ಸಿಡಿಲಿಗೆ ಒಬ್ಬ ಬಲಿ, ಮೂವರಿಗೆ ಗಾಯ
ರಾಯಚೂರು: ತಾಲೂಕಿನ ದಿನ್ನಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಿಡಿಲು ಬಡಿದು ಕುರಿಗಾಹಿ ಯೊಬ್ಬ ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ.
ಮೃತನನ್ನು ಈರಪ್ಪ (45) ಎಂದು ಗುರುತಿಸಲಾಗಿದೆ. ತಿಮ್ಮಯ್ಯ (60), ತಾಯಪ್ಪ (10) ಹಾಗೂ ಗುರುಸ್ವಾಮಿ (22) ಗಾಯಾಳುಗಳು. ಗಾಯಾಳುಗಳನ್ನು ನಗರದ ಒಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಹೊಲದಲ್ಲಿ ಕುರಿ ಕಾಯುತ್ತಿದ್ದ ವೇಳೆ ಬಿರುಗಾಳಿ ಸಹಿತ ಮಳೆ ಸುರಿಯಲಾರಂಭಿಸಿದ್ದು, ಮಳೆಯಿಂದ ಪಾರಾಗಲು ಹೊಲದಲ್ಲಿದ್ದ ದೇವಸ್ಥಾನದ ಆಶ್ರಯ ಪಡೆದಿದ್ದರು. ಆ ವೇಳೆ ಸಿಡಿಲು ಬಡಿದಿದ್ದರಿಂದ ಈರಪ್ಪ ಸ್ಥಳದಲ್ಲಿಯೇ ಮೃತಪಟ್ಟರೆ, ಇನ್ನುಳಿದ ಮೂವರು ಗಾಯಗೊಂಡರು.
ಬಿರುಗಾಳಿ ಮಳೆ: ಬಿರುಬಿಸಿಲ ತಾಪದಿಂದ ತತ್ತರಿಸಿದ್ದ ನಗರದ ಜನತೆಗೆ ಭಾನುವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಅಲ್ಪ ತಂಪು ತಂದಿತು. ಆದರೆ ಆನಂತರ ವಿದ್ಯುತ್ ಗಂಟೆಗಳ ಕಾಲ ಕೈಕೊಟ್ಟಿದ್ದರಿಂದ ಜನ ತೊಂದರೆ ಅನುಭವಿಸುವಂತಾಯಿತು.
ಬ್ರಾ ಮೂಲಕ ಚಿನ್ನ ಕಳ್ಳ ಸಾಗಾಟ!
ಮಂಗಳೂರು: ಪಾದರಕ್ಷೆಯಲ್ಲಿನ ಬಕಲ್ಸ್ ಮತ್ತು ಸೂಟ್ಕೇಸ್ ಬೀಡಿಂಗ್ನಲ್ಲಿ ಚಿನ್ನ ಅವಿತಿರಿಸಿ ತರುತ್ತಿದ್ದ ಇಬ್ಬರನ್ನು ಬಜಪೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ರು. 13.71 ಲಕ್ಷ ಮೌಲ್ಯದ ಚಿನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
233.550 ಗ್ರಾಂ ತೂಗುವ ಚಿನ್ನದ ತಂತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅದರ ಮೌಲ್ಯ ರು. 6.86 ಲಕ್ಷ ಎಂದು ಅಂದಾಜಿಸಲಾಗಿದೆ. ಕಂದು ಬಣ್ಣದ ಸೂಟ್ಕೇಸ್ ಬೀಡಿಂಗ್ನಲ್ಲಿ ಚಿನ್ನ ಅವಿತಿರಿಸಲಾಗಿತ್ತು. ಬೇಕಲ ನಿವಾಸಿ ಮೊಹಮ್ಮದ್ ಅನ್ವರ್ (27)ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈಗ ಭಾನುವಾರ ದುಬೈಯಿಂದ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ್ದ.
ಇನ್ನೊಂದು ಪ್ರಕರಣದಲ್ಲಿ ಆರೋಪಿ ಕುಂಬ್ಳೆಯ ಸಿದ್ದೀಖ್ ಬೀನಮಂಗಲ (27) ಎಂಬಾತನಿಂದ 44 ಚಿನ್ನದ ಬಕಲ್ಸ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇವನ್ನು ಪಾದರಕ್ಷೆಗಳ ಅಡಿಭಾಗದಲ್ಲಿ ಮತ್ತು ಮಹಿಳೆಯ ಬ್ರಾದಲ್ಲಿ ಇಡಲಾಗಿತ್ತು. ಒಟ್ಟು 233.100 ಗ್ರಾಂ ತೂಗುವ ಚಿನ್ನದ ಮೌಲ್ಯ ರು. 6.85 ಲಕ್ಷ ಎಂದು ಅಂದಾಜಿಸಲಾಗಿದೆ.
ಕಸ್ಟಮ್ಸ್ ಉಪಾಯುಕ್ತ ಗೋಗಿ, ಎಸ್ಪಿ ಪ್ರಭಾಕರ ಪೂಜಾರಿ, ಎಸ್ಪಿ ಸೆಂದಿಲ್ ಮುರುಗನ್, ಬಿ.ಎ.ಕಾರ್ಯಪ್ಪ, ಎಚ್.ಜಿ.ಯೋಗೀಶ್ ಇನ್ಸ್ಪೆಕ್ಟರ್ಗಳಾದ ಜಿ.ಕುಮಾರಸ್ವಾಮಿ, ಎಸ್.ರಂಜನ್ ಬೆಹೆರಾ, ಸಂತೋಶ್ ಕುಮಾರ್, ಅಂಕಿತ್ ಕುಮಾರ್ ಮತ್ತು ವರದರಾಜು, ಸೌಮ್ಯ ನಾಯಕ್ ಕಾರ್ಯಾಚರಣೆ ನಡೆಸಿದರು.
ಸೋಮವಾರಪೇಟೆಯಲ್ಲೂ ಭಾರಿ ಮಳೆ
ಸೋಮವಾರಪೇಟೆ: ಕೊಡಗಿನಲ್ಲಿ ತೀವ್ರ ತಾಪದಿಂದ ಕಾದಿದ್ದ ಭೂಮಿಗೆ ಮಿಂಚು-ಗುಡುಗು ಸಹಿತ ಭಾರಿ ಮಳೆ ಬಿದ್ದು ತಂಪಾದರೆ, ನಗರದ ಹೊರ ವಲಯದಲ್ಲಿದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಸುಟ್ಟು ಕರಕಲಾದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಭಾರಿ ಗಾಳಿ, ಗುಡುಗು- ಮಿಂಚಿನೊಂದಿಗೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ರೇಂಜರ್ ಬ್ಲಾಕ್ನಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದ್ದರಿಂದ ವಿದ್ಯುತ್ ಸ್ಥಗಿತಗೊಂಡಿತು. ಉಳಿದಂತೆ ತಣ್ಣಿರುಹಳ್ಳ, ಅಬ್ಬೂರುಕಟ್ಟೆ, ಬೇಳೂರು, ಹಾನಗಲ್ಲು ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಯಿತು.
ಮಡಿಕೇರಿ: ಭಾನುವಾರ ಸಂಜೆ ಉತ್ತಮ ಮಳೆಯಾಗಿದೆ. ಈ ವರ್ಷದ ಮೊದಲ ಮಳೆಯೊಂದಿಗೆ ದೊಡ್ಡ ಗಾತ್ರದ ಆಲಿಕಲ್ಲುಗಳು ಕೂಡ ನಗರದಾದ್ಯಂತ ಬಿದ್ದವು. ಮಳೆ ನಡುವೆಯೇ ಆಲಿಕಲ್ಲು ಸಂಗ್ರಹಿಸಲು ಮನೆ ಮಂದಿ ಮುಗಿಬಿದ್ದದ್ದು ಕಂಡುಬಂತು. ಮಡಿಕೇರಿ ನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಭಾರಿ ಗುಡುಗು ಸೇರಿದಂತೆ ಧಾರಾಕಾರ ಮಳೆಯಾಗಿದ್ದು ಬಿಸಿಲಿನಿಂದ ಕೂಡಿದ್ದ ವಾತಾವರಣ ಮಳೆಯಿಂದಾಗಿ ತಂಪಾಯಿತು. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಂಜೆ ವೇಳೆ ಅರ್ಧ ಗಂಟೆ ಕಾಲ ಸಾಧಾರಣ ಮಳೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

