ಸುದ್ದಿ ಸಂಕ್ಷೇಪ
ನಾಳೆ ಕಾರ್ಯಾಗಾರ; ಒಒಡಿ ಸೌಲಭ್ಯ
ರಾಯಚೂರು: ಗುಲ್ಬರ್ಗದಲ್ಲಿ ಮಾ.1ರಂದು ವಿಭಾಗ ಮಟ್ಟದ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಆಯೋಜಿಸಲಾಗಿದೆ. ಜಿಲ್ಲೆಯ ಎಲ್ಲ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಿದ್ದು, ಕಾರ್ಯಾಗಾರದಲ್ಲಿ ಭಾಗವಹಿಸಲಿಚ್ಛಿಸುವಂಥ ಶಿಕ್ಷಕರಿಗೆ ಡಿಡಿಪಿಐ ಕಚೇರಿಯಿಂದ ಅನ್ಯಕಾರ್ಯ ನಿಮಿತ್ತ ಸೌಲಭ್ಯ ಒದಗಿಸಲಾಗಿದೆ. ಈ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಗುಲ್ಬರ್ಗದ ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಲು ರಾಜ್ಯ ಹೈ.ಕ. ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಯಂಕಪ್ಪ, ಗೌರವಾಧ್ಯಕ್ಷ ಮಲ್ಲಪ್ಪ ರಾಜನಕೋಳೂರು ಹಾಗೂ ಕಾರ್ಯದರ್ಶಿ ಉಮೇಶ್ ತಿಳಿಸಿದ್ದಾರೆ.
ತುಂತುರು ಮಳೆ
ರಾಯಚೂರು: ಜಿಲ್ಲೆಯಲ್ಲಿ ಪ್ರಸಕ್ತ ಬೇಸಿಗೆಯ ಮೊದಲ ಮಳೆ ಬುಧವಾರ ರಾತ್ರಿ ಸುರಿದಿದ್ದು, ಲಿಂಗಸ್ಗೂರು ತಾಲೂಕಿನ ವಿವಿಧೆಡೆ ತುಂತುರು ಮಳೆಯಾಗಿದೆ. ಲಿಂಗಸ್ಗೂರು, ಮುದಗಲ್ ಸುತ್ತಲಿನ ಪ್ರದೇಶದಲ್ಲಿ ಬುಧವಾರ ರಾತ್ರಿ ಬೇಸಿಗೆ ಮಳೆ ಸುರಿದಿದೆ. ಕಳೆದ ಕೆಲ ದಿನಗಳಿಂದ ಪ್ರಸಕ್ತ ಬೇಸಿಗೆಯ ದಿಢೀರ್ ಏರಿಕೆ ಕಂಡಿದ್ದ ಬಿಸಿಲಿನ ತಾಪದಿಂದ ಬಳಲಿದ್ದ ಜನತೆಗೆ ಮಳೆ ಸ್ವಲ್ಪಮಟ್ಟಿಗಿನ ನಿರಾಳತೆ ತಂದಿತು.
ಸಾಮಾನ್ಯ ಸಭೆ
ರಾಯಚೂರು: ಇಲ್ಲಿನ ರಾಯಚೂರು ನಗರಸಭೆಯ 2014-15ನೇ ಸಾಲಿನ ಆಯವ್ಯಯ ಮಂಡನೆಯ ಹಿನ್ನೆಲೆಯಲ್ಲಿ ಫೆ.28ರಂದು ನಗರಸಭೆಯ ಸಾಮಾನ್ಯ ಮಹಾಸಭೆ ಕರೆಯಲಾಗಿದೆ. ಅಂದು ಬೆಳಗ್ಗೆ 10ಕ್ಕೆ ನಗರದ ಸಾರ್ವಜನಿಕ ಉದ್ಯಾನವನದಲ್ಲಿ ಸಭೆಯನ್ನು ಕರೆಯಲಾಗಿದೆ ಎಂದು ಪೌರಾಯುಕ್ತ ತಿಳಿಸಿದ್ದಾರೆ.
ಆಕ್ಷೇಪಣೆಗೆ ಆಹ್ವಾನ
ರಾಯಚೂರು: ತಾಲೂಕಿನಲ್ಲಿ ವಿವಿಧೆಡೆಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಆಯ್ಕೆ ಪಟ್ಟಿ ಸಿದ್ಧಗೊಳಿಸಿದ್ದು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ತಾಲೂಕಿನ ಸುಲ್ತಾನಪೂರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಇತರೆ 12 ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಆಯ್ಕೆ ಮಾಡಲಾಗಿದ್ದು, ಅಕ್ಷೇಪಣೆ ಸಲ್ಲಿಸುವವರು ಫೆ.28ರೊಳಗೆ ದೂರು ಸಲ್ಲಿಸಬಹುದೆಂದು ಯೋಜನಾಧಿಕಾರಿಗಳ ಕಚೇರಿ ತಿಳಿಸಿದೆ.
ಬೀಳ್ಕೊಡುಗೆ
ರಾಯಚೂರು: ಜಿಲ್ಲಾ ಸಹಾಯಕ ಖಜಾನಾಧಿಕಾರಿಗಳಾಗಿ ನಿವೃತ್ತಿ ಹೊಂದಲಿರುವ ರಾಮಪ್ಪ ಅವರ ಬೀಳ್ಕೊಡುಗೆ ಸಮಾರಂಭವನ್ನು ಮಾ.2ರಂದು ಆಯೋಜಿಸಲಾಗಿದೆ. ನಿವೃತ್ತಿಯ ಪ್ರಯುಕ್ತ ಬೀಳ್ಕೊಡುಗೆ ಸಮಾರಂಭವನ್ನು ಮಾ.2ರಂದು ಬೆಳಗ್ಗೆ 11ಕ್ಕೆ ಜಲನಿರ್ಮಲ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಫುಟ್ಬಾಲ್, ಹಾಕಿ ತರಬೇತಿಗೆ ಆಯ್ಕೆ
ರಾಯಚೂರು: ಜಿಲ್ಲೆಯ ಫುಟ್ಬಾಲ್ ಮತ್ತು ಹಾಕಿ ತರಬೇತಿಗೆ ಆಯ್ಕೆ ಟ್ರಯಲ್ಸ್ ಮಾ.5ರಿಂದ ಜಿಲ್ಲೆಯ ವಿವಿಧೆಡೆ ಆಯೋಜಿಸಲಾಗಿದೆ. ಈ ಕುರಿತು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿಗಳ ಕಚೇರಿಯು ಪ್ರಕಟಣೆ ನೀಡಿ, ಮಾ.5ರಂದು ಮಾನವಿ ಪಟ್ಟಣದ ಕಾಕತೀಯ ಪ್ರೌಢಶಾಲೆ, ಮಾ.6ಕ್ಕೆ ದೇವದುರ್ಗದ ಅರಕೇರಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಮಾ.7ಕ್ಕೆ ಲಿಂಗಸ್ಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನ, ಮಾ.10ರಂದು ಸಿಂಧನೂರಿನ ಆರ್ಜಿಎಂ ಕಾಲೇಜು ಮೈದಾನ, ರಾಯಚೂರು ತಾಲೂಕಿನ ಆಯ್ಕೆಯು ಮಾ.11 ಮತ್ತು 12ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಆಸಕ್ತ ಕ್ರೀಡಾಪಟುಗಳು ಸೂಚಿಸಿದ ದಿನದಂದು ಬೆಳಗ್ಗೆ 10ಕ್ಕೆ ನಿಗದಿತ ಸ್ಥಳದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿದ್ದು, ಆಯ್ಕೆಯಾದವರಿಗೆ ಉಚಿತ ವಸತಿ, ಊಟ, ತರಬೇತಿ ಒದಗಿಸಲಾಗುವುದು.
ಗ್ರಾಪಂ ಮೇಲ್ದರ್ಜೆಗೆ ಏರಿಸಲು ಪ್ರಸ್ತಾವನೆ: ಭರವಸೆ
ಮಸ್ಕಿ: ಪಟ್ಟಣದ ಗ್ರಾಪಂ ಜನಸಂಖ್ಯೆ 30 ಸಾವಿರ ಇರುವುದರಿಂದ ಗ್ರಾಪಂ ಬದಲಿಗೆ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದು ಪ್ರಸ್ತಾವನೆ ಸಲ್ಲಿಸಿದಲ್ಲಿ ಸರ್ಕಾರ ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಪೌರಾಡಳಿತ ಸಚಿವ ಇಸ್ಲಾಂ ತಮಗೆ ಭರವಸೆ ನೀಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. 10 ಸಾವಿರಕ್ಕಿಂತ ಮೇಲ್ಪಟ್ಟು ಹಾಗೂ 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿರುವ ಗ್ರಾಪಂಗಳನ್ನು ಪಪಂ.ಯಾಗಿ ಪರಿವರ್ತಿಸಲಾಗುತ್ತದೆ. ಜಿಲ್ಲೆಯಲ್ಲಿಯೇ ಅತೀ ದೊಡ್ಡ ಗ್ರಾಪಂ ಎನಿಸಿರುವ ಮಸ್ಕಿ ಗ್ರಾಪಂ ವ್ಯಾಪ್ತಿಯಲ್ಲಿ 30 ಸಾವಿರ ಜನರಿದ್ದು, ಪಟ್ಟಣ ಪಂಚಾಯಿತಿ ಬದಲಿಗೆ ನೇರವಾಗಿ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಬಗ್ಗೆ ತಾವು ವಿಧಾನಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದ್ದಾರೆ. 2014-15ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಮಸ್ಕಿ ಕ್ಷೇತ್ರದ ಪರಿಶಿಷ್ಟ ಜಾತಿ, ಪ. ಪಂಗಡದ ವಿದ್ಯಾರ್ಥಿಗಳು ಹೆಚ್ಚಾಗಿರುವ ಪ್ರೌಢಶಾಲೆಗಳಿರುವ ಗ್ರಾಮಗಳಲ್ಲಿ ವಸತಿ ನಿಲಯಗಳಿಗೆ ಮಂಜೂರಾತಿ ನೀಡಲು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್. ಆಂಜನೇಯ ಭರವಸೆ ನೀಡಿದ್ದಾರೆಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

