ಮುಖ್ಯಾಧಿಕಾರಿ, ಆಡಳಿತ ಮಂಡಳಿ ಜಟಾಪಟಿ
ಕನ್ನಡಪ್ರಭ ವಾರ್ತೆ ಮುದಗಲ್ ಫೆ. 24
ಸ್ಥಳೀಯ ಪಟ್ಟಣ ಪಂಚಾಯಿತಿ ಎಸ್ಎಫ್ಸಿ, ಬಿಆರ್ಜಿಎಫ್ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ಸುಮಾರು ರು. 40 ಲಕ್ಷ ಟೆಂಡರ್ನ್ನು ಮತ್ತೆ ಮುಂದೂಡಿದ್ದರಿಂದ ಕಾಮಗಾರಿಗೆ ಟೆಂಡರ್ ಹಾಕಿದ್ದ ಗುತ್ತಿಗೆದಾರರು ಅಧಿಕಾರಿಗಳ, ಆಡಳಿತ ಮಂಡಳಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್ಎಫ್ಸಿ, ಬಿಆರ್ಜಿಎಫ್, ಯೋಜನೆಯಡಿ ಸುಮಾರು ರು. 40 ಲಕ್ಷಗಳಿಗೆ 15 ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿತ್ತು. ಅಂದೇ ಟೆಂಡರ್ ಬುಕ್ಲೆಟ್ಗಳನ್ನು ಗುತ್ತಿಗೆದಾರರಿಗೆ ನೀಡಬೇಕಾಗಿತ್ತು.
ಆದರೆ ಮುಖ್ಯಾಧಿಕಾರಿಗಳು ಕಾರಣಾಂತರದಿಂದ ಟೆಂಡರ್ನ್ನು ಫೆ. 24ಕ್ಕೆ ಮುಂದೂಡಿ ನೋಟಿಸ್ ಜಾರಿ ಮಾಡಿದರು. ಅದೇ ರೀತಿ ಇಂದು ಟೆಂಡರ್ ಬುಕ್ಲೆಟ್ಗಳನ್ನು ನೀಡುತ್ತಾರೆ ಎಂದು ಗುತ್ತಿಗೆದಾರರು ಪ.ಪಂ.ಗೇ ಆಗಮಿಸಿ ವಿಚಾರಿಸಿದಾಗ ಮುಖ್ಯಾಧಿಕಾರಿಗಳು ಟೆಂಡರ್ ಮತ್ತೆ ಮುಂದೂಡಿರುವುದಾಗಿ ತಿಳಿದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿಗಳನ್ನು ವಿಚಾರಿಸಲು ಹೋದಾಗ ಅವರು ರಜೆ ಹಾಕಿರುವುದು ತಿಳಿದ ಗುತ್ತಿಗೆದಾರರು ಆಡಳಿತ ಮಂಡಳಿ ಮತ್ತು ಮುಖ್ಯಾಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.
ಹಿನ್ನಲೆ: ಪ.ಪಂ.ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಸರ್ಕಾರದ ನಿಯಮದ ಪ್ರಕಾರ, ಇ- ಪ್ರಕ್ಯೂರ್ಮೆಂಟ್ ಕರೆಯಬೇಕು. ಆದರೆ ಆಡಳಿತ ಮಂಡಳಿಗೆ ಮತ್ತು ಮುಖ್ಯಾಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದ ಕಾರಣ ರು. 5 ಲಕ್ಷ ಒಳಗಿನ ಎಲ್ಲಾ ಕಾಮಗಾರಿಗಳಿಗೆ ಮ್ಯಾನುಯಲ್ ಟೆಂಡರ್ ಕರೆಯುವಂತೆ ಅಧ್ಯಕ್ಷರು ಆದೇಶ ನೀಡಿದ್ದರಿಂದ ಟೆಂಡರ್ ಕರೆಯಲಾಗಿದೆ ಎಂದು ಹೇಳಲಾಗುತ್ತದೆ.
ಬಿಆರ್ಜಿಎಫ್ ಯೋಜನೆಯಡಿ ರು. 2 ಲಕ್ಷ ಕಾಮಗಾರಿಗೆ ಕ್ರಿಯಾಯೋಜನೆ ಇಲ್ಲದೆ ಟೆಂಡರ್ ಕರೆದಿದ್ದು ಸಮಸ್ಯೆಗೆ ಕಾರಣವಾಗಿದೆ. ಟೆಂಡರ್ ಬುಕ್ಲೆಟ್ ಮುದ್ರಣಗೊಂಡಿದ್ದರೂ, ಗುತ್ತಿಗೆದಾರರಿಗೆ ನಿಡದೇ ಪುನಾ ಟೆಂಡರ್ ಮುಂದೂಡಲು ಕಾರಣವಾಗಿದೆ. ಮುಖ್ಯಾಧಿಕಾರಿಗಳು ಟೆಂಡರ್ ಮುಂದೂಡಿ, ರಜೆ ಮೇಲೆ ಹೋಗಿದ್ದರಿಂದ ಆಡಳಿತ ಮಂಡಳಿ ಅಧ್ಯಕ್ಷ ಸದಸ್ಯರಿಗೆ ಮುಜುಗುರವನ್ನುಂಟು ಮಾಡಿದೆ.
ದೂರು: ಮುಖ್ಯಾಧಿಕಾರಿಗಳು ಅಧ್ಯಕ್ಷ, ಸದಸ್ಯರಿಗೆ ಗೌರವ ನೀಡುತ್ತಿಲ್ಲ. ಸಾಕಷ್ಟು ಅವ್ಯವಹಾರ ಮಾಡಿದ್ದಾರೆ. ಇದರಿಂದಾಗಿ ಪ.ಪಂ.ಗೆ ಕೆಟ್ಟ ಹೆಸರು ಬಂದಿದೆ. ತುರ್ತು ಸಭೆ ಕರೆಯಲು ಸೂಚಿಸಿದ್ದರೂ, ಸಭೆ ಕರೆಯದೆ ಅವಮಾನ ಮಾಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಆದ ನಡವಳಿಕೆಗಳನ್ನು ಸಮರ್ಪಕವಾಗಿ ನಿಭಾಯಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಅಧ್ಯಕ್ಷರು, ಸದಸ್ಯರು ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ.
ಪ್ರತಿದೂರು: ಅಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ಕೆಲಸ ಮಾಡಲು ಬಿಡುತ್ತಿಲ್ಲ. ಪ್ರತಿಯೊಂದಕ್ಕೂ ಪ್ರಶ್ನೆ ಮಾಡುತ್ತಾರೆ. ಅನಾವಶ್ಯಕ ಕಿರುಕುಳ ನೀಡುತ್ತಿದ್ದಾರೆ. ಪ.ಪಂ.ಗೆ ಕಾಲಿಟ್ಟರೆ ಸಾಕು, ಅಧಿಕಾರ ದರ್ಪ ತೋರಿಸುತ್ತಾರೆ.
ಸರ್ಕಾರದ ನಿಯಮಗಳನ್ನು ಬಿಟ್ಟು ತಾವು ಹೇಳಿದಂತೆ ಕೇಳುವುದಕ್ಕೆ ಸೂಚಿಸುತ್ತಿದ್ದರಿಂದ ಕರ್ತವ್ಯ ನಿರ್ವಹಿಸಲು ತೀವ್ರ ತೊಂದರೆಯಾಗಿದೆ ಎಂದು ಮುಖ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಂದೆ ತಮ್ಮ ಗೋಳು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮುದಗಲ್ ಪಟ್ಟಣ ಪಂಚಾಯಿತಿಗೆ ಕೋಟಿ ಕೋಟಿ ಅನುದಾನ ಇದ್ದರೂ, ಅಧಿಕಾರಿಗಳ, ಅಡಳಿತ ಮಂಡಳಿಯವರ ಮುಸುಕಿನ ಗುದ್ದಾಟದಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

