ಪ್ರಮಾಣಪತ್ರ ವಿತರಣಾ ಕೇಂದ್ರಕ್ಕೆ ಚಾಲನೆ
ಲಿಂಗಸ್ಗೂರು: ಸ್ಥಳೀಯ ತಹಸೀಲ್ದಾರ್ ಕಚೇರಿ ಆವರಣದಲ್ಲಿನ ಅಟಲ್ಜೀ ಜನಸ್ನೇಹಿ ಕೇಂದ್ರದಲ್ಲಿ ಸ್ವೀಕೃತಿಯಾದ ಅರ್ಜಿಗಳ ವಿವಿಧ ಪ್ರಮಾಣ ಪತ್ರಗಳ ವಿತರಣಾ ಕೇಂದ್ರ ಆರಂಭಕ್ಕೆ ಬುಧವಾರ ಸಹಾಯಕ ಆಯುಕ್ತ ಟಿ.ಯೋಗೇಶ್ ಚಾಲನೆ ನೀಡಿದರು. ರಾಜ್ಯದ ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಅವರ ಆದೇಶದ ಮೇರೆಗೆ ಕಂದಾಯ ಇಲಾಖೆ 2013 ಜು.1 ರಿಂದ 2014 ಫೆ.4ರ ವರೆಗೆ ಸ್ವೀಕೃತಿಯಾದ ಅರ್ಜಿಗಳ ವಿತರಣೆಗೆ ಪ್ರತ್ಯೇಕ ಕೌಂಟರ್ ಪ್ರಾರಂಭಿಸಲಾಗಿದೆ. ಅರ್ಜಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು. ಈ ವೇಳೆ ತಹಸೀಲ್ದಾರ್ ಜಿ.ಎಸ್. ಮಹಾಜನ್, ಉಪ ತಹಸೀಲ್ದಾರ್ ಖಾಜಾ ಹುಸೇನ್, ಶಿರಸ್ತೇದಾರ ನಿಂಗಪ್ಪ, ಕಂದಾಯ ನಿರೀಕ್ಷಕ ತುಳಜಾರಾಮ್ ಸಿಂಗ್ ಇತರರು ಇದ್ದರು.
--
ಕೊಲೆ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹ
ಕ.ಪ್ರ. ವಾರ್ತೆ, ಲಿಂಗಸ್ಗೂರು, ಫೆ.5
ಶಹಾಪುರ ತಾಲೂಕಿನ ಕನ್ಯಾಕೋಳೂರು ಗ್ರಾಮದ ದೇವೇಂದ್ರಪ್ಪ ದಳಪತಿ ಕೊಲೆ ಹಾಗೂ 12 ಜನರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಬುಧವಾರ ಧರಣಿ ನಡೆಸಿದರು.
ಕನ್ಯಾಕೋಳೂರು ಗ್ರಾಮದಲ್ಲಿ ಜ.17ರಂದು ಚೌಡೇಶ್ವರಿ ಜಾತ್ರೆ ನಿಮಿತ್ತ ಬ್ಯಾನರ್ ಹಾಕುವ ವಿಷಯಕ್ಕೆ ಸಂಬಂಧಿಸಿ ದಲಿತರು ಮತ್ತು ಸವರ್ಣೀಯರ ಮಧ್ಯೆ ನಡೆದ ಸಂಘರ್ಷದಲ್ಲಿ ದೇವೇಂದ್ರಪ್ಪ ದಳಪತಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ. ಇಂತಹ ಘಟನೆಗಳು ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿವೆ. ದಲಿತರು ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ.
ತನಿಖೆ ನಡೆಸಿ: ದಲಿತ ದೇವೇಂದ್ರಪ್ಪ ದಳಪತಿ ಕೊಲೆ ಪ್ರಕರಣ ಸಿಬಿಐ ತನಿಖೆಗೆ ಒಳಪಡಿಸಬೇಕು. ಮೃತರ ಕುಟುಂಬಕ್ಕೆ ರು. 50 ಲಕ್ಷ ಪರಿಹಾರ ಹಾಗೂ 5 ಎಕರೆ ಜಮೀನು ನೀಡಬೇಕು. ಗುಲ್ಬರ್ಗ ವಿಭಾಗಾದ್ಯಂತ ನಡೆದಿರುವ ದಲಿತರ ಕೊಲೆ, ಅತ್ಯಾಚಾರ, ದೌರ್ಜನ್ಯ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು. ದಲಿತರ ಮೇಲೆ ನಡೆದ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ರಚಿಸಬೇಕು. ಗೌಡೂರು ತಾಂಡಾ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು.
ಸದಸ್ಯತ್ವ ಅನರ್ಹಗೊಳಿಸಿ: ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ಘಟನೆ ಸಿಬಿಐಗೆ ಒಪ್ಪಿಸಬೇಕು. ವಿಧಾನಸೌಧ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಮೇಲೆ ಗುಂಡಾವರ್ತನೆ ತೋರಿದ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರ ಸದಸ್ಯತ್ವ ಅನರ್ಹಗೊಳಿಸಬೇಕು. ಪ್ರತಿ ತಿಂಗಳು ಸಮಾಜ ಕಲ್ಯಾಣ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು ದಲಿತ ಕೇರಿಗಳಲ್ಲಿ ಸಭೆ ನಡೆಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಧರಣಿಯಲ್ಲಿ ದಸಂಸ ಕಾರ್ಯದರ್ಶಿ ಹುಲಗಪ್ಪ ಜೂಲಗುಡ್ಡ, ಖಜಾಂಚಿ ಬೈಲಪ್ಪ ತೆರಬಾವಿ, ಸಹಕಾರ್ಯದರ್ಶಿ ನಾಗರಾಜ ಕುದರಿ, ಮುಖಂಡರಾದ ಬಾಳಪ್ಪ ಗೊರೇಬಾಳ, ಹುಸೇನಪ್ಪ ಯರಡೋಣಿ, ಬಸವರಾಜ ಕುಣಿಕಲ್ಲೂರ, ಸಂಗಪ್ಪ ಭೋಗಾಪುರ, ಮುತ್ತಣ್ಣ ಹಲ್ಕಾವಟಗಿ, ನಾಗರಾಜ ಹಾಲಬಾವಿ, ಹನುಮಂತ ಜಾಲಿಬೆಂಚಿ, ಹುಸೇನಪ್ಪ ನಿಲೋಗಲ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

