ಮತಗಟ್ಟೆ ಭದ್ರತೆಗೆ 2 ಸಾವಿರ ಸಿಬ್ಬಂದಿ
ಕ.ಪ್ರ. ವಾರ್ತೆ, ರಾಯಚೂರು, ಏ.15
ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಯನ್ನು ಶಾಂತಿ ಮತ್ತು ಸುಗಮವಾಗಿ ನಿರ್ವಹಿಸಲು ಪೊಲೀಸ್ ಇಲಾಖೆಯು ಸುಮಾರು 2 ಸಾವಿರ ಸಿಬ್ಬಂದಿಯನ್ನು ಬಳಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆ ವೇಳೆ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಚುನಾವಣೆ ಭದ್ರತೆ ಕಾರ್ಯಕ್ಕೆ ತಾವೂ ಸೇರಿದಂತೆ ಮೂವರು ಎಸ್ಪಿಗಳು, 7 ಜನ ಡಿವೈಎಸ್ಪಿಗಳು, 21 ಸಿಪಿಐಗಳು, 100 ಎಸ್ಸೈಗಳು, 266 ಎಚ್ಸಿ, 800 ಪೊಲೀಸ್ ಕಾನ್ಸ್ ಟೇಬಲ್ಗಳು ಸೇರಿದಂತೆ ಒಟ್ಟು 2 ಸಾವಿರ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆಂದು ಹೇಳಿದರು.
ಇದಲ್ಲದೇ ಕೇಂದ್ರ ಅರೆಸೇನಾ ಪಡೆಗಳ ಎರಡು ತುಕಡಿ, ಕರ್ನಾಟಕ ರಾಜ್ಯ ಮೀಸಲು ಪಡೆಯ ಎರಡು ತುಕಡಿಗಳು ಹಾಗೂ 14 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಚುನಾವಣೆ ವೇಳೆ ಕಾರ್ಯನಿರ್ವಹಿಸಲಿದ್ದಾರೆಂದು ತಿಳಿಸಿದ ಅವರು, 100 ಸಂಚಾರಿ ತಂಡಗಳನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ ಎಂದು ಹೇಳಿದರು.
40 ಮತಗಟ್ಟೆಗಳ ಮೇಲೆ ತೀವ್ರ ನಿಗಾ: ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ 332 ಅತೀ ಸೂಕ್ಷ್ಮ, 542 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದೆ. 40 ಮತಗಟ್ಟೆಗಳನ್ನು ಹೆಚ್ಚು ಹಣ ವೆಚ್ಚವಾಗುವ ಮತಗಟ್ಟೆಗಳೆಂದು ಗುರುತಿಸಿ ಅಲ್ಲಿ ಅರೆಸೇನಾ ಪಡೆಯ ತುಕಡಿ ನಿಯೋಜಿಸಲಾಗುತ್ತಿದೆ. ಈಗಾಗಲೇ ಸುಸಜ್ಜಿತ ವೈರ್ಲೆಸ್ ಸಂಪರ್ಕ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಚುನಾವಣೆ ಕಾರ್ಯಕ್ಕೆ ಬಳಸಲು ಸಿದ್ಧವಿಡಲಾಗಿದೆ ಎಂದು ಹೇಳಿದರು.
ಅಂತಾರಾಜ್ಯ ಗಡಿಯಲ್ಲಿ ಹೆಚ್ಚಿನ ತಪಾಸಣೆ ಮಾಡಲು ಸೂಚಿಸಲಾಗಿದೆ. ಈ ಕುರಿತು ಆಂಧ್ರ ಪೊಲೀಸರಿಗೂ ಮನವಿ ಮಾಡಿದ್ದು, ಅವರೂ ಹೆಚ್ಚಿನ ಸಿಬ್ಬಂದಿಯನ್ನು ಗಡಿಯಲ್ಲಿ ನಿಯೋಜಿಸಲಿದ್ದಾರೆ ಎಂದ ಅವರು, ಆಂಧ್ರಪ್ರದೇಶದಿಂದ 250 ಸಿಬ್ಬಂದಿಯನ್ನು ಪ್ರಸಕ್ತ ಚುನಾವಣೆಯಲ್ಲಿ ಕರೆಯಿಸಲಾಗಿದೆ ಎಂದು ತಿಳಿಸಿದರು.
800 ಜನರಿಂದ ಮುಚ್ಚಳಿಕೆ ಪತ್ರ: ಈಗಾಗಲೇ ಶಾಂತಿಯುತ ಮತದಾನಕ್ಕೆ ಪೂರಕವಾಗಿ ಅಪರಾಧಿಕ ಹಿನ್ನೆಲೆಯುಳ್ಳ 800 ಜನರಿಂದ ಮುಂಜಾಗ್ರತಾ ಕ್ರಮವಾಗಿ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಇದುವರೆಗೆ ಜಿಲ್ಲೆಯ ವಿವಿಧೆಡೆ ಚುನಾವಣೆಯಲ್ಲಿ ಬಳಕೆಗೆ ಸಾಗಿಸುತ್ತಿದ್ದ ಅಕ್ರಮ ಹಣ 2.42 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಇದುವರೆಗೆ 25 ಲಕ್ಷ ಬೆಲೆಯ ಅಕ್ರಮ ಮದ್ಯ ಜಪ್ತಿ ಮಾಡಲಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳವರ ವಿರುದ್ಧ ತಲಾ 4 ನೀತಿ ಸಂಹಿತೆಯ ಉಲ್ಲಂಘನೆ ಕೇಸ್ ದಾಖಲಿಸಲಾಗಿದೆ. ಜೆಡಿಎಸ್ ವಿರುದ್ಧ 1 ನೀತಿ ಸಂಹಿತೆಯ ಕೇಸ್ ದಾಖಲಾಗಿದ್ದು, ಒಟ್ಟು 18 ನೀತಿ ಸಂಹಿತೆಯ ಉಲ್ಲಂಘನೆ ಕೇಸ್ ದಾಖಲಾಗಿವೆ ಎಂದು ತಿಳಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ಡಿವೈಎಸ್ಪಿ ಎಂ.ಪಾಷಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

