ರಾಯಚೂರು

ಅಪರಾಧ ಹಿನ್ನೆಲೆ: ಮೂವರ ವಿರುದ್ಧ ಗೂಂಡಾ ಕಾಯಿದೆ

Published On :

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.19
ಜಿಲ್ಲೆಯಲ್ಲಿ ಅಪರಾಧಿಕ ಕೃತ್ಯಗಳಲ್ಲಿ ತೊಡಗಿರುವ ಮೂವರು ಬಂಧಿತರ ವಿರುದ್ಧ ಗೂಂಡಾ ಕಾಯಿದೆ ಅನ್ವಯಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯು ಈಚೆಗೆ ಬಂಧಿಸಿರುವ ಸಿಂಧನೂರಿನ ಟೀಕಾರಾಜ್, ರಾಯಚೂರಿನ ಹುಲಿಗೆಪ್ಪ ಮತ್ತು ವೀರೇಶ್ ಗೆಜ್ಜಿ ಎಂಬುವರ ವಿರುದ್ಧ ಗೂಂಡಾ ಕಾಯಿದೆ ಅನ್ವಯ ಪ್ರಕರಣ ದಾಖಲಿಸಲು ಕೋರಲಾಗಿತ್ತು. ಅದರಂತೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.
ನಗರದ ಆರೋಪಿ ಹುಲಿಗೆಪ್ಪ ವಿರುದ್ಧ ಸಿಎಚ್ ಪೌಡರ್ ಸಾಗಣೆ ಮತ್ತು ಮಾರಾಟದ 14 ಕೇಸ್ಗಳಿವೆ. ಮತ್ತೋಬ್ಬ ಆರೋಪಿ ವೀರೇಶ್ ಗೆಜ್ಜಿ ವಿರುದ್ಧ ಸಿಎಚ್ ಪೌಡರ್ ಮಾರಾಟದ 23 ಕೇಸ್ಗಳಿವೆ. ಅದೇ ರೀತಿ ಸಿಂಧನೂರಿನ ಟೀಕಾರಾಜ್ ವಿರುದ್ಧ 23 ಮಟಕಾ ಜೂಜಿನ ಬುಕ್ಕಿ ಸಂಬಂಧಿ ಕೇಸ್ಗಳಿರುವ ಹಿನ್ನೆಲೆ ಅವರ ವಿರುದ್ಧ ಗೂಂಡಾ ಕಾಯಿದೆ ಅನ್ವಯಿಸಲು ಅನುಮತಿಸಲಾಗಿದೆ ಎಂದು ತಿಳಿಸಿದರು.
ಹಣ ಹಂಚಿಕೆ: ಲೋಕಸಭೆ ಚುನಾವಣೆಯ ವೇಳೆ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಅವರ ಪರ ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದಲ್ಲಿ ಮತದಾರರಿಗೆ ವ್ಯಕ್ತಿಯೊಬ್ಬರು ಹಣ ಹಂಚಿದ ಬಗ್ಗೆ ದೂರು ಸಲ್ಲಿಕೆಯಾಗಿದ್ದು, ಈ ಕುರಿತು ಪ್ರಕರಣ ದಾಖಲಿಸುವಂತೆ ದೇವದುರ್ಗ ಪೊಲೀಸರಿಗೆ ಸೂಚಿಸಲಾಗಿದೆ ಎಂದರು.
ದಾಖಲೆ ಸಮೇತ ದೂರು: ಏ.17 ರಂದು ದೇವದುರ್ಗ ತಾಲೂಕಿನ ಯರಮಸಾಳ ಗ್ರಾಮದಲ್ಲಿ ಬಸಯ್ಯಸ್ವಾಮಿ ಎಂಬಾತ ಬಿಜೆಪಿ ಪರವಾಗಿ ಮತದಾರರಿಗೆ 2 ಸಾವಿರ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಮುಖಂಡ ಬುಡ್ಡನಗೌಡ ಎಂಬುವರು ದಾಖಲೆ ಸಮೇತ ದೂರು ಸಲ್ಲಿಸಿದ್ದು, ಈ ಕುರಿತು ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಪರ ಹಣ ಹಂಚುತ್ತಿದ್ದ ವ್ಯಕ್ತಿಯು ಮಟಕಾ ದಂಧೆ ಸೇರಿ ಅನೇಕ ಅಪರಾಧಿಕ ಕೃತ್ಯಗಳಲ್ಲಿ ತೊಡಗಿದ್ದು, ಆತನ ವಿರುದ್ಧ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಚುನಾವಣೆಯ ಮತಯಂತ್ರದಲ್ಲಿ ಮುದ್ರಿಸಿದ ಚಿಹ್ನೆಗಳ ಬಗ್ಗೆ ಎದ್ದಿರುವ ವಿವಾದದಲ್ಲಿ ಹುರುಳಿಲ್ಲ ಎಂದರು.
ವಿವಿಧ ರಾಜಕೀಯ ಪಕ್ಷಗಳು ತಮಗೆ ನೀಡಿರುವ ಚಿಹ್ನೆಗೆ ಸಂಬಂಧಿಸಿದ ಆರೋಪದ ಬಗ್ಗೆ ರಾಜ್ಯ ಚುನಾವಣೆ ಆಯೋಗದ ಗಮನಕ್ಕೆ ತರಲಾಗುತ್ತದೆ. ಚುನಾವಣೆ ಆಯೋಗದ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಲೋಕಸಭೆ ಚುನಾವಣೆಯ ಮತದಾನದ ವೇಳೆ ಎರಡು ಕಡೆ ಮತಗಟ್ಟೆಗಳಲ್ಲಿ ಮತಯಂತ್ರದಲ್ಲಿನ ದೋಷದ ಬಗ್ಗೆ ಚುನಾವಣೆ ಆಯೋಗದ ಗಮನ ಸೆಳೆಯಲಾಗುತ್ತಿದೆ ಎಂದು ತಿಳಿಸಿದರು.
ಆಯೋಗಕ್ಕೆ ಮಾಹಿತಿ: ಯಾದಗಿರಿ ಜಿಲ್ಲೆಯ ಎರಡು ಮತಗಟ್ಟೆಗಳಲ್ಲಿನ ಮತಯಂತ್ರಗಳಲ್ಲಿ ಮತದಾನದ ವೇಳೆ ಕಂಡುಬಂದ ದೋಷಕ್ಕೆ ಸಂಬಂಧಿಸಿ ಮರು ಮತದಾನ ನಡೆಸಬೇಕೇ, ಬೇಡವೇ ಎಂಬ ಕುರಿತು ರಾಜ್ಯ ಚುನಾವಣೆ ಆಯೋಗಕ್ಕೆ ಮಾರ್ಗದರ್ಶನ ಕೋರಿ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸುರಪುರ ವಿಧಾನಸಭೆ ಕ್ಷೇತ್ರದ ಒಂದು ಮತಗಟ್ಟೆ ಮತ್ತು ಯಾದಗಿರಿಯ ಒಂದು ಮತಗಟ್ಟೆಯ ಮತಯಂತ್ರದಲ್ಲಿ ಮತ ಚಲಾಯಿಸಿದರೂ ಬೀಪ್ ಶಬ್ದ ಬಾರದಿರುವುದು ಕಂಡುಬಂದಿದ್ದು, ಆ ಬಗ್ಗೆ ಚುನಾವಣೆ ಆಯೋಗಕ್ಕೆ ದೂರಲಾಗಿದೆ. ಆಯೋಗದ ಮಾರ್ಗದರ್ಶನದಂತೆ ಜಿಲ್ಲಾಡಳಿತ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.