ಸಿಬ್ಬಂದಿಯೂ ಬೇಕು. ಹಾಗಾಗಿ ತುರ್ತು ಸಂದರ್ಭದಲ್ಲಿ ಬಳಕೆಗೆ ಹೆಚ್ಚುವರಿ ಸಿಬ್ಬಂದಿಗೆ ಚುನಾವಣೆ ಕಾರ್ಯಕ್ಕೆ ನೇಮಿಸಿ ಜಿಲ್ಲಾಡಳಿತ ಆದೇಶಪತ್ರ ಕಳಿಸಿದೆ.
ಜಿಲ್ಲಾಡಳಿತದಿಂದ ನೇಮಕಾತಿ ಆದೇಶವು ಸಿಬ್ಬಂದಿಯ ಕೈ ಸೇರುತ್ತಿದ್ದಂತೆಯೇ ಜಿಲ್ಲಾಧಿಕಾರಿಗಳ ಕಚೇರಿಗೆ ಸೇವೆಯಿಂದ ಬಿಡುಗಡೆಗೊಳಿಸುವಂತೆ ಕೋರಿ ಮನವಿ ಪತ್ರ ಹಿಡಿದು ನಿಲ್ಲುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣತೊಡಗಿದೆ. ಬೇಸಿಗೆಯ ದಿನಗಳಲ್ಲಿ ಚುನಾವಣೆಯ ತಲೆನೋವು ಬೇಡ ಎಂದು ಕೆಲವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ತಂತ್ರ ಅನುಸರಿಸಿದರೆ, ಮತ್ತೆ ಕೆಲವರು ಅರ್ಹ ಕಾರಣಗಳಿಂದಾಗಿ ಸೇವೆಯಿಂದ ಮುಕ್ತಿ ಬಯಸಿ ಅರ್ಜಿ ಸಲ್ಲಿಸುತ್ತಿದ್ದಾರೆ.
ಅದರಲ್ಲೂ ಕಂದಮ್ಮಗಳನ್ನು ಹೊತ್ತುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಧಾವಿಸುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಅವರು, ಇದುವರೆಗೆ 200ಕ್ಕೂ ಹೆಚ್ಚಿನ ಇಂಥ ಮನವಿಗಳು ಜಿಲ್ಲಾಡಳಿತಕ್ಕೆ ಬಂದಿದ್ದು, ಪರಿಶೀಲಿಸಿ ಸೂಕ್ತ ಎನಿಸಿದಲ್ಲಿ ಅಂಥವರನ್ನು ಚುನಾವಣೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗುತ್ತದೆ ಎಂದಿದ್ದಾರೆ.
ಅನುಮಾನ: ಒಂದೆಡೆ ಚುನಾವಣೆಗೆಂದು ನೇಮಕಗೊಂಡವರಲ್ಲಿ ಅನೇಕರು ಹಾಗೂ ಹೀಗೂ ಎಲೆಕ್ಷನ್ತ್ಪ್ಪಿಸಿಕೊಂಡರಾಯಿತೆಂದು ಶತಪ್ರಯತ್ನ ನಡೆಸುತ್ತಿದ್ದರೆ, ವಾಸ್ತವದಲ್ಲಿಯೂ ಚುನಾವಣೆ ಕಾರ್ಯದಿಂದ ತೊಂದರೆಗೆ ಸಿಲುಕಿರುವವರನ್ನೂ ಅಧಿಕಾರಿಗಳು ಅನುಮಾನಿಸುವಂತಾಗಿದೆ.
ಕೊರತೆ: ಚುನಾವಣೆ ಕೆಲಸ ಕಾರ್ಯದಿಂದ ಬಿಡುಗಡೆಗೊಳ್ಳಲು ಅರ್ಹರು ದಿನವೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಾಲುಗಟ್ಟಿ ನಿಲ್ಲುತ್ತಿರುವುದು ಗೊಂದಲಕ್ಕೆ ದಾರಿ ಮಾಡಿದೆ. ಒಂದೆಡೆ ಅರ್ಹರು ಕರ್ತವ್ಯದಿಂದ ಬಿಡುಗಡೆಗೊಳ್ಳಲು ಪ್ರಯತ್ನ ನಡೆಸಿದ್ದರೆ, ಇನ್ನೊಂದೆಡೆ ಹಾಗೆ ತೆರವಾಗುವ ಸ್ಥಾನಗಳಿಗೆ ಹೊಸಬರ ನೇಮಕ ಮತ್ತು ತರಬೇತಿ ನೀಡಿಕೆಯ ಬಿಸಿ ಜಿಲ್ಲಾಡಳಿತಕ್ಕೆ ತಟ್ಟಿದೆ. ಸಿಬ್ಬಂದಿ ಕೊರತೆಯ ಮಧ್ಯೆ ದಿನವೂ ನೂರಾರು ಸಂಖ್ಯೆಯಲ್ಲಿ ಇಂಥ ಕರ್ತವ್ಯ ರದ್ದತಿ ಕೋರಿ ಅರ್ಜಿ ಸಲ್ಲಿಕೆಯಾಗುತ್ತಿರುವುದು ಆಡಳಿತಕ್ಕೆ ತಲೆನೋವು ತಂದಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

