ರಾಯಚೂರು

ಮಕ್ಕಳ ಹಕ್ಕಿಗಿಲ್ಲ ಕಿಮ್ಮತ್ತು

Published On :

ಕ.ಪ್ರ. ವಾರ್ತೆ ,  ರಾಯಚೂರು ,  ಏ.4
ಚುನಾವಣೆಯ ಆಯೋಗ ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರಚಾರ ಮತ್ತದಾರರ ಜಾಗೃತಿ ಕಾರ್ಯಕ್ರಮಗಳಿಗೆ ಮಕ್ಕಳನ್ನು ಬಳಕೆ ಮಾಡದಂತೆ ಸೂಚಿಸಿದೆ. ಜಿಲ್ಲಾಧಿಕಾರಿಗಳೂ ಸಹ ಅದೇ ರೀತಿ ಹೊರಡಿಸಿದ ಆದೇಶಕ್ಕೆ ಜಿಲ್ಲೆಯಲ್ಲಿ ಕಿಮ್ಮತ್ತಿಲ್ಲದಂತಾಗಿದೆ. ಮತದಾರರ ಜಾಗೃತಿ ಜಾಥಾದಲ್ಲಿ ಮಕ್ಕಳ ಬಳಕೆಗೆ ಮಾತ್ರ ತಡೆ ಬಿದ್ದಿಲ್ಲ.
ರಾಯಚೂರು ಜಿಲ್ಲೆಯಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಜಾಗೃತಿ ಕಾರ್ಯಕ್ರಮಗಳಲ್ಲಿ ಮಕ್ಕಳ ಬಳಕೆ ನಿರಂತರ ಮುಂದುವರಿದಿರುವುದು ಪತ್ತೆಯಾಗಿದೆ. ಜಿಲ್ಲಾಡಳಿತ ಸ್ಪಷ್ಟವಾಗಿ ಸೂಚಿಸಿದ್ದರೂ, ಮಕ್ಕಳನ್ನು ಜಾಥಾಗಳಿಗೆ ಬಳಕೆ ಮಾಡುವುದು ಯಥಾರೀತಿ ಮುಂದುವರಿದಿದೆ.
ಪ್ರತಿ ಬಾರಿ ಚುನಾವಣೆ ನಡೆದಾಗಲೆಲ್ಲ 18 ವರ್ಷ ವಯಸ್ಸು ಮೀರಿದ ಎಲ್ಲರೂ ಮತದಾನ ಮಾಡಲು ಅರ್ಹರು ಎಂದು ಸಾರಲಾಗುತ್ತದೆ. ಮತದಾನದ ಪ್ರಾಮುಖ್ಯತೆ, ದೇಶಕ್ಕೆ ಅದರಿಂದಾಗುವ ಪ್ರಯೋಜನಗಳ ಬಗ್ಗೆಯೂ ಮಾಹಿತಿ ನೀಡುವುದು ಸಾಮಾನ್ಯ. ಆದರೆ 18ವರ್ಷಕ್ಕಿಂತ ಕಡಿಮೆ ವಯಸ್ಸಿನವರೆಲ್ಲರನ್ನೂ ಮಕ್ಕಳು ಎಂದೇ ಕರೆಯಲಾಗುತ್ತದೆ.
ಹೀಗೆ 18ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ರೀತಿಯಿಂದ ದುಡಿಮೆಗೆ ಹಚ್ಚುವಂತಿಲ್ಲ. ಹಾಗೆಯೇ ಚುನಾವಣೆ ಆಯೋಗದ ಪ್ರಕಾರ ಚುನಾವಣೆಯ ಪ್ರಚಾರ ಮತ್ತು ಮತದಾರರ ಜಾಗೃತಿಯ ವಿವಿಧ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವಂತಿಲ್ಲ.
ಏನಿದು ಆದೇಶ?: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಮಾ.17ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮತದಾರರ ಜಾಗೃತಿ ಜಾಥಾ ಹೆಸರಿನಲ್ಲಿ ಶಾಲಾ ಮಕ್ಕಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತೆಯೇ ರಾಜ್ಯ ಚುನಾವಣೆ ಆಯೋಗವು ಈ ವಿಷಯವನ್ನು ತೀಕ್ಷ್ಣವಾಗಿ ಪರಿಗಣಿಸಿತು.
ಪರಿಣಾಮ ಅದೇ ದಿನ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಆದೇಶ ಹೊರಡಿಸಿ 18ವರ್ಷ ವಯಸ್ಸಿಗಿಂತ  ಕೆಳಗಿನ ಮಕ್ಕಳನ್ನು ಮತದಾರರ ಜಾಗೃತಿ ಜಾಥಾಕ್ಕೆ ಬಳಸದಂತೆ ಸೂಚಿಸಿತು. ರಾಯಚೂರು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರೂ ಮಾ.19ರಂದು ಜಿಲ್ಲೆಯ ಎಲ್ಲ ತಹಸೀಲ್ದಾರರು, ಸಹಾಯಕ ಆಯುಕ್ತರಿಗೆ ಈ ಕುರಿತು ಎಚ್ಚರಿಸಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳು ಶಾಲಾ ಮಕ್ಕಳನ್ನು ಜಾಥಾಕ್ಕೆ ಬಳಸದಂತೆ ಆದೇಶದಲ್ಲಿ ಎಚ್ಚರಿಸಿದ್ದಾರೆ. ಇದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಇಂಥ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಜಾಥಾ ನಡೆಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಜಾರಿಯಿಲ್ಲ: ರಾಜ್ಯ ಚುನಾವಣೆ ಆಯೋಗ, ಜಿಲ್ಲಾಧಿಕಾರಿಗಳ ಆದೇಶಕ್ಕೆ ಜಿಲ್ಲೆಯ ಅನೇಕ ಕಡೆ ನಡೆದ ಜಾಥಾಗಳಲ್ಲಿ ಕವಡೆ ಕಾಸಿನ ಕಿಮ್ಮತ್ತು ದೊರೆತಿಲ್ಲ ಎಂಬುದು ಸ್ಪಷ್ಟವಾಗಿದೆ. ಮತದಾರರ ಜಾಗೃತಿ ಜಾಥಾಗಳನ್ನು ಆಯೋಜಿಸುವ ಒತ್ತಡದಲ್ಲಿ ಶಾಲಾ ಮಕ್ಕಳನ್ನೇ ಹೆಚ್ಚಾಗಿ ಬಳಕೆ ಮಾಡಿರುವುದು ಎಲ್ಲೆಡೆ ಕಂಡುಬಂದಿದೆ.
ಅದರಲ್ಲೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಶಾಲಾ ಮಕ್ಕಳೂ ಜಾಥಾದಲ್ಲಿ ತಮಗೆ ಗೊತ್ತಿಲ್ಲದ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಭಾಗಿಯಾಗುವಂತಾಗಿದ್ದು ದುರದೃಷ್ಟಕರ ಸಂಗತಿಯೇ ಸರಿ. ಜಿಲ್ಲೆಯ ವಿವಿಧೆಡೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ರಜೆ ಘೋಷಿಸುವ ಮೊದಲು ನಡೆದ ಎಲ್ಲ ಜಾಥಾಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚಾಗಿ ಇಂಥ ಜಾಥಾಕ್ಕೆ ಬಳಸಲಾಗಿದೆ.
ಒಂದೆಡೆ ರಾಜ್ಯ ಸರ್ಕಾರ ಕೋಟಿ ಕೋಟಿ ರು. ಸುರಿದು ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಯೋಜನೆ ಜಾರಿಗೆ ತರುತ್ತದೆ. ಅದೇ ಮತ್ತೊಂದೆಡೆ ಚುನಾವಣೆ ಆಯೋಗ ಮತ್ತು ಜಿಲ್ಲಾಧಿಕಾರಿಗಳ ಆದೇಶ ಮೀರಿ ಮಕ್ಕಳ ಹಕ್ಕು ಉಲ್ಲಂಘಿಸುವ ಕಾರ್ಯವೂ ನಡೆಯುತ್ತಿರುವುದು ಪ್ರಜ್ಞಾವಂತರಲ್ಲಿ ಬೇಸರಕ್ಕೆ ದಾರಿ ಮಾಡಿದೆ.ಏನಿದು ಆದೇಶ?
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಮಾ.17ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದು ಮತದಾರರ ಜಾಗೃತಿ ಜಾಥಾ ಹೆಸರಿನಲ್ಲಿ ಶಾಲಾ ಮಕ್ಕಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಂತೆಯೇ ರಾಜ್ಯ ಚುನಾವಣೆ ಆಯೋಗವು ಈ ವಿಷಯವನ್ನು ತೀಕ್ಷ್ಣವಾಗಿ ಪರಿಗಣಿಸಿತು.


-ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.