ರಾಯಚೂರು

ಖಾಸಗಿ ನರ್ಸಿಂಗ್ ಹೋಂನಲ್ಲಿ ಬೆಂಕಿ

Published On :

ಸಿಂಧನೂರು: ಬಸ್ ಸ್ಟಾಂಡ್ ಬಳಿ ಇರುವ ಅಶ್ವಿನಿ ನರ್ಸಿಂಗ್ ಹೋಂನ ವೈದ್ಯರ ಕೊಠಡಿಗೆ ಗುರುವಾರ ಬೆಳಗಿನ ಜಾವ ಮುಸುಕುಧಾರಿಯೊಬ್ಬ ಬಾಟಲೊಂದರಲ್ಲಿ ಪೆಟ್ರೋಲ್ ತಂದು ಹಾಕಿ ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ.
ಗುರುವಾರ ಬೆಳಗಿನ ಜಾವ 5.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಗಳ ಹೆರಿಗೆಗೆಂದು ಬಂದಿದ್ದ ಭೀಮಣ್ಣ ಎಂಬುವವರು ಘಟನೆಯನ್ನು ನೋಡಿ ಸಂಬಂಧಿಸಿದವರಿಗೆ ಸುದ್ದಿ ಮುಟ್ಟಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಆದರೂ ಬೆಂಕಿ ಜೋರಾಗಿ ಉರಿದಿದ್ದರಿಂದ ಅನೇಕ ಬೆಲೆ ಬಾಳುವ ಸಾಮಾನುಗಳು, ವೈದ್ಯಕೀಯ ಪರಿಕರಗಳು ಸುಟ್ಟಿವೆ. ಈಗೆ ಕೆಲ ದಿನಗಳ ಹಿಂದೆ ಬೊಮ್ಮನಾಳ ಇಜೆ ಗ್ರಾಮದ ಶರಣಪ್ಪ ಲೆಕ್ಕಂಪುರ ಎಂಬುವವರು ತಮ್ಮ ಮುಖಕ್ಕೆ ಬಾವು ಬಂದಿದೆ ಎಂದು ನರ್ಸಿಂಗ್ ಹೋಮ್‌ಗೆ ಬಂದಿದ್ದರು. ಡಾ. ಜಗದೀಶ ಅವರಿಗೆ ಇಂಜಕ್ಷನ್ ನೀಡಿದ್ದರು. ಆದರೆ ಇಂಜಕ್ಷನ್‌ನಿಂದ ವ್ಯತಿರಿಕ್ತ ಪರಿಣಾಮವಾಗಿ ಆತ ತನ್ನ ಪುರುಷತ್ವಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಶರಣಪ್ಪ ಕೊರಿಯರ್ ಮೂಲಕ ಪತ್ರ ರವಾನಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದ್ದನು ಎಂದು ಡಾ. ಜಗದೀಶ ಸುದ್ದಿಗಾರರಿಗೆ ತಿಳಿಸಿದರು.
ತಪ್ಪೊಪ್ಪಿಗೆ ಪತ್ರ: ನಂತರ ಈತನ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಫಿರ್ಯಾದಿ ದಾಖಲಾಗಿಸಲಾಗಿತ್ತು. ಜ. 1ರಂದು ಶರಣಪ್ಪ ಪುನಃ ತಮಗೆ ಫೋನ್ ಮಾಡಿ, ರು. 20ಲಕ್ಷ ಹಣ ಪರಿಹಾರವಾಗಿ ನೀಡಬೇಕೆಂದು ಒತ್ತಾಯಿಸಿದ್ದ. ಆಗ ತಾವು ಪುನಃ ಪೊಲೀಸ್ ಠಾಣೆಗೆ ಹೋಗಿ ಶರಣಪ್ಪನ ವರ್ತನೆ ಬಗ್ಗೆ ಹೇಳಿದ್ದೆ. ಪೊಲೀಸರು ಆತನನ್ನು ಕರೆಯಿಸಿ ತಪ್ಪೊಪ್ಪಿಗೆ ಪತ್ರ ಬರೆಯಿಸಿದ್ದರು. ಅಷ್ಟಕ್ಕೆ ಸುಮ್ಮನಿರದ ಶರಣಪ್ಪ ಫೆ. 20ರಂದು ರಾತ್ರಿ 1.15 ಸುಮಾರಿಗೆ ತಮ್ಮ ಈ ಮೇಲ್ ವಿಳಾಸಕ್ಕೆ ಸಂದೇಶ ಕಳುಹಿಸಿ, ತಮಗೆ ರು. 20 ಲಕ್ಷ ಹಣ ಕೊಡದಿದ್ದರೆ ಅಪಾಯ ಕಾದಿದೆ ಎಂದು ಬೆದರಿಸಿದ್ದಾನೆ. ಅಂದೇ ಬೆಳಗಿನ ಜಾವ ಈ ್ಞತ್ಯ ನಡೆದಿದ್ದರಿಂದ ಈ ಘಟನೆಗೆ ಶರಣಪ್ಪನೇ ನೇರ ಹೊಣೆಗಾರ ಎಂದು ಡಾ.ಜಗದೀಶ ಆರೋಪಿಸಿದರು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ನಗರದ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸಭೆ ನಡೆಸಿ, ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಘಟನೆಗೆ ಕಾರಣರಾದ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದರು.  ಫೆ.21ರಂದು ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದೆಂದು ಐಎಂಎ ಅಧ್ಯಕ್ಷ ಡಾ.ಜೆ.ಎನ್. ಇರಕಲ್, ಡಾ. ರವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.