ರಾಯಚೂರು

20 ನಿಮಿಷ 20 ಸುದ್ದಿ

Published On :

ಸ್ಲಂ ನಿವಾಸಿಗಳ ಪರ ಹೋರಾಟಗಾರನಿಗೆ ಸಂತಾಪ
ರಾಯಚೂರು: ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಪ್ರೊ. ಹಸನ್ ಮನ್ಸೂರ್ ಅವರ ನಿಧನಕ್ಕೆ ನಗರದ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಸಂತಾಪ ವ್ಯಕ್ತಪಡಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷ ಚಂದ್ರಶೇಖರ್ ಯಕ್ಲಾಸಪುರ, ಪ್ರಧಾನ ಕಾರ್ಯದರ್ಶಿ ಜನಾರ್ದನ ಹಳ್ಳಿಬೆಂಚಿ ಅವರು, ಹಸನ್ ಮನ್ಸೂರ್ ಅವರು ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಹೋರಾಡಿ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಜಂಟಿ ಕ್ರಿಯಾ ಸಮಿತಿಯನ್ನು 1999ರಲ್ಲಿ ಅಸ್ತಿತ್ವಕ್ಕೆ ತಂದು ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು ಎಂದಿದ್ದಾರೆ. ರಾಜ್ಯದಲ್ಲಿ ಸ್ಲಂ ಜನರನ್ನು ಸಂಘಟಿಸುವ ಪ್ರೇರಣಾ ಶಕ್ತಿಯಾಗಿ ಮುಂದೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಅಸ್ತಿತ್ವಕ್ಕೂ ಅವರು ಕಾರಣರಾಗಿದ್ದರು. ಸ್ಲಂ ನಿವಾಸಿಗಳ ಪರ ಅವರ ಹೋರಾಟ ಎಂದಿಗೂ ಮರೆಯಲಾಗದು. ಅಂಥ ಮಹಾನ್ ವ್ಯಕ್ತಿಯ ಅಗಲಿಕೆಯಿಂದ ಸ್ಲಂ ಸಮುದಾಯಕ್ಕೆ ಅಪಾರ ನೋವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ.

ನಾಳೆ ಬದ್ಧತಾ ಸ್ವೀಕಾರ ಕಾರ್ಯಕ್ರಮ
ರಾಯಚೂರು: ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದಲ್ಲಿ ಫೆ.17ರಂದು ಬಾಲ್ಯ ವಿವಾಹ ನಿಷೇಧ ಬದ್ಧತಾ ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ. ನಗರದ ರಂಗಮಂದಿರದಲ್ಲಿ ಅಂದು ಮಧ್ಯಾಹ್ನ 2.30ಕ್ಕೆ ನಡೆಯುವ ಸಮಾರಂಭವನ್ನು ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಂಸ್ಕೃತಿ ಚಿಂತಕ ರಂಜಾನ್ ದರ್ಗಾ, ನಗರ ಶಾಸಕ ಡಾ. ಶಿವರಾಜ್ ಪಾಟೀಲ್, ಗ್ರಾಮೀಣ ಶಾಸಕ ತಿಪ್ಪರಾಜು ಹವಾಲ್ದಾರ್ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಎಸ್ಪಿ ಎಂ.ಎನ್. ನಾಗರಾಜ್, ಡಿಡಿಪಿಐ ರಾಮಾಂಜನೇಯ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ನಗರದ ಜಸ್ಟಿಸ್ ಶಿವರಾಜ್ ಪಾಟೀಲ್ ಪ.ಪೂ. ಕಾಲೇಜಿನ ಸಂಸ್ಥಾಪಕ ಚನ್ನಾರೆಡ್ಡಿ ಪಾಟೀಲ್ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ನಗರೇಶ್ವರ ದೇವಸ್ಥಾನದಲ್ಲಿ ನಾಳೆ ಧನ್ವಂತರಿ ಹೋಮ
ರಾಯಚೂರು: ನಗರದ ತಿಮ್ಮಾಪುರಪೇಟೆಯ ಆರ್ಯವೈಶ್ಯ ಸಂಘದಿಂದ ಫೆ.17ರಂದು ನಗರದಲ್ಲಿ ಧನ್ವಂತರಿ ಹೋಮ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ದೇವನಪಲ್ಲಿ ವೆಂಕಣ್ಣಶೆಟ್ಟಿ ಅವರು, ನಗರದ ನಗರೇಶ್ವರ ದೇವಸ್ಥಾನದಲ್ಲಿ ಫೆ.17ರಂದು ಬೆಳಗ್ಗೆ 10ರಿಂದ ಧನ್ವಂತರಿ ಹೋಮ ನಡೆಯಲಿದೆ. ಧನ್ವಂತರಿ ಹೋಮದ ಅಂಗವಾಗಿ ಬೆಳಗ್ಗೆ 6.30ಕ್ಕೆ ದೇವರಿಗೆ ರುದ್ರಾಭಿಷೇಕ, 8ಕ್ಕೆ ಗಣಪತಿ ಪೂಜೆ, ದೇವತೆ ಸ್ಥಾಪನಾ ಪೂಜೆ, 9ಕ್ಕೆ ನವಗ್ರಹ ಹೋಮ, 10ಕ್ಕೆ ಧನ್ವಂತರಿ ಹೋಮ ಹಾಗೂ ಬೆಳಗ್ಗೆ 11.55ಕ್ಕೆ ಹೋಮದ ಪೂರ್ಣಾಹುತಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಲೋಕ ಕಲ್ಯಾಣಾರ್ಥವಾಗಿ ಆರ್ಯವೈಶ್ಯ ಸಮಾಜದವರಿಂದ ಹೋಮ ಕಾರ್ಯಕ್ರಮ ಆಯೋಜಿಸಿದ್ದು ನಗರದ ಎಲ್ಲರೂ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.

ಅಗ್ನಿಶಾಮಕ ದಳದಿಂದ ಅಣಕು ಪ್ರದರ್ಶನ
ಲಿಂಗಸ್ಗೂರು: ಆಕಸ್ಮಿಕ ಬೆಂಕಿ ತಗುಲಿದಾಗ ಅದನ್ನು ಆರಿಸುವ ವಿವಿಧ ವಿಧಾನಗಳ ಕುರಿತು ಇತ್ತೀಚೆಗೆ ತಾಲೂಕಿನ ಗುಂಡಸಾಗರ ಗ್ರಾಮದ ಶಾಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಅಣಕು ಪ್ರದರ್ಶನ ನಡೆಸಿ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಅಧಿಕಾರಿ ರವೀಂದ್ರ ಘಾಟ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಮನೆಯಲ್ಲಿ ವಿದ್ಯುತ್, ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ, ಗುಡಿಸಲು, ಗೋದಾಮುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದರೆ ಅಂಥ ಸಂದರ್ಭದಲ್ಲಿ ಬೆಂಕಿ ಆರಿಸುವ ವಿಧಾನಗಳ ಬಗ್ಗೆ ವಿವರಿಸಿದರು. ಶಾಲೆಯ ಮುಖ್ಯಗುರು ಶರಣಪ್ಪ ಮೇಟಿ, ಶಿಕ್ಷಕರಾದ ಮಹಾದೇವಪ್ಪ, ಅಲ್ಲಾಭಕ್ಷ, ಮೌನೇಶ ನಾಯಕ, ರೇಖಾ, ಅಮಿತಾ, ಸುಧಾರಾಣಿ, ನೇತ್ರಾವತಿ ಹಾಗೂ ಎಸ್ಡಿಎಂಸಿ ಸದಸ್ಯರಿದ್ದರು.

ಆರೋಗ್ಯ ಮಾಹಿತಿ ಶಿಬಿರ ಯಶಸ್ವಿ
ರಾಯಚೂರು: ನಗರದ ಮಾಣಿಕಪ್ರಭು ಅಂಧ ಮಕ್ಕಳ ಶಾಲೆಯಲ್ಲಿ ಇತ್ತೀಚೆಗೆ ಸುರಕ್ಷಾ ಸಂಸ್ಥೆಯಿಂದ ಆರೋಗ್ಯ ಮಾಹಿತಿ ಶಿಬಿರ ಆಯೋಜಿಸಲಾಗಿತ್ತು. ಮಹೆಬೂಬ್ ನಗರ ಜಿಲ್ಲೆಯ ಹುಸನಾಬಾದ್ನ ಪತಂಜಲಿ ಜ್ಞಾನ ತಪೋವನದ ಮಹರ್ಷಿ ಯೋಗಾನಂದಜೀ ಅವರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯೋಗದಿಂದಾಗುವ ಪ್ರಯೋಜನಗಳು, ಕಲುಷಿತ ಆಹಾರ ಹಾಗೂ ಪರಿಸರದಿಂದಾಗುವ ಅನಾಹುತಗಳ ಬಗ್ಗೆ ಅವರು ವಿವರಿಸಿದರು. ಈ ಸಂದರ್ಭದಲ್ಲಿ ಸುರಕ್ಷಾ ಸಂಸ್ಥೆಯಿಂದ ಮಕ್ಕಳಿಗೆ ಹಣ್ಣು ವಿತರಿಸಲಾಯಿತು. ಇನ್ನರ್ ವ್ಹೀಲ್ ಕ್ಲಬ್ನ ಅಧ್ಯಕ್ಷೆ ಸುಶ್ಮಾ ಪತಂಗೆ, ಸುರಕ್ಷಾ ಸಂಸ್ಥೆಯ ಅಧ್ಯಕ್ಷ ಪವನ ಕಿಶೋರ ಪಾಟೀಲ್, ಜಿ.ಎಸ್. ಕಲಾವತಿ, ಬಿ.ವಿ. ರಾಜುಗೌಡ, ಗೋಪಾಲ್ ಕೃಷ್ಣ, ನರೇಂದ್ರ ಆರ್ಯ ಸೇರಿದಂತೆ ಅನೇಕರಿದ್ದರು. ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿದ್ದರು.

22ರಂದು ಸಹಾಯಾರ್ಥ ಪ್ರದರ್ಶನ
ಲಿಂಗಸ್ಗೂರು: ಪಟ್ಟಣದ ಪದವಿ ಪೂರ್ವ ಕಾಲೇಜು ಒಳಾವರಣದಲ್ಲಿ ಫೆ.22ರಂದು ಕಲ್ಪವೃಕ್ಷ ಇಂಟಿಗ್ರೇಟೆಡ್ ಡೆವೆಲಪ್ಮೆಂಟ್ ಸೊಸೈಟಿಯಿಂದ ಸಂಜೆ 6ಕ್ಕೆ ಕಲ್ಪವೃಕ್ಷ ಸಾಂಸ್ಕೃತಿಕ ಸಂಜೆ ಸಹಾಯಾರ್ಥ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸೊಸೈಟಿ ಕಾರ್ಯದರ್ಶಿ ಆನಂದ ಭೋವಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಲ್ಪವೃಕ್ಷ ಕಲಾ ಕೇಂದ್ರದಿಂದ ವಿದ್ಯಾರ್ಥಿನಿ ಅನುಷಾ ಹಿರೇಮಠ್ ಸೇರಿದಂತೆ ವಿವಿಧ ಕಲಾವಿದರ ಭರತನಾಟ್ಯ, ವೆಸ್ಟರ್ನ್ ಡಾನ್ಸ್, ಜಾನಪದ ನೃತ್ಯ, ಸಂಗೀತ ಪ್ರದರ್ಶನ ನಡೆಸಲಾಗುತ್ತಿದ್ದು, ಅದರಂಗವಾಗಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಉತ್ತೇಜಿಸಲು ಹಾಗೂ ಎಚ್ಐವಿ, ಏಡ್ಸ್ ಬಾಧಿತ ಅನಾಥ ಮಕ್ಕಳ ಅನುಕೂಲಕ್ಕಾಗಿ ಸಹಾಯಾರ್ಥ ಪ್ರದರ್ಶನ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

23ರಂದು ವಿಕಲಚೇತನರ ಸಮಾವೇಶ
ರಾಯಚೂರು: ಮಾಣಿಕಪ್ರಭು ಶಿಕ್ಷಣ ಸಮಿತಿ ಮತ್ತು ಕರ್ನಾಟಕ ಅಂಗವಿಕಲರ ರಾಜ್ಯ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಫೆ.23ರಂದು ಹುಮನಾಬಾದ್ನಲ್ಲಿ ಕರ್ನಾಟಕ ಅಂಗವಿಕಲರ ರಾಜ್ಯ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ. ರಾಜ್ಯ ಮಟ್ಟದ ವಿಕಲಚೇತನರ ಸಮಾವೇಶವನ್ನು ಫೆ.23ರಂದು ಬೆಳಗ್ಗೆ 10ಕ್ಕೆ ಹುಮನಾಬಾದ್ ಬಳಿಯ ಮಾಣಿಕನಗರದಲ್ಲಿ ಆಯೋಜಿಸಿದ್ದು ಸಮಾವೇಶದಲ್ಲಿ ಸರ್ಕಾರಿ ಸೇವಾ ಸೌಲಭ್ಯಗಳ ಬಗ್ಗೆ ಮಾರ್ಗದರ್ಶನ, ವಿಕಲಚೇತನರಿಗೆ ಆತ್ಮ ಗೌರವದೊಂದಿಗೆ ಬದುಕಲು ಸ್ಫೂರ್ತಿ ತುಂಬುವುದು, ಸಾಧಕರಿಗೆ ಗೌರವಿಸಿ ಪ್ರೋತ್ಸಾಹಿಸುವುದು, ವಿಕಲಚೇತನರ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ವಿಕಲಚೇತನರ ಹಕ್ಕು ಒತ್ತಾಯದ ವರದಿ ಸಮ್ಮೇಳನದ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದೆ. ಸಮ್ಮೇಳನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಲು ಕೋರಿದೆ.

ಬಡ್ತಿ ಪ್ರಕ್ರಿಯೆ; ಅನುಮತಿಗೆ ಶಿಕ್ಷಕರ ಸಂಘ ಒತ್ತಾಯ
ರಾಯಚೂರು: ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡಿದ್ದು ಈ ಪ್ರಕ್ರಿಯೆಯಲ್ಲಿ ಡಿಡಿಪಿಐ ಯಾವುದೇ ರೀತಿಯ ನಿಯಮ ಉಲ್ಲಂಘಿಸಿಲ್ಲ. ಈ ಹಿನ್ನೆಲೆಯಲ್ಲಿ ಬಡ್ತಿ ಪಡೆದಂಥವರಿಗೆ ಸೇವೆಗೆ ಹಾಜರಾಗಲು ಅನುಮತಿಸುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ. ಈ ಕುರಿತು ಡಿಡಿಪಿಐಗೆ ಮನವಿ ಸಲ್ಲಿಸಿ, ಇತ್ತೀಚೆಗೆ ಜನಸಂಗ್ರಾಮ ಪರಿಷತ್ ಶಿಕ್ಷಕರ ಬಡ್ತಿ ಪ್ರಕ್ರಿಯೆಯಲ್ಲಿ ಹೈ.ಕ. ಭಾಗಕ್ಕೆ ನೀಡಿರುವ 371ನೇ ಕಲಂ(ಜೆ) ಅಡಿ ಮೀಸಲಾತಿ ನಿಗದಿಗೊಳಿಸದೇ ಬಡ್ತಿ ಕೌನ್ಸೆಲಿಂಗ್ ನಡೆಸಲಾಗಿದೆ ಎಂದು ಆರೋಪಿಸಿದ್ದರಿಂದ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಬಡ್ತಿ ಆದೇಶಕ್ಕೆ ಆನಂತರದಲ್ಲಿ ತಡೆ ಹಿಡಿದಿರುವುದು ಸರಿಯಲ್ಲ ಎಂದು ಸಂಘ ಟೀಕಿಸಿದೆ. ಜನಸಂಗ್ರಾಮ ಪರಿಷತ್ ಆರೋಪದ ಹಿನ್ನೆಲೆಯಲ್ಲಿ ಪ್ರಕ್ರಿಯೆಗೆ ತಡೆ ಹಿಡಿದಿರುವುದನ್ನು ಹಿಂಪಡೆದು ಕೂಡಲೇ ಬಡ್ತಿ ಪಡೆದವರಿಗೆ ಸೇವೆಗೆ ಹಾಜರಾಗಲು ಅವಕಾಶ ಕಲ್ಪಿಸಬೇಕು. ಕೌನ್ಸೆಲಿಂಗ್ನಲ್ಲಿ ಯಾವುದೇ ರೀತಿಯ ನಿಯಮ ಉಲ್ಲಂಘನೆಯಾಗಿಲ್ಲ. ಶೇ.80ರಷ್ಟು ಸ್ಥಾನ ಸ್ಥಳೀಯರಿಗೆ ಹಾಗೂ ಶೇ.20ರಷ್ಟು ಮುಖ್ಯ ಶಿಕ್ಷಕರ ಸ್ಥಾನ ಹೊರ ಜಿಲ್ಲೆಯವರಿಗೆ ನೀಡಲಾಗಿದೆ. ಸಂಘವು ಈ ಬಗ್ಗೆ ಗಮನಹರಿಸಿ ಅನ್ಯಾಯವಾಗದಂತೆ ನೋಡಿಕೊಂಡಿದೆ ಎಂದು ಸಂಘ ತಿಳಿಸಿದೆ.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ಆಯ್ಕೆ
ರಾಯಚೂರು: 2012-13ನೇ ಸಾಲಿಗೆ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿಗೆ ತಾಲೂಕಿನ ಉಡುಮಗಲ್ ಗ್ರಾಮದ ಮಹರ್ಷಿ ವಾಲ್ಮೀಕಿ ಯುವಕ ಸಂಘದ ರಾಮಯ್ಯ ನಾಯಕ ಆಯ್ಕೆಯಾಗಿದ್ದಾರೆ. ಕುರಿತು ಸರ್ಕಾರದ ಯುವಜನ ಸೇವಾ ಇಲಾಖೆಯ ಅಧೀನ ಕಾರ್ಯದರ್ಶಿ ಕಚೇರಿ ಆದೇಶ ಹೊರಡಿಸಿದ್ದು, ಸಮುದಾಯ ಅಭಿವೃದ್ಧಿ ಕಾರ್ಯಗಳಲ್ಲಿ ಗಣನೀಯ ಸಾಧನೆಗೈದ ಯುವಕ, ಯುವತಿಯರಿಗೆ ನೀಡುವ ಪ್ರಶಸ್ತಿಗೆ ಅರ್ಹರ ಆಯ್ಕೆಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ಸಭೆ ನಡೆದು, ತಾಲೂಕಿನ ಉಡುಮಗಲ್ನ ಮಹರ್ಷಿ ವಾಲ್ಮೀಕಿ ಯುವಕ ಸಂಘದ ರಾಮಯ್ಯ ನಾಯಕ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದೆ.

ವಾರ್ಷಿಕ ಸ್ನೇಹ ಸಮ್ಮೇಳನ
ಸಿಂಧನೂರು: ನಗರದ ಸುಕಾಲಪೇಟೆಯಲ್ಲಿರುವ ಕನಕದಾಸ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ ಫೆ.16ರಂದು ಆಯೋಜಿಸಲಾಗಿದೆ. ಕಾಲೇಜಿನ ಪ್ರಾಚಾರ್ಯ ಮಂಜುನಾಥ ಸೋಮಲಾಪುರ ಈ ವಿಷಯ ತಿಳಿಸಿದ್ದು, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಆಡಳಿತಾಧಿಕಾರಿ ಎಂ. ದೊಡ್ಡಬಸವರಾಜ ಅಧ್ಯಕ್ಷತೆ ವಹಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜಿಪಂ ಮಾಜಿ ಸದಸ್ಯ ಕೆ. ಕರಿಯಪ್ಪ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಪಂ. ಮಾಜಿ ಅಧ್ಯಕ್ಷ ರಮೇಶಪ್ಪ ಸಾಹುಕಾರ, ಕಾರಟಗಿಯ ರೆಡ್ಡಿ ವೀರಣ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೊಲ್ಲಾ ಶೇಷಗಿರಿರಾವ್, ನಗರಸಭೆ ಉಪಾಧ್ಯಕ್ಷೆ ಲಕ್ಷ್ಮಿ, ಬಿಇಒ ಅಮರಪ್ಪ ಭೋವಿ, ಹಂಪಯ್ಯಸ್ವಾಮಿ ಭಾಗವಹಿಸಲಿದ್ದಾರೆ.
ಎಕ್ಸ್ಲೆಂಟ್ ಸ್ವತಂತ್ರ ಕಾಲೇಜಿನಲ್ಲಿ: ನಗರದ ಎಕ್ಸ್ಲೆಂಟ್ ಸ್ವತಂತ್ರ ಕಾಲೇಜಿನ ಐದನೇ ವಾರ್ಷಿಕ ಸಮ್ಮೇಳನ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಫೆ.16ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹಂಪನಗೌಡ ಬಾದರ್ಲಿ ನೆರವೇರಿಸುವರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಹೊನ್ನೂರು ಹುಸೇನ್ ವಹಿಸುವರು. ನಗರಸಭೆ ಅಧ್ಯಕ್ಷ ಜಾಫರ್ ಅಲಿ ಜಾಗೀರದಾರ ಬಹುಮಾನ ವಿತರಿಸುವರು.

ಅದ್ಧೂರಿ ಜಾತ್ರಾ ಮಹೋತ್ಸವ
ಲಿಂಗಸ್ಗೂರು: ಪಟ್ಟಣದ ರೇಣುಕಾ ನಗರದ ರೇಣುಕಾದೇವಿ ಜಾತ್ರಾ ಮಹೋತ್ಸವ ಶುಕ್ರವಾರ ಅದ್ಧೂರಿಯಾಗಿ ಜರುಗಿತು. ರೇಣುಕಾ ಯಲ್ಲಮ್ಮ ದೇವಿಗೆ ರುದ್ರಾಭಿಷೇಕ, ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಬಳಿಕ ಈಶ್ವರ ದೇವಸ್ಥಾನದಿಂದ ರೇಣುಕಾದೇವಿ ದೇವಸ್ಥಾನದವರೆಗೆ ಡೊಳ್ಳು, ಭಾಜಾ ಭಜಂತ್ರಿಯೊಂದಿಗೆ ಕುಂಭ ಮೆರವಣಿಗೆ ನಡೆಸಲಾಯಿತು. ನಂತರ ಕಳಸಾರೋಹಣ, ಕುಂಭಾಭಿಷೇಕ, ಉಡಿ ತುಂಬುವುದು, ಮಹಾಮಂಗಳಾರತಿ, ಮಹಾಪ್ರಸಾದ ಕಾರ್ಯಕ್ರಮ ಜರುಗಿದವು. ತಿಂಥಿಣಿ ಬ್ರಿಡ್ಜ್ನ ಕನಕ ಗುರುಪೀಠದ ಸಿದ್ಧರಾಮಾನಂದಪುರಿ ಶ್ರೀಗಳು, ಮುಖಂಡರಾದ ಬಸವರಾಜ ಗಣೇಕಲ್, ಬಸವರಾಜ ಗುತ್ತೇದಾರ, ರಾಜು ಪಾಸ್ವಾಡಿ, ಲಿಂಗಣ್ಣ ಮರೋಳ, ನಾಗರಾಜ ತಿಪ್ಪಣ್ಣ, ಶರಣು ಗುತ್ತೇದಾರ, ಗುಂಡೂರಾವ್ ಕುಲಕರ್ಣಿ, ನಾಗಪ್ಪ ಬೋರಾವತ್ ಸೇರಿ ಅನೇಕರು ಪಾಲ್ಗೊಂಡಿದ್ದರು.

ಆಶ್ರಯ ಮನೆಯಲ್ಲಿ ಅಂಗನವಾಡಿ ಶಾಲೆ
ಮುದಗಲ್: ಪಟ್ಟಣ ಸಮೀಪದ ಕುಮಾರಖೇಡ-ಗೊಲ್ಲರಹಟ್ಟಿಯಲ್ಲಿ ಶಾಶ್ವತ ಕಟ್ಟಡ ಇಲ್ಲದೆ ಆಶ್ರಯ ಮನೆಯಲ್ಲಿ ಅಂಗನವಾಡಿ ಕೇಂದ್ರ ಆರಂಭಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಕ್ಕೆ ಅಂಗನವಾಡಿ ಕೇಂದ್ರ ಮಂಜೂರುಮಾಡಿ 3 ವರ್ಷ ಕಳೆದರೂ, ಸರ್ಕಾರ ಶಾಶ್ವತ ಕಟ್ಟಡ ನಿರ್ಮಿಸಲು ಮುಂದಾಗಿಲ್ಲ. ಸುಮಾರು 50 ಮನೆಗಳಿದ್ದು, 40ಕ್ಕೂ ಹೆಚ್ಚು ಮಕ್ಕಳು ಕೇಂದ್ರದಲ್ಲಿ ಕಲಿಯುತ್ತಿದ್ದಾರೆ. ಆಶ್ರಯ ಮನೆಯಲ್ಲಿ ರಾತ್ರಿ ಫಲಾನುಭವಿಗಳು ವಾಸವಾದರೇ, ಹಗಲಿನಲ್ಲಿ ಮಕ್ಕಳಿಗೆ ಅಂಗನವಾಡಿ ನಡೆಸಬೇಕು ಇದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ. ಉಪಾಹಾರ ಹೊರಗಡೆಯೇ ತಯಾರಿಸಿ ಮಕ್ಕಳಿಗೆ ನೀಡಬೇಕಾಗಿದೆ. ಕೇಂದ್ರದ ಆಹಾರ ಮತ್ತು ದಾಖಲೆಗಳುನ್ನು ದಾಸ್ತಾನುಮಾಡಲು ಜಾಗದ ಕೊರತೆಯಾಗಿದ್ದು, ಅಂಗನವಾಡಿ ಕೇಂದ್ರ ಹತ್ತಾರು ಸಮಸ್ಯೆಗಳಿಂದ ನರಳುತ್ತಿದೆ ಎಂದು ಮಕ್ಕಳ ಪಾಲಕರು ಆರೋಪಿಸಿದ್ದಾರೆ. ಕೂಡಲೇ ಅಧಿಕಾರಿಗಳು ಗಮನಹರಿಸಿ, ಸರ್ಕಾರಿ ಕಟ್ಟಡ ನಿರ್ಮಿಸಿ ಸೌಲಭ್ಯ ನೀಡಬೇಕು ಎಂಬುದು  ನಿವಾಸಿಗಳ ಒತ್ತಾಯಿಸಿದರು.

ಕ್ಷುಲ್ಲಕ ಕಾರಣ; ಕೊಪ್ಪರದಲ್ಲಿ ಘರ್ಷಣೆ
ದೇವದುರ್ಗ: ತಾಲೂಕಿನ ಕೊಪ್ಪರ ಗ್ರಾಮದಲ್ಲಿ ಕ್ಷುಲಕ ಕಾರಣಕ್ಕೆ ಶನಿವಾರ ಎರಡು ಕೋಮಿಗೆ ಸೇರಿದ ಗುಂಪುಗಳ ಮಧ್ಯ ಘರ್ಷಣೆ ಸಂಭವಿಸಿದ್ದು, ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮಾತಪಳ್ಳಿ ಜಾತ್ರೆಯಲ್ಲಿ ಪಾಲ್ಗೊಂಡು ಗ್ರಾಮಕ್ಕೆ ಮರಳುತ್ತಿದ್ದ ಒಂದು ಕೋಮಿನ ಯುವತಿಯನ್ನು ಮತ್ತೊಂದು ಕೋಮಿನ ಯುವಕ ಚುಡಾಯಿಸಿದ್ದಾನೆಂದು ಆರೋಪಿಸಿ ಯುವತಿಯ ಕೋಮಿನ ಯುವಕರು ದಾರಿ ಮಧ್ಯದಲ್ಲಿ ಜಗಳ ತೆಗೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿತ್ತು. ಅದೇ ವಿಷಯಕ್ಕೆ ಶನಿವಾರ ಮತ್ತೆ ಎರಡೂ ಕೋಮಿನವರು ಕೈ ಕೈ ಮಿಲಾಯಿಸಿದ್ದರಿಂದ ಘರ್ಷಣೆ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗ್ರಾಮದಲ್ಲಿ ಬಿಗಿ ಕಾವಲು ಹಾಕಿದ್ದಾರೆ. ಈ ಘಟನೆಗೆ ಸಂಬಂಧಿಸಿ ಎರಡೂ ಕಡೆಯವರಿಂದ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಡಿಎಸ್ಪಿ ಅನಿತಾ ಹದ್ದಣ್ಣವರ್ ಅವರು ಕೊಪ್ಪರ ಗ್ರಾಮಕ್ಕೆ ಶನಿವಾರ ಭೇಟೀ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಗ್ರಾಮದಲ್ಲಿ ಜಿಲ್ಲಾ ಮೀಸಲು ಪೊಲೀಸ್ ಪಡೆಯ ತುಕಡಿಯೊಂದನ್ನು ನಿಯೋಜಿಸಿದ್ದು, ಸದ್ಯ ಗ್ರಾಮದಲ್ಲಿ ಶಾಂತಿ ವಾತಾವರಣವಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆಂದು ತಿಳಿಸಿದ್ದಾರೆ.

ಮನ್ಸಲಾಪುರ; ತೆರೆದ ಮನೆ ಕಾರ್ಯಕ್ರಮ ಯಶಸ್ವಿ
ರಾಯಚೂರು: ತಾಲೂಕಿನ ಮನ್ಸಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ತೆರೆದ ಮನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಎಚ್.ಬಿ. ಸಣ್ಣಮನಿ ಪಾಲ್ಗೊಂಡು ಪೊಲೀಸ್ ಠಾಣೆಯ ಕಾರ್ಯನಿರ್ವಹಣೆ ಮತ್ತು ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಬಾಲಕಾರ್ಮಿಕ ಪದ್ಧತಿ ನಿಷೇಧ, ಬಾಲ್ಯವಿವಾಹ ನಿರ್ಮೂಲನೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಕಾನೂನು ಮಾಹಿತಿ ಒದಗಿಸಿದರು. ಯುನಿಸೆಫ್ ಕ್ಷೇತ್ರ ಸಂಯೋಜಕ ಸುದರ್ಶನ್ ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳು ಹಾಗೂ ಎಸ್ಡಿಎಂಸಿ ಪ್ರಮುಖರಿದ್ದರು.

ಮೂಲ ಸೌಲಭ್ಯ ಒದಗಿಸಲು ಸ್ಲಂ ನಿವಾಸಿಗಳ ಆಗ್ರಹ
ರಾಯಚೂರು: ಇಲ್ಲಿನ ಎಲ್ಬಿಎಸ್ ನಗರದ ಬಳಿಯಿರುವ ಮಹಿಬೂಬ್ ಸುಬಾನ್ ದರ್ಗಾ ಸ್ಲಂ ನಿವಾಸಿಗಳಿಗೆ ವಿವಿಧ ಮೂಲ ಸೌಲಭ್ಯ ಕಲ್ಪಿಸುವಂತೆ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಆಗ್ರಹಿಸಿದೆ. ಈ ಕುರಿತು ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆಯವರು ಹಾಗೂ ನಿವಾಸಿಗಳು, ಈ ಸ್ಲಂ ಪ್ರದೇಶಕ್ಕೆ ಕಳೆದ ಅನೇಕ ವರ್ಷಗಳಿಂದ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಮನುಷ್ಯರು ವಾಸಿಸಲು ಯೋಗ್ಯವಲ್ಲದಂಥ ಸ್ಥಿತಿಯಲ್ಲಿದೆ ಎಂದು ಆರೋಪಿಸಿದರು. ವಿಷ ಜಂತುಗಳ ಕಾಟವೂ ಇಲ್ಲಿ ಹೆಚ್ಚಾಗಿದ್ದು, ಅದರಿಂದ ಅನೇಕರು ರಾತ್ರಿ ವೇಳೆ ಕಾಲೋನಿಯಲ್ಲಿ ಸಂಚರಿಸಲೂ ಹೆದರುವಂತಾಗಿದೆ. ಕುಡಿಯುವ ನೀರು, ಬೀದಿ ದೀಪ, ಉತ್ತಮ ಸಂಪರ್ಕ ರಸ್ತೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೂಡಲೇ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸಂಘಟನೆ ಒತ್ತಾಯಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಚಂದ್ರಶೇಖರ್ ಯಕ್ಲಾಸಪುರ, ಜನಾರ್ದನ ಹಳ್ಳಿಬೆಂಚಿ, ರೆಹನಾ ಸುಲ್ತಾನ್, ಹಬೀಬುನ್ನೀಸಾ ಬೇಗಂ, ಲತೀಫ್, ಅಕ್ಬರ್ ಸಾಬ್, ಶೇಖಸಾಬ್, ಹಬೀಬುರ್ ರಹಮಾನ್, ನಾಜೀಮ ಬೇಗಂ ಸೇರಿ ಅನೇಕರಿದ್ದರು.

ಲಾರಿ-ಮ್ಯಾಕ್ಸ್ ಪಿಕಪ್ ಡಿಕ್ಕಿ: ಒಬ್ಬನ ಸಾವು
ಮುದಗಲ್: ಸಮೀಪದ ಡೈಮಂಡ್ ಡಾಬಾದ ಬಳಿಯ ಹಳ್ಳದ ಹತ್ತಿರ ಲಾರಿ ಮತ್ತು ಮ್ಯಾಕ್ಸ್ ಪಿಕಪ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ಜರುಗಿದೆ. ಮೃತಪಟ್ಟ ದುರ್ದೈವಿ ಲಿಂಗೋಜಿ ಕಟಗರ(44) ಸಾ. ಹಟ್ಟಿ ಎಂದು ಗುರುತಿಸಲಾಗಿದೆ. ಮ್ಯಾಕ್ಸ್ ಪಿಕಪ್ ವಾಹನದಲ್ಲಿ ಹಟ್ಟಿ ಗ್ರಾಮದಿಂದ ಕುರಿ, ಮೇಕೆಗಳನ್ನು ತುಂಬಿಕೊಂಡು ಅಮೀನಗಡದ ಸಂತೆಗೆ ಹೋಗುತ್ತಿರುವಾಗ ಪಟ್ಟಣದ ಡೈಮಂಡ್ ಡಾಬಾದ ಬಳಿ ಮಹಾರಾಷ್ಟ್ರ ಮೂಲದ ಲಾರಿಯೊಂದು ವೇಗವಾಗಿ ಬರುತ್ತಿತ್ತು.  ಚಾಲಕನ ನಿರ್ಲಕ್ಷ್ಯತನದಿಂದ ಹಳ್ಳದ ಸೇತುವೆ ಮೇಲೆ ಡಿಕ್ಕಿ ಹೊಡೆದಿದ್ದರಿಂದ ಮ್ಯಾಕ್ಸ್ ಪಿಕಪ್ ವಾಹನದ ಬಾಗಿಲು ತೆರೆದಿದ್ದುದರಿಂದ ಅದರಲ್ಲಿದ್ದ ಲಿಂಗೋಜಿ ಸೇತುವೆಯ ಬಾಂಡ್ಗಲ್ಲ ಮೇಲೆ ಬಿದ್ದಿದ್ದರಿಂದ ತಲೆಗೆ ತೀವ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಹಿತಿ ದೊರೆಯುತ್ತಿದ್ದಂತೆ ಮುದಗಲ್ಲ ಪಿಎಸ್ಐ ಸಂಗಮೇಶ ಶಿವಯೋಗಿ ಸ್ಥಳಕ್ಕೆ ಧಾವಿಸಿ, ನಾರಾಯಣ ಎನ್ನುವವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ಘಟನಾ ಸ್ಥಳಕ್ಕೆ ಮಸ್ಕಿ ಸಿಪಿಐ ಸತ್ಯನಾರಾಯಣರಾವ್ ಭೇಟಿ ನೀಡಿದ್ದಾರೆ.

ಗೋಪುರ ಧ್ವಂಸ; ಕ್ರಮಕ್ಕೆ ಒತ್ತಾಯಿಸಿ ಮನವಿ
ರಾಯಚೂರು: ದೇವಸೂಗೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಸೂಗೂರೇಶ್ವರ ದೇವಸ್ಥಾನದ ದಕ್ಷಿಣ ದ್ವಾರವನ್ನು ಕೆಲವರು ಸರ್ಕಾರದ ಮುಜರಾಯಿ ಇಲಾಖೆಯ ಪರವಾನಗಿಯಿಲ್ಲದೇ ಧ್ವಂಸಗೊಳಿಸಿದ್ದಾರೆಂದು ಆರೋಪಿಸಿ ಕೃತ್ಯ ಎಸಗಿದವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಗ್ರಾಮದ ದೇವಾಲಯದ ಭಕ್ತರು ಜಿಲ್ಲಾಡಳಿತದ ಮೂಲಕ ಮುಜರಾಯಿ ಸಚಿವರಿಗೆ ಮನವಿ ಸಲ್ಲಿಸಿ, ಸೂಗೂರೇಶ್ವರ ದೇವಸ್ಥಾನವು ಪುರಾತನವಾದುದಾಗಿದೆ. ಈ ದೇವಸ್ಥಾನದ ದಕ್ಷಿಣ ಭಾಗದ ಗೋಪುರವನ್ನು 1850ರಲ್ಲಿ ನಿರ್ಮಿಸಿದ್ದು ಪುರಾತನ ಗೋಪುರವನ್ನು ಇತ್ತೀಚೆಗೆ ಧ್ವಂಸಗೊಳಿಸಲಾಗಿದೆ ಎಂದು ದೂರಿದ್ದಾರೆ. ಸರ್ಕಾರ ಹಾಗೂ ಮುಜರಾಯಿ ಇಲಾಖೆಯ ಪೂರ್ವಾನುಮತಿಯಿಲ್ಲದೇ ಗೋಪುರ ಧ್ವಂಸಗೊಳಿಸಿದ್ದು ಇದರ ಹಿಂದೆ ರಾಜಕೀಯ ಪಿತೂರಿಯಿದೆ ಎಂದು ಆರೋಪಿಸಿದ ಭಕ್ತರು, ಕೂಡಲೇ ಘಟನೆಗೆ ಕಾರಣರಾದವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಮಲ್ಲಪ್ಪ ಆದೋನಿ, ಜಿ.ಎಸ್. ಕಲಾವತಿ, ಬಿ.ವಿ. ರಾಜುಗೌಡ, ಈಶ್ವರ ಆದೋನಿ, ಪವನ್ ಪಾಟೀಲ್, ಸುರೇಶಗೌಡ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.