ಸುದ್ದಿ ಸಂಕ್ಷೇಪ
ಶೈಕ್ಷಣಿಕ ಸಹಾಯಧನ ವಿತರಣೆ
ದೇವದುರ್ಗ: 2012- 13ನೇ ಸಾಲಿನ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸ್ಥಳೀಯ ಪುರಸಭೆಯಿಂದ ಗುರುವಾರ ಶೈಕ್ಷಣಿಕ ಸಹಾಯ ಧನವನ್ನು ಶೇ.22.75ರ ಅಡಿ 2 ಲಕ್ಷ ಮೊತ್ತದ ನೆರವು ಹಂಚಿಕೆ ಮಾಡಲಾಯಿತು. ಪುರಸಭೆ ಮುಖ್ಯಾಧಿಕಾರಿ ಸರೋಜಾ ಪಾಟೀಲ್ ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 10ನೇ ತರಗತಿಯಿಂದ ಪದವಿವರೆಗೆ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಒಟ್ಟು 46 ವಿದ್ಯಾರ್ಥಿಗಳಿಗೆ 6.75 ಲಕ್ಷ ಲಭ್ಯವಿದ್ದು, ಆ ಪೈಕಿ ಸದ್ಯ 2 ಲಕ್ಷ ಮೊತ್ತದ ಚೆಕ್ ವಿತರಿಸಲಾಗಿದೆ ಎಂದು ತಿಳಿಸಿದರು. ಎಚ್. ಶಿವರಾಜ, ರಾಜಶೇಖರ ಪಾಟೀಲ್ ಮಾತನಾಡಿದರು. ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರಂಪೇಟ್, ಉಪಾಧ್ಯಕ್ಷ ನಾಗಪ್ಪ ಉಪ್ಪಾರ, ಸ್ಥಾಯಿ ಸಮಿತಿ ಅಧ್ಯಕ್ಷ ರಂಗಪ್ಪ ನಾಯಕ, ಪುರಸಭೆ ಸದಸ್ಯರಾದ ರಾಮಕೃಷ್ಣ, ವೆಂಕಟೇಶ ಮಕ್ತಲ್, ಯುನೂಸ್ ಇದ್ದರು.
14ರಂದು ಧ್ವನಿ-ಬೆಳಕು ಕಾರ್ಯಕ್ರಮ
ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 14ರಂದು ಧ್ವನಿ ಬೆಳಕು ದೃಶ್ಯ ವೈಭವಗಳ ರೂಪಕ ಮನುಷ್ಯ ಜಾತಿ ತಾನೊಂದೇ ವಲಂ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ವಾರ್ತಾ ಇಲಾಖೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟಿ. ಕನುಮಪ್ಪ ತಿಳಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿಯಿಂದ ಅರ್ಜಿ
ಗುರುಮಠಕಲ್: ರಾಯಚೂರು ಲೋಕಸಭೆಗೆ ಸ್ಪರ್ಧಿಸಬಯಸುವ ಅರ್ಹ, ಜನಪರ ಕಾಳಜಿಯುಳ್ಳ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆಸಕ್ತರು ಪಕ್ಷದ ವೆಬ್ಸೈಟ್ನಲ್ಲಿ ಅರ್ಜಿ ನಮೂನೆಗಳನ್ನು ಪಡೆದು ಭರ್ತಿ ಮಾಡಿ ಆನ್ಲೈನ್ನಲ್ಲೇ ಸಲ್ಲಿಸಬಹುದಾಗಿದೆ ಎಂದು ಯಾದಗಿರಿ ಜಿಲ್ಲಾ ಆಮ್ ಆದ್ಮಿ ಪಕ್ಷದ ಸಂಚಾಲಕರಾದ ಅಮೀನರೆಡ್ಡಿ ಪಾಟೀಲ್ ಹಾಗೂ ವೈಜನಾಥ ಗುರುಮಠಕಲ್ ಹಿರೇಮಠ ತಿಳಿಸಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಈ ಕ್ಷೇತ್ರದಿಂದ ಸ್ಪರ್ಧಿಸಬಯಸುವ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ವಿವರಕ್ಕೆ ಪಕ್ಷದ ಜಿಲ್ಲಾ ಸಂಚಾಲಕ ಅಮೀನರೆಡ್ಡಿ ಪಾಟೀಲ್(87221 53892), ವೈಜನಾಥ ಗುರುಮಠಕಲ್ ಹಿರೇಮಠ(9880562999) ಸಂಪರ್ಕಿಸಿ.
ನದಿಗೆ ಬಿದ್ದು ಸಾವು
ರಾಯಚೂರು: ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ಬಳಿ ತುಂಗಭದ್ರಾ ನದಿಗೆ ಆಕಸ್ಮಿಕವಾಗಿ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವಿಗೀಡಾಗಿದ್ದಾಳೆ. ಮೃತಳನ್ನು ಅಸ್ಮಾ ಪರಿಹೀನ್(16) ಎಂದು ಗುರುತಿಸಲಾಗಿದೆ. ಈಕೆಯು ಬೆಂಗಳೂರಿನ ನಿವಾಸಿಯಾಗಿದ್ದು, ಮುಕ್ಕುಂದಾ ಗ್ರಾಮಕ್ಕೆ ಬಂದಿದ್ದ ವೇಳೆ ನದಿಯಲ್ಲಿ ಸ್ನಾನ ಮಾಡಲು ತೆರಳಿದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಮುಳುಗಿ ಸಾವನ್ನಪ್ಪಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲುವೆಯಲ್ಲಿ ಶವ ಪತ್ತೆ
ರಾಯಚೂರು: ಸಿಂಧನೂರು ತಾಲೂಕಿನ ವೆಂಕಟೇಶ್ವರ ಕ್ಯಾಂಪಿನಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತನು 25ರಿಂದ 26 ವರ್ಷದವನಾಗಿದ್ದು, ತುಂಗಭದ್ರಾ ಮುಖ್ಯ ಕಾಲುವೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದ್ದು, ಮೃತನ ಶವವು ಅಯ್ಯಪ್ಪ ಮೇಟಿ ಎಂಬುವರ ಹೊಲದ ಮುಂದೆ ಕಾಲುವೆ ತೇಲಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

