ಸಾಕ್ಷರತಾ ಕಾರ್ಯಕರ್ತರ ಪ್ರತಿಭಟನೆ
ಕ.ಪ್ರ. ವಾರ್ತೆ, ರಾಯಚೂರು, ಫೆ.5
ಬಾಕಿ ವೇತನ ಪಾವತಿ, ಪ್ರಯಾಣ ಭತ್ಯೆ ನೀಡಿಕೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾಕ್ಷರತಾ ಪ್ರೇರಕರ ಹಾಗೂ ಸಂಯೋಜಕರ ಸಂಘದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಸಿಎಂಗೆ ಮನವಿ ಸಲ್ಲಿಸಿ, ಕಳೆದ ಒಂದೂವರೆ ವರ್ಷದಿಂದ ಸಾಕ್ಷರತಾ ಪ್ರೇರಕರ ವೇತನ ಪಾವತಿಯಾಗಿಲ್ಲ. ಅದೇ ರೀತಿ ತಾಲೂಕು ಸಂಯೋಜಕರ ಒಂದು ವರ್ಷದ ವೇತನ ಹಾಗೂ ಪ್ರಯಾಣದ ಭತ್ಯೆಯನ್ನು ಆಡಳಿತ ಪಾವತಿಸಿಲ್ಲ ಎಂದು ಆರೋಪಿಸಿದರು.
ಕನಿಷ್ಠ ವೇತನಕ್ಕೆ ಆಗ್ರಹ: ಸಾಕ್ಷರತಾ ಪ್ರೇರಕರನ್ನು ಹಾಗೂ ಸ್ವಯಂ ಸೇವಕರನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕು. ತಾಲೂಕು ಸಂಯೋಜಕರಿಗೆ 15 ಸಾವಿರ ಹಾಗೂ ಪ್ರೇರಕರಿಗೆ 10 ಸಾವಿರ ಕನಿಷ್ಠ ವೇತನ ನೀಡಬೇಕು. 1990-91ರಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿದರು.
ಸಾಕ್ಷರತಾ ಕಾರ್ಯಕ್ರಮದಲ್ಲಿ ದುಡಿಯುತ್ತಿರುವ ಮಹಿಳಾ ಕಾರ್ಯಕರ್ತರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಸಾಕ್ಷರತಾ ಪ್ರೇರಕರನ್ನು ಹಾಗೂ ಸ್ವಯಂ ಸೇವಕರನ್ನು ಪಂಚಾಯಿತಿ ನೌಕರರೆಂದು ಪರಿಗಣಿಸುವವರೆಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹಾಗೂ ನಿರ್ಮಲ ಭಾರತ ಯೋಜನೆಯಲ್ಲಿ ಕಾಯಕಬಂಧು ಮತ್ತು ಸ್ವಚ್ಛತಾಧೂತರೆಂದು ಪರಿಗಣಿಸಿ ಮುಂದುವರಿಸಬೇಕೆಂದು ಒತ್ತಾಯಿಸಿದರು.
ಉದ್ಯೋಗ ಭದ್ರತೆ ಕಲ್ಪಿಸಿ: ಸರ್ಕಾರದ ವಿವಿಧ ಯೋಜನೆಗಳ ಸಮೀಕ್ಷೆ ಕಾರ್ಯಗಳನ್ನು ಸಾಕ್ಷರತಾ ಪ್ರೇರಕರಿಗೆ ಹಾಗೂ ಸಂಯೋಜಕರಿಗೆ ನೀಡಬೇಕು. ಸಾಕ್ಷರತಾ ಪ್ರೇರಕರು ಹಾಗೂ ಸಂಯೋಜಕರಿಗೆ ಕಡ್ಡಾಯವಾಗಿ ಬಿಪಿಎಲ್ ಕಾರ್ಡು, ನಿವೇಶನ ಹಾಗೂ ಜನಶ್ರೀ ವಿಮಾ ಯೋಜನೆಯ ಲಾಭ ದೊರಕಿಸಬೇಕು. ಸಾಕ್ಷರತಾ ಪ್ರೇರಕರನ್ನು ಯಾವುದೇ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕದಂತೆ ಕ್ರಮ ಕೈಗೊಳ್ಳಬೇಕು. ಎಲ್ಲ ಗ್ರಾಪಂ ಮಟ್ಟದಲ್ಲಿ ಲೋಕ ಶಿಕ್ಷಣ ಕೇಂದ್ರಕ್ಕಾಗಿ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರಮುಖರಾದ ಶೇಕ್ಷಾಖಾದ್ರಿ, ಕೆ.ಜಿ. ವೀರೇಶ್, ಲೋಕೇಶ್, ತಿಮ್ಮಪ್ಪ ಮಲಿಯಾಬಾದ್, ಸಾಬಣ್ಣ ಕಂಬಲದಿನ್ನಿ, ವೆಂಕೋಬ ಕಾವಲಿ, ಸುರೇಶ್ ಜಾನೇಕಲ್, ಬಸಣ್ಣ ಮಟ್ಟೂರು, ಜಿಲಾನಿಪಾಷಾ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

