ರಾಯಚೂರು

ಈಜಬೇಕು... ರಜೆಯಲ್ಲಿ ಈಜು ಕಲಿಯಬೇಕು...

Published On :

ಚಂದ್ರಕಲಾ ಕುಸ್ನೂರ
ಕ.ಪ್ರ. ವಾರ್ತೆ   ಗುಲ್ಬರ್ಗ   ಏ.25
ಬಿರು ಬಿಸಿಲಿನಿಂದಾಗಿ ಉಷ್ಣತಾ ಮಾಪಕದಲ್ಲಿನ ಪಾದರಸ ಮಟ್ಟ ಏರಿಕೆ ಕಂಡಂತೆ, ಕೆಂಡದ ನೆಲದ ಮಂದಿ ಚಂದ್ರಶೇಖರ ಪಾಟೀಲ್ ಸ್ಟೇಡಿಯಂನಲ್ಲಿರುವ ಈಜುಕೊಳಕ್ಕೆ ಜಿಗಿಯುತ್ತಿದ್ದಾರೆ.
- ಇದು ಅತಿಶಯೋಕ್ತಿಯಲ್ಲ, ಗುಲ್ಬರ್ಗದಲ್ಲಿರುವ ಈಜುಕೊಳ ಇದೀಗ ಎಲ್ಲರ ಕಣ್ಮಣಿ.
ಬಿಸಿಲ ಝಳ, ಉರಿ ಬಿಸಿಲಿನ ತಾಪದಿಂದ ಪಾರಾಗಲು ಮಕ್ಕಳು, ಮಹಿಳೆಯರು, ಜನತೆ ಈಜುಕೊಳದತ್ತ ಧಾವಿಸುತ್ತಿದ್ದಾರೆ. ಬಿಸಿಲು ಹೆಚ್ಚಿದಂತೆ ಈಜುಕೊಳ ಭರ್ತಿಯಾಗುತ್ತಿದೆ. ಬೆಳಗಿನ ಜಾವದಿಂದ ಮಹಿಳೆಯರು, ಮಕ್ಕಳು, ವಯಸ್ಕರರು ಹೆಚ್ಚಿನ ಸಂಖ್ಯೆಯಲ್ಲಿ ಈಜುಕೊಳದತ್ತ ಹೆಜ್ಜೆ ಹಾಕುತ್ತಿರುವುದರಿಂದ ಈ ಬಾರಿ ಕೊಳ ತುಂಬಿ ತುಳುಕುತ್ತಿದೆ.
ಅನೇಕರು ಈಜು ಕಲಿಯಲು ಇದೇ ಸಮಯ ಎಂದು ಕೊಳಕ್ಕೆ ಧಾವಿಸುತ್ತಿದ್ದರೆ, ಇನ್ನೂ ಹಲವರು ಬೇಸಿಗೆ ಬಿಸಿಯಿಂದ ಪಾರಾಗಲು ಕೊಳದ ಮೊರೆ ಹೋಗುತ್ತಿದ್ದಾರೆ. ವಯಸ್ಕರರು ಆರೋಗ್ಯ ಕಾಪಾಡುವ ದೃಷ್ಟಿಕೋನದೊಂದಿಗೆ ಈಜುಕೊಳದತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಈಜುಕೊಳ ಬೇಸಿಗೆಯ ಈ ಕಾಲದಲ್ಲಿ ಅಬಾಲವೃದ್ಧರಾದಿಯಾಗಿ ಸರ್ವರ ಆಕರ್ಷಣೆಯ ಕೇಂದ್ರವಾಗಿದೆ.
ಈಜುಕೊಳದ ನಿರ್ವಹಣೆ ಜಿಲ್ಲಾಡಳಿತದ ಸುಪರ್ದಿಯಲ್ಲಿದೆ. ಜಿಲ್ಲಾಧಿಕಾರಿ ಇಲ್ಲಿನ ವ್ಯವಹಾರಗಳ ಮುಖ್ಯಸ್ಥರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅಕ್ವಾ ಕ್ಲಬ್ ರಚನೆಯಾಗಿದ್ದು ಈಜುಕೊಳದ ನಿರ್ವಹಣೆ ಇದರಡಿಯಲ್ಲಿ ಸಾಗಿದೆ.
ಹೆಚ್ಚಿದ ಮಹಿಳೆಯರ ಸಂಖ್ಯೆ: ಜಿಲ್ಲಾ ಅಕ್ವಾ ಅಸೋಸಿಯೇಶನ್ ಅಡಿ ಈಜು ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಸುಮಾರು 325ಕ್ಕೂ ಹೆಚ್ಚು ಜನರು ತರಬೇತಿ ಪಡೆದಿದ್ದಾರೆ. ಸದ್ಯ 500 ಜನ ತರಬೇತಿ ಪಡೆಯುತ್ತಿದ್ದಾರೆ. ಜನರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದ್ದು, ಬೆಳಗ್ಗೆ 4 ಮತ್ತು ಸಂಜೆ 3 ತಂಡಗಳಾಗಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ತರಬೇತುದಾರರನ್ನು ನೇಮಕ ಮಾಡಿದ್ದು, ಬಾಲಕಿಯರು ಮತ್ತು ಮಹಿಳೆಯರು ಈಜಲು ಬರುತ್ತಿದ್ದಾರೆ. ಹೆಚ್ಚು ಜನ ಮಹಿಳೆಯರಿರುವ ಕಾರಣ ಅವರಿಗೋಸ್ಕರವೇ ಸಂಜೆ 4ರಿಂದ 5ರವರೆಗೆ ಬ್ಯಾಚ್ ಮಾಡಲಾಗಿದೆ.
4 ಜನ ತರಬೇತುದಾರರಿದ್ದಾರೆ. ಬೆಳಗ್ಗೆ ಮತ್ತು ಸಂಜೆಯ ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತದೆ. 40 ಜನರ ಒಂದು ಬ್ಯಾಚ್, ವಯಸ್ಸು- ಲಿಂಗ ಆಧರಿಸಿ ಬೇರೆ- ಬೇರೆ ತಂಡಗಳಿರುತ್ತವೆ. ಬೆ.6.10ರ ವರೆಗೆ 4 ಬ್ಯಾಚ್‌ಗಳು, ಸಂಜೆ 4ರಿಂದ 5ರವರೆಗೆ ಮಹಿಳೆಯರಿಗೆ ಮತ್ತು 6ರಿಂದ 7ರವರೆಗೆ ಹಿರಿಯ ನಾಗರಿಕರು, ಸರ್ಕಾರಿ ನೌಕರರ ಬ್ಯಾಚ್‌ಗಳಿವೆ.
ಸುಸಜ್ಜಿತ ಈಜುಕೊಳ: ಅಂತಾರಾಷ್ಟ್ರೀಯ ಗುಣಮಟ್ಟ, ಮಾನದಂಡಗಳನ್ನು ಬಳಸಿ ಈಜುಕೊಳ ನಿರ್ಮಾಣವಾಗಿದೆ. ಹೀಗಾಗಿ ಇಲ್ಲಿನ ಎಲ್ಲ ಕಾರ್ಯಚಟುವಟಿಕೆಗಳಿಗೆ ಉತ್ತಮ ಗುಣಮಟ್ಟ ಹೊಂದಿದೆ ಎನ್ನಲು ಅಡ್ಡಿಯಿಲ್ಲ. 21- 15 ಮೀಟರ್‌ನಷ್ಟು ಅಳತೆಯ ಈಜುಕೊಳದಲ್ಲಿ ರಕ್ಷಣಾತ್ಮಕವಾಗಿ ತರಬೇತಿ ನೀಡಲಾಗುತ್ತದೆ. ಈಜಿನ ಬಗ್ಗೆ ಏನೂ ತಿಳಿಯದೆ ಇರುವವರು ಕನಿಷ್ಠ 7ರಿಂದ 15 ದಿನಗಳೊಳಗೆ ಈಜನ್ನು ಕಲಿಯುತ್ತಾರೆ.
ಪ್ರತಿಯೊಬ್ಬರಿಗೂ ವಿಶೇಷ ಗಮನ ನೀಡುವ ಮೂಲಕ ಆರಂಭದಲ್ಲಿ ಈಜು ಕಲಿಯುವವರ ಮನಸ್ಸನ್ನು ಅದಕ್ಕಾಗಿ ಸಿದ್ಧಪಡಿಸಲಾಗುತ್ತದೆ. ಈಜುವುದು ಕಲೆ, ಅದರ ಬಗ್ಗೆ ತಿಳಿ ಹೇಳಲಾಗುತ್ತದೆ. ಸರಿಯಾಗಿ ಗ್ರಹಿಸಿದ್ದಲ್ಲಿ ವಾರದೊಳಗೆ ಗರಿಷ್ಠ 15 ದಿನದಲ್ಲಿ ಉತ್ತಮವಾಗಿ ಈಜಲೂ ಸಾಧ್ಯವಾಗುತ್ತದೆ.
ಸರ್ಕಾರದಿಂದ ಪ್ರತಿವರ್ಷ ಈಜುಕೊಳ ನಿರ್ವಹಣೆಗೆ 60 ಸಾವಿರ ಅನುದಾನ ನೀಡಲಾಗುತ್ತದೆ. ಅದನ್ನು ವಿವಿಧ ರೀತಿಯ ಕಾಮಗಾರಿ, ಅಭಿವೃದ್ಧಿ ಸಿಬ್ಬಂದಿ ವೇತನ ಮತ್ತು ನಿರ್ವಹಣೆಗೆ ಬಳಸಲಾಗುತ್ತದೆ. ಇದಕ್ಕಾಗಿಯೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ವಿಮ್ಮಿಂಗ್ ಅಕ್ವಾ ಅಸೋಸಿಯೇಶನ್ ಆರಂಭಿಸಲಾಗಿದೆ.
ಯಾರೇ ಇಲ್ಲಿ ಸದಸ್ಯತ್ವ ಪಡೆಯಬೇಕಾದರೂ ಅದೆಲ್ಲವನ್ನು ಡಿಡಿ ಮೂಲಕವೇ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ನೇರವಾಗಿ ಹಣ ಪಡೆಯುವುದಿಲ್ಲ. ಇದರಿಂದ ಪಾರದರ್ಶಕತೆ ಸಾಧ್ಯ. ಸದಸ್ಯತ್ವ ಬಯಸುವವರು ನೇರವಾಗಿ ಚಂದ್ರಶೇಖರ ಪಾಟೀಲ್ ಸ್ಟೇಡಿಯಂನಲ್ಲಿರುವ ಈಜುಕೊಳಕ್ಕೆ ಭೇಟಿ ನೀಡಿದರೆ ಸಾಕು, ಅಕ್ವಾ ಸಂಘದ ಸಿಬ್ಬಂದಿ ಅಲ್ಲಿ ಅಗತ್ಯ ಮಾಹಿತಿ, ಅರ್ಜಿ ನಮೂನೆ ನೀಡುತ್ತಾರೆ.
 


ಈಜು ಕಲಿತ 325 ಮಂದಿ
ಇಲ್ಲಿನ ಈಜುಕೊಳ ಬೇಸಿಗೆ ಝಳ ತಪ್ಪಿಸಲು ಮಾಡುವ ಜಳಕಕ್ಕಷ್ಟೇ ಸೀಮಿತವಾಗಿಲ್ಲ. ಇಲ್ಲಿನ ಅಕ್ವಾ ಅಸೋಸಿಯೇಷನ್ ಈಜು ತರಬೇತಿಗೂ ಹೆಚ್ಚಿನ ಒತ್ತು ನೀಡುತ್ತಿದೆ ಎನ್ನುತ್ತಾರೆ ಕಾರ್ಯದರ್ಶಿ ಭರತ ಭೂಷಣ. 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಅವರು ಮಾರ್ಚ್, ಏಪ್ರಿಲ್‌ನಲ್ಲೇ 325 ಮಂದಿ ಈಜು ಕಲಿತಿದ್ದಾರೆ. 5ರಿಂದ 50 ವರ್ಷದವರೆಗಿನ ಮಕ್ಕಳು, ಮಹಿಳೆಯರು, ಪುರುಷರಾದಿಯಾಗಿ ಅನೇಕರು ಈಜು ಕಲಿತಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.