ನಾರಾಯಣಪುರ ಬಲದಂಡೆ ನಾಲೆಗೆ ಮಾ.10ರಿಂದ ನೀರು ಸ್ಥಗಿತ
ಲಿಂಗಸ್ಗೂರು: ನಾರಾಯಣಪುರ ಜಲಾಶಯದಿಂದ ಬಲದಂಡೆ ಕಾಲುವೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿದ ಬೆಳೆಗಳು ಕೈಗೆ ಬರಲು ಇನ್ನೂ ಸುಮಾರು ಒಂದೂವರೆ ತಿಂಗಳು ಬೇಕಾಗಲಿದೆ. ಆದರೆ ಕೆಬಿಜೆಎನ್‌ಎಲ್ ಸಲಹಾ ಸಮಿತಿ ಸಭೆಯಲ್ಲಿ ಮಾ.10ರವರೆಗೆ ನೀರು ಹರಿಸಲು ತೆಗೆದುಕೊಂಡ ನಿರ್ಣಯದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆಂಬಂತೆ ರೈತರಲ್ಲಿ ಆತಂಕ ಮೂಡಿಸಿದೆ.
ನಾರಾಯಣಪುರ ಬಲದಂಡೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಶೇಂಗಾ, ಬತ್ತ, ಹತ್ತಿ, ಮೆಣಸಿನಕಾಯಿ ಸೇರಿದಂತೆ ವಾಣಿಜ್ಯ ಬೆಳೆಗಳು ಬಿತ್ತನೆ ಮಾಡಿದ್ದಾರೆ. ಪ್ರಸ್ತುತ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು, ರೈತರ ಕೈಗೆ ಬರಲು ಇನ್ನು ಸುಮಾರು ಒಂದೂವರೆ ತಿಂಗಳು ಬೇಕಾಗುತ್ತದೆ. ಈ ಬಾರಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ, ಬತ್ತದ ಬೆಳೆ ಬಿತ್ತನೆ ಮಾಡಿದ್ದಾರೆ. ಪ್ರತಿ ಎಕರೆಗೆ ಸಾವಿರಾರು ರು. ವೆಚ್ಚ ಮಾಡಿ ಭೂಮಿ ಹದಗೊಳಿಸಿ ಉತ್ತಮ ಬೆಳೆ ಬೆಳೆಯಲು ಹಣ ಸುರಿದಿರುವ ರೈತರು, ಮಾ.10ರಿಂದ ಕಾಲುವೆಗೆ ನೀರು ಸ್ಥಗಿತಗೊಳಿಸುವ ಸುದ್ದಿ ತಿಳಿದು ಕಂಗಾಲಾಗಿದ್ದಾರೆ.
ತಾಲೂಕಿನ ಬಸಿ ನೀರು ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬತ್ತ ನಾಟಿ ಮಾಡಿರುವ ರೈತರು ಪ್ರಸಕ್ತ ಸಾಲಿನಲ್ಲಿ ತಾಲೂಕಿನಾದ್ಯಂತ ಉತ್ತಮ ಮಳೆಯಾದ ಪರಿಣಾಮ ಮಾರ್ಚ್ ಅಂತ್ಯದವರೆಗೆ ಕಾಲುವೆಗೆ ನೀರು ಹರಿಸುವುದಾಗಿ ನಂಬಿದ್ದರು. ಆದರೆ ನೀರಾವರಿ ಸಲಹಾ ಸಮಿತಿ ಮಾ.10ರವರೆಗೆ ನೀರು ಹರಿಸುವ ನಿರ್ಧಾರ ರೈತರ ನಿರೀಕ್ಷೆ ಹುಸಿಯಾಗಿಸಿದೆ. ಬಿತ್ತನೆ ಮಾಡಿದ ಬೆಳೆಗಳು ಸುಮಾರು 4.5 ತಿಂಗಳು ಬೆಳೆಗಳಾಗಿದ್ದು, ಪ್ರಸ್ತುತ ಕಾಳು ಕಟ್ಟುವ ಹಂತದಲ್ಲಿವೆ. ಶೇಂಗಾ ಕೀಳಲು ನೀರು ಅವಶ್ಯವಾಗಿದ್ದು, ಮಾ.10ರವರೆಗೆ ನೀರು ಹರಿಸಿದರೆ ಶೇ.75ರಷ್ಟು ನಷ್ಟವಾಗುವ ಭೀತಿ ರೈತರಲ್ಲಿ ಮೂಡಿಸಿದೆ.
ನೀರಿನ ಸಾಮರ್ಥ್ಯ: ನಾರಾಯಣಪುರ ಜಲಾಶಯದ ಗರಿಷ್ಠ ನೀರಿನ ಮಟ್ಟ 492.252 ಮೀಟರ್(33.313 ಟಿಎಂಸಿ) ಸಾಮರ್ಥ್ಯ ಹೊಂದಿದ್ದು, ಫೆ.27ರಂದು ನೀರಿನ ಮಟ್ಟ 490.200 ಮೀಟರ್ ನೀರು ಸಂಗ್ರಹವಿರುತ್ತದೆ. ಪ್ರತಿನಿತ್ಯ ಬಲದಂಡೆ ಕಾಲುವೆಗೆ 7,451 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದ್ದು, ಎಡದಂಡೆ ಕಾಲುವೆಗೆ 1,700 ಕ್ಯುಸೆಕ್ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗೆ 300 ಕ್ಯುಸೆಕ್ ನೀರು ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳಿಂದ ತಿಳಿದು ಬಂದಿದೆ.
ಒತ್ತಾಯ: ತಾಲೂಕಿನ ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ಕಾಲುವೆಗಳಿಗೆ ಮಾ.10ರವರೆಗೆ ನೀರು ಹರಿಸುವುದಾಗಿ ನಿರ್ಧರಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರೈತರು ಬಿತ್ತನೆ ಮಾಡಿದ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿವೆ. ಬೆಳೆಗಳು ರೈತರ ಕೈಗೆ ಸಿಗಬೇಕಾದರೆ ಮಾರ್ಚ್ ಕೊನೆಯ ವಾರದವರಿಗೆ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಬೆಳೆಗಳು ನಷ್ಟವಾಗಲಿದ್ದು, ಇದರಿಂದ ರೈತರು ಸಂಕಷ್ಟ ಅನುಭವಿಸಲಿದ್ದಾರೆ. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಪುನಃ ಕರೆದು ಮಾರ್ಚ್ ಅಂತ್ಯದವರೆಗೆ ನೀರು ಹರಿಸಲು ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರೈತರ ಹಿತ ಕಾಪಾಡಲು ಹೋರಾಟ ನಡೆಸುವ ಅನಿವಾರ್ಯ ಎದುರಾಗಲಿದೆ ಎಂದು ಅಮರಣ್ಣ ಗುಡಿಹಾಳ ಎಚ್ಚರಿಕೆ ನೀಡಿದ್ದಾರೆ.
ಅಮರೇಶಸ್ವಾಮಿ ಬಲ್ಲಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

