ರಾಯಚೂರು

ಕೃಷಿ ಸಂಶೋಧನೆಯತ್ತ 'ಚಿನ್ನ'ದ ಕಣ್ಣು

Published On :

ರಾಯಚೂರು: ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆಗೆ ತೊಡಗುವ ಹಿರಿದಾಸೆ. ರೈತರಿಗೆ ನೆರವಾಗುವ ಜತೆಗೆ ಉನ್ನತವಾದುದನ್ನು ಸಾಧಿಸುವ ಬಯಕೆ. ಸತತ ಪರಿಶ್ರಮ, ನಿರಂತರ ಅಧ್ಯಯನಕ್ಕೆ ದೊರೆತ ಗೌರವಕ್ಕೆ ಸಂಭ್ರಮ. ಕುಟುಂಬದವರ ಬೆಂಬಲಕ್ಕೆ ಎಂದಿಗೂ ಚಿರಋಣಿಯಾಗಿರುವ ಭಾವನೆ.
ನಗರದ ರಾಯಚೂರು ಕೃಷಿ ವಿವಿಯಲ್ಲಿ ಶನಿವಾರ ನಡೆದ ನಾಲ್ಕನೇ ಘಟಿಕೋತ್ಸವದಲ್ಲಿ ಬಿಎಸ್ಸಿ(ಕೃಷಿ ಮತ್ತು ಬಿ.ಟೆಕ್) ಪದವಿಗಳಲ್ಲಿ ಅತೀ ಹೆಚ್ಚು ಚಿನ್ನದ ಪದಕ ಗಳಿಸಿದವರ ಮನದಾಳದ ಮಾತುಗಳಿವು.
ರಾಯಚೂರಿನ ನಿವಾಸಿ ದೀಪಾ ಎಲ್., ಅವರಿಗೆ ಘಟಿಕೋತ್ಸವದಲ್ಲಿ ಒಟ್ಟು 4 ಚಿನ್ನದ ಪದಕ ಪಡೆದಿದ್ದಾರೆ. ಕೃಷಿಕರ ಕುಟುಂಬವಲ್ಲದಿದ್ದರೂ ಕೃಷಿಯಲ್ಲಿಯೇ ಸಾಧನೆ ಮಾಡಬೇಕೆಂಬ ಹಂಬಲ. ಪರಿಣಾಮ ಪಿಯುಸಿ ನಂತರದಲ್ಲಿ ಎಲ್ಲರಂತೆಯೇ ಎಂಜಿನಿಯರಿಂಗ್, ಎಂಬಿಬಿಎಸ್ ಪದವಿ ಪಡೆಯಲು ಮುಂದಾಗದೇ ವಿಶೇಷಾಸಕ್ತಿಯಿಂದ ಬಿಎಸ್ಸಿ ಕೃಷಿಗೆ ಸೇರಿದವರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ವಿದ್ಯಾರ್ಥಿನಿ ದೀಪಾ ಅವರಿಗೆ ಕೃಷಿಯಲ್ಲಿಯೇ ಮಹತ್ತರವಾದುದನ್ನು ಸಾಧಿಸುವಾಸೆ.
'ಕನ್ನಡಪ್ರಭ'ಕ್ಕೆ ಸಂಭ್ರಮ ಹಂಚಿಕೊಂಡ ಅವರು, ಕೃಷಿಯಲ್ಲಿಯೇ ಹೆಚ್ಚಿನ ಸಂಶೋಧನೆ ನಡೆಸಿ ಕೃಷಿ ವಿಜ್ಞಾನಿಯಾಗುವ ಗುರಿಯಿದೆ. ತಂದೆ ಲಕ್ಷ್ಮಿಕಾಂತರಾವ್ ಮತ್ತು ತಾಯಿ ಪರಿಮಳಾ ಅವರ ಬೆಂಬಲದಿಂದ ಚಿನ್ನದ ಪದಕ ಪಡೆಯಲು ಸಾಧ್ಯವಾಯಿತೆಂದು ಎಂದರು.
ಇನ್ನು ಬಿಎಸ್ಸಿ ಕೃಷಿಯಲ್ಲಿಯೇ ಭೀಮರಾಯನಗುಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಗುಲ್ಬರ್ಗ ಜಿಲ್ಲೆಯ ಹಾಲಭಾವಿ ಗ್ರಾಮದ ವಿದ್ಯಾರ್ಥಿ ರೇವಣಸಿದ್ದ ಅವರಿಗೆ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಗಳಿಸಿದ ಸಂಭ್ರಮ. ಕೃಷಿಕರ ಕುಟುಂಬದ ರೇವಣಸಿದ್ದ ಅವರು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿ, ಕೃಷಿ ಕ್ಷೇತ್ರದಲ್ಲಿಯೇ ರೈತರಿಗೆ ನೆರವಾಗುವ ಸಂಶೋಧನೆ ಕೈಗೊಳ್ಳುವುದು ಗುರಿ. ಎಲ್ಲರೂ ಎಂಬಿಬಿಎಸ್, ಎಂಜಿನಿಯರಿಂಗ್‌ನತ್ತ ಗಮನಹರಿಸದೇ ಕೃಷಿ ಕ್ಷೇತ್ರದಲ್ಲಿಯೂ ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಅರಿಯಬೇಕೆಂದು ಸಲಹೆ ನೀಡಿದ್ದಾರೆ.
ಗುಲ್ಬರ್ಗ ಜಿಲ್ಲೆಯ ಅರ್ಚನಾ ಕಲಾಲ್ ಬಿ.ಟೆಕ್(ಕೃಷಿ ತಾಂತ್ರಿಕ) ವಿಭಾಗದಲ್ಲಿ ನಾಲ್ಕು ಚಿನ್ನದ ಪದಕ ಮತ್ತು ಎರಡು ನಗದು ಬಹುಮಾನ ಗಳಿಸಿದ್ದಾರೆ. ಕೃಷಿ ಕ್ಷೇತ್ರ ಇನ್ನಿತರೆ ಕೋರ್ಸುಗಳಿಗಿಂತ ಕೊಂಚ ವಿಭಿನ್ನ. ಆಸಕ್ತಿಯೂ ಇತ್ತು. ಮುಂದೆ ಆಹಾರ ಸಂಸ್ಕರಣಾ ವಿಭಾಗದಲ್ಲಿ ಎಂ.ಟೆಕ್ ಮಾಡುತ್ತಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.