ರಾಯಚೂರು

'ಮೋದಿ ಪ್ರಧಾನಿಯಾದರೆ ಅಭಿವೃದ್ಧಿ'

Published On :

ಲಿಂಗಸ್ಗೂರು: ದೇಶದ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿ ಪ್ರಧಾನಿಯಾಗುವುದು ಅಗತ್ಯವಾಗಿದೆ ಎಂದು ನಮೋ ಬ್ರಿಗೇಡ್ ಸಂಚಾಲಕ ನಿತ್ಯಾನಂದ ಹೇಳಿದರು.
ಪಟ್ಟಣದ ಗಡಿಯಾರ ಚೌಕ್ ವೃತ್ತದಲ್ಲಿ ಮಂಗಳವಾರ ಕಾರ್ಯಕರ್ತರನ್ನುದ್ದೇಶಿ ಮಾತನಾಡಿದ ಅವರು, ದೇಶದಲ್ಲಿ ಕಳೆದ 9 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದುರ್ಬಲ ಆಡಳಿತ, ಇಚ್ಛಾಸಕ್ತಿ ಕೊರತೆ, ದೂರದೃಷ್ಟಿಯಿಲ್ಲದ ಚಿಂತನೆಗಳು, ಸ್ಪಷ್ಟತೆಯಿಲ್ಲದ ಯೋಜನೆಗಳಿಂದ ದೇಶ ದುರ್ಬಲ ಸ್ಥಿತಿಗೆ ತಲುಪಿದೆ. ಬೆಲೆ ಏರಿಕೆ, ರುಪಾಯಿ ಮೌಲ್ಯ ಕುಸಿತದಿಂದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಅತ್ಯಂತ ದುರ್ಬಲ ರಾಷ್ಟ್ರವೆಂಬ ಭಾವನೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ಆದರೆ ಗುಜರಾತ್ ರಾಜ್ಯದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕುಡಿಯುವ ನೀರು, ವಿದ್ಯುತ್, ಉದ್ಯೋಗ, ಕೈಗಾರಿಕೆ, ಕೃಷಿ ಸೇರಿದಂತೆ ವಿವಿಧ ರಂಗಗಳಲ್ಲಿ ಅಭಿವೃದ್ಧಿಪಡಿಸುವ ಮೂಲಕ ಮಾದರಿ ರಾಜ್ಯವನ್ನಾಗಿ ಮಾಡಿದ್ದಾರೆ. ಇದೆ ರೀತಿ ದೇಶದೆಲ್ಲೆಡೆ ಅಭಿವೃದ್ಧಿ ಹೊಂದಬೇಕಾದರೆ ಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಕೈಜೋಡಿಸಬೇಕು. ದೇಶದ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾದ ಕಾಂಗ್ರೆಸ್ ತೊಲಗಿಸಬೇಕೆಂದು ಕರೆ ನೀಡಿದರು.
ರಾಜ್ಯಾದ್ಯಂತ ನಮೋ ಬ್ರಿಗೇಡ್ ವತಿಯಿಂದ ನರೇಂದ್ರ ಮೋದಿ ಅವರ ಸಂದೇಶ ತಲುಪಿಸಲು ಮೋದಿ ಸ್ತಬ್ಧಚಿತ್ರದ ರಥಯಾತ್ರೆ 35 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, 15ನೇ ದಿನ ಲಿಂಗಸ್ಗೂರು ಪಟ್ಟಣಕ್ಕೆ ಆಗಮಿಸಿದೆ ಎಂದರು. ಲಿಂಗಸ್ಗೂರು ಪಟ್ಟಣಕ್ಕೆ ನರೇಂದ್ರ ಮೋದಿ ಸ್ತಬ್ಧಚಿತ್ರದ ರಥಯಾತ್ರೆ ಮಂಗಳವಾರ ಆಗಮಿಸುತ್ತಿದ್ದಂತೆ ಮುಖಂಡರು ಎಪಿಎಂಸಿ ಬಳಿ ಸ್ವಾಗತಿಸಿ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮೂಲಕ ಸಂಚರಿಸಿದರು.
ಈ ವೇಳೆ ಬಿಜೆಪಿ ತಾಲೂಕಾಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್, ಮಾಜಿ ಅಧ್ಯಕ್ಷ ರಮೇಶ ಜೋಷಿ, ಮುಖಂಡರಾದ ಲಕ್ಷ್ಮೀಕಾಂತರೆಡ್ಡಿ, ಸಿದ್ದು ಬಂಡಿ, ಸಿದ್ದು ಬಡಿಗೇರ, ಹನುಮೇಶ ಸರಾಫ್, ಪ್ರತಾಪರೆಡ್ಡಿ, ಶಶಿಕಾಂತ ಗಸ್ತಿ, ನಾಗಭೂಷಣ, ಜಗದೀಶ ವಸ್ತ್ರದ, ನಾರಾಯಣಪ್ಪ ನಾಯಕ, ಅಮರಯ್ಯ ಹಿರೇಮಠ, ಮಲ್ಲಪ್ಪ ಫೂಲಬಾವಿ, ಬಸಡ್ಡೆಪ್ಪ ಕಸಬಾ ಲಿಂಗಸ್ಗೂರು ಇದ್ದರು.
ನಮೋ ತೇರಿಗೆ ಭವ್ಯ ಸ್ವಾಗತ
ಮುದಗಲ್: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಭಾರತ ಉಳಿಸಿ ತೇರಿಗೆ ಪಟ್ಟಣದಲ್ಲಿ ಭವ್ಯ ಸ್ವಾಗತ ಮಾಡಲಾಯಿತು.
ಸ್ಥಳೀಯ ಎಪಿಎಂಸಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪಪಂ ಆವರಣದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಮೋದಿಯವರ ಸಾಧನೆ ಮತ್ತು ಮುಂದಿನ ಯೋಜನೆಗಳ ಕುರಿತಾದ ಕಿರುಚಿತ್ರ ಪ್ರದರ್ಶನ ಮಾಡಲಾಯಿತು.
ಬಿಜೆಪಿ ಕಾರ್ಯಕರ್ತರು ಬೈಕ್ ರ್ಯಾಲಿ ಮಾಡಿದರು. ಬಿಜೆಪಿ ಘಟಕದ ಅಧ್ಯಕ್ಷ ಎಸ್.ಎ. ಮುಬಿನ್, ಗುರುಬಸಪ್ಪ ಸಜ್ಜನ್, ಸಿದ್ದಯ್ಯ ಹೊರಪೇಟೆ, ಸಣ್ಣ ಸಿದ್ದಯ್ಯ, ಅನಂತರಾವ ದೇಶಪಾಂಡೆ, ಸಿದ್ದು ಬಂಡಿ, ಗ್ಯಾನಪ್ಪ ಹೊಳ್ಯಾಚಿ, ಚನ್ನಬಸವ, ಶರಣಪ್ಪ ದೇಸಾಯಿ, ಅಮರಪ್ಪ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.