ರಾಯಚೂರು

ಪರಿವರ್ತನೆಯಿಂದ ಭವಿಷ್ಯ ರೂಪಿಸಿಕೊಳ್ಳಿ

Published On :

ಕ.ಪ್ರ. ವಾರ್ತೆ  ರಾಯಚೂರು  ಫೆ.18
ಮಾನವನ ಜೀವ ದೇವರು ಕೊಟ್ಟಂತಹ ವರ ಎಂದು ಅರಿತು ಸನ್ಮಾರ್ಗದಲ್ಲಿ ಸಾಗುವ ನಿಟ್ಟಿನಲ್ಲಿ ಬದುಕಿನಲ್ಲಿ ಪರಿವರ್ತನೆ ತಂದುಕೊಳ್ಳುವಂತೆ ಚಂಬಲ್ ಕಣಿವೆಯಲ್ಲಿ ಹಿಂದೊಮ್ಮೆ ಡಕಾಯಿತನಾಗಿದ್ದ ಪಂಚಮ್‌ಸಿಂಗ್ ಸಲಹೆ ನೀಡಿದರು.
ನಗರದಲ್ಲಿ ಮಂಗಳವಾರ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ವತಿಯಿಂದ ಆಯೋಜಿಸಿದ್ದ ಪರಿವರ್ತನಾ ವಿಚಾರ ಮಂಡನೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ಜೀವನದ ವಿವಿಧ ಹಂತಗಳಲ್ಲಿ ಕಂಡ ಅನುಭವ ಹಂಚಿಕೊಂಡು ಜೀವಿತಾವಧಿಯ 14 ವರ್ಷ ಡಕಾಯಿತಿ, ಕೊಲೆ ಮತ್ತು ಸುಲಿಗೆಯಂಥ ಅಪರಾಧಿಕ ಕೃತ್ಯ ಎಸಗಿದ್ದ ತಾವು ಶಿಕ್ಷೆಗೆ ಗುರಿಯಾಗಿದ್ದಾಗಿ ತಿಳಿಸಿದರು.
ಬ್ರಹ್ಮಕುಮಾರಿ ಸಮಾಜ ಸಂಪರ್ಕದಿಂದ ಬದಲಾವಣೆ: ಜೈಲಿನಲ್ಲಿದ್ದಾಗಲೇ ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ಸಂಪರ್ಕಕ್ಕೆ ಬಂದಿದ್ದರಿಂದ ಆಧ್ಯಾತ್ಮಿಕ ಒಲವು ತಮ್ಮಲ್ಲಿ ಬೆಳೆಯಿತು. ಅದರಿಂದಾಗಿಯೇ ಬದುಕಿನಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡು ಉತ್ತಮ ವ್ಯಕ್ತಿಯಾಗಿ ಬದಲಾಗಲು ಸಾಧ್ಯವಾಯಿತು ಎಂದು ಹೇಳಿದರು.
ಇದುವರೆಗೆ ವಿವಿಧ ಕಾರಾಗೃಹಗಳಿಗೆ ಭೇಟಿ ನೀಡಿ 500 ಜನ ಕೈದಿಗಳ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದಾಗಿ ತಿಳಿಸಿದರು.
  ಜೈಲನ್ನು ಶಿಕ್ಷೆಯ ತಾಣವೆಂದು ಭಾವಿಸಿ ಬದುಕು ಹಾಳು ಮಾಡಿಕೊಳ್ಳದೇ ದೇವಾಲಯವೆಂದು ಅರಿತು ಆಧ್ಯಾತ್ಮಿಕ ಜ್ಞಾನ ಪಡೆದು ಭವಿಷ್ಯದ ಬದುಕನಲ್ಲಿ ಕಾರಾಗೃಹ ವಾಸಿಗಳು ಶಾಂತಿ- ನೆಮ್ಮದಿ ಬದುಕಿನಲ್ಲಿ ಕಾಣುವಂತೆ ಸಲಹೆ ನೀಡಿದರು.
ಆಧ್ಯಾತ್ಮಿಕ ಮನೋಭಾವದಿಂದ ಪರಿವರ್ತನೆ: ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಜಿ.ಎಂ. ಪಾಟೀಲ್ ಸಮಾರಂಭದಲ್ಲಿ ಮಾತನಾಡಿ, ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದವರ ಮನ ಪರಿವರ್ತನೆಯಾಗಿರುವುದು ಕಂಡುಬಂದಲ್ಲಿ ಕಾನೂನಿನಲ್ಲಿ ಅವರಿಗೆ ಅನುಕೂಲವಾಗುವಂಥ ಅನೇಕ ವಿಷಯಗಳನ್ನು ಸೇರಿಸಲಾಗಿದೆ ಎಂದ ಅವರು, ಆಧ್ಯಾತ್ಮಿಕ ಮನೋಭಾವನೆಯಿಂದ ಸಮಾಜದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ನಗರದ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸಮಾರಂಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಸ್ಮಿತಾ ಅಕ್ಕನವರು, ಜಿಲ್ಲಾ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ. ಮ್ಯಾಗೇರಿ ಮಾತನಾಡಿದರು. ನ್ಯಾಯಾಧೀಶರಾದ ಪಿ.ಜಿ. ಚಲುವಮೂರ್ತಿ, ಪ್ರಮುಖರಾದ ಹರವಿ ನಾಗನಗೌಡ, ಭೀಮರೆಡ್ಡಿ, ಹೊಸದೆಹಲಿಯ ಬ್ರಹ್ಮಕುಮಾರೀಸ್ ಸಂಸ್ಥೆಯ ಸುರೇಶ ಭಾಯಿ, ಪೊಲೀಸ್ ಸಿಬ್ಬಂದಿ ಹಾಗೂ ಕಾರಾಗೃಹ ವಾಸಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.