ಆಡಳಿತ ನಿರ್ಲಕ್ಷ್ಯ: ಮೂಲ ಸೌಲಭ್ಯ ವಂಚಿತ ಗ್ರಾಮಗಳು
ಕ.ಪ್ರ. ವಾರ್ತೆ ಲಿಂಗಸ್ಗೂರು ಏ.29
ತಾಲೂಕಿನ ಪೈದೊಡ್ಡಿ, ಯರಜಂತಿ ಗ್ರಾಮ ಹಾಗೂ ಕೆಲ ದೊಡ್ಡಿಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಇದರಿಂದ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪೈದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆಯಿಂದ ಜನತೆ ಬಾವಿಯ ನೀರು ಬಳಕೆಗೆ ಮುಂದಾಗಿದ್ದಾರೆ. ಕಳೆದ ವರ್ಷ ಕುಡಿಯುವ ನೀರಿನ ತೊಂದರೆ ಉಂಟಾದ ಸಂದರ್ಭದಲ್ಲಿ ಸುಮಾರು ರು. 8 ಲಕ್ಷ ಖರ್ಚು ಮಾಡಿ ತೆರೆದ ಬಾವಿ ಹೂಳು ತೆಗೆದು ಪೈಪ್ಲೈನ್ ಅಳವಡಿಸಿ ನೀರು ಪೂರೈಕೆಗೆ ಮುಂದಾಗಿತ್ತು. ಆದರೆ ವಿದ್ಯುತ್ ವ್ಯತ್ಯಯ, ಅನಿಯಮಿತ ವಿದ್ಯುತ್ ಪೂರೈಕೆಯಿಂದ ಸಮರ್ಪಕ ನೀರು ಪೂರೈಕೆಯಾಗದ ಪರಿಣಾಮ ಗ್ರಾಮದ ಹಳೇ ಬಾವಿ ನೀರೇ ಗತಿ ಎಂಬಂತಾಗಿದೆ.
ಪೈದೊಡ್ಡಿ ಗ್ರಾಮದಿಂದ ಯರಜಂತಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಸುಮಾರು 15 ರೈತ ಕುಟುಂಬಗಳು ವಾಸವಾಗಿವೆ. ಕೆಲ ವರ್ಷಗಳ ಹಿಂದೆ ಕುಡಿಯುವ ನೀರಿನ ಟ್ಯಾಂಕ್ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ನೀರಿನ ಟ್ಯಾಂಕ್ ನಿರ್ಮಿಸಿದ ಕೇವಲ 6 ತಿಂಗಳಲ್ಲಿ ನೀರು ಪೂರೈಕೆ ಮಾಡಲು ಸಾಧ್ಯವಾಗದ ಪರಿಣಾಮ ಉಪಯೋಗಕ್ಕೆ ಬಾರದೆ ಪಾಳುಬಿದ್ದಿದೆ. ಈ ವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ರು. 1.30 ಲಕ್ಷ ವೆಚ್ಚದಲ್ಲಿ ನೀರಿನ ತೊಟ್ಟಿ ಅಳವಡಿಸಲಾಗಿದೆ. ಆದರೆ ಇದೂ ಕೂಡ ಉಪಯೋಗಕ್ಕೆ ಬಾರದೆ ಇಲ್ಲಿನ ಜನತೆ ಖಾಸಗಿ ವ್ಯಕ್ತಿಯೊಬ್ಬರ ಹೊಲದ ಬಾವಿ ನೀರು ತಂದು ಕುಡಿಯುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.
ಯರಜಂತಿ ಗ್ರಾಮದಿಂದ ಸೋಮನಮರಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಬಾರದಂತಾಗಿದೆ. ಕಳೆದ 2009-10ನೇ ಸಾಲಿನಲ್ಲಿ ಜಿಪಂ ಎಂಜಿನಿಯರಿಂಗ್ ಉಪವಿಭಾಗದಿಂದ ಸುಮಾರು ರು. 65 ಲಕ್ಷ ವೆಚ್ಚದಲ್ಲಿ 4 ಕಿಮೀ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಈಗ ರಸ್ತೆ ಮೇಲಿನ ಡಾಂಬರ್ ಕಿತ್ತುಹೋಗಿದ್ದು, ಕಲ್ಲುಗಳು ತೇಲಿವೆ. ಕೆಲವೆಡೆ ತಗ್ಗು-ಗುಂಡಿಗಳು ನಿರ್ಮಾಣಗೊಂಡು ಸಂಚಾರಕ್ಕೆ ತೊಂದರೆಯಾಗಿದೆ. ಅಲ್ಲದೆ ರಸ್ತೆಗೆ ಅಡ್ಡವಾಗಿ ಹಳ್ಳದ ಹಾಗೂ ನಾರಾಯಣಪುರ ಬಲದಂಡೆ ನಾಲೆಯ ನೀರು ಹರಿಯುತ್ತಿದ್ದು, ಸಾರ್ವಜನಿಕರ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ರಸ್ತೆಗೆ ಅಡ್ಡವಾಗಿ ಹರಿಯುವ ನೀರು ದಾಟುವ ಸಂದರ್ಭದಲ್ಲಿ ವಾಹನಗಳು ಅಪಘಾತಕ್ಕೀಡಾಗಿರುವುದುಂಟು. ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪೈದೊಡ್ಡಿ ಹಾಗೂ ಯರಜಂತಿ ಗ್ರಾಮಗಳು ಹಾಗೂ ದೊಡ್ಡಿಗಳಿಗೆ ಮೂಲಸೌಕರ್ಯ ಕಲ್ಪಿಸುವತ್ತ ಗಮನ ಹರಿಸಬೇಕೆಂಬುದು ಜನರ ಒತ್ತಾಸೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

