ರಾಯಚೂರು

'ಮುಖ್ಯಗುರುವಿಗೆ ನಾಯಕತ್ವ ಗುಣ ಅಗತ್ಯ'

Published On :

ಸಿಂಧನೂರು: ಶಾಲೆಯ ಆಡಳಿತ ಚುಕ್ಕಾಣಿ ವಹಿಸಿಕೊಂಡಿರುವ ಮುಖ್ಯ ಗುರುಗಳಿಗೆ ನಾಯಕತ್ವ ಗುಣವಿರಬೇಕು. ಇಂಥ ಗುಣವಿಲ್ಲದ ಮುಖ್ಯ ಗುರುಗಳು ಅದನ್ನು ರೂಢಿಸಿಕೊಳ್ಳುವ ತಂತ್ರಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಗುಲ್ಬರ್ಗಾದ ಹೆಚ್.ಕೆ.ಇ ಸೊಸೈಟಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ಜಿ. ನಮೋಶಿ ಕರೆ ನೀಡಿದರು.
ಅವರು ನಗರದ ಜೈನ ಕಲ್ಯಾಣ ಮಂಟಪದಲ್ಲಿ ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಗುಲ್ಬರ್ಗಾ, ಕರ್ನಾಟಕ ರಾಜ್ಯ ಪ್ರೌಢಶಾಲಾ ಮುಖ್ಯ ಗುರುಗಳ ಸಂಘ ರಾಯಚೂರು ಜಿಲ್ಲಾ ಘಟಕ ಸಂಯುಕ್ತಾಶ್ರಯದಲ್ಲಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲಾ ಪ್ರೌಢಶಾಲಾ ಮುಖ್ಯ ಗುರುಗಳ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಫಲಿತಾಂಶಕ್ಕೆ ಆದ್ಯತೆ ನೀಡಿ: ಹೈ- ಕ ಭಾಗದ ಎಸ್.ಎಸ್.ಎಲ್.ಸಿ. ಫಲಿತಾಂಶ ಬೆಂಗಳೂರು ಹಾಗೂ ಮೈಸೂರು ಭಾಗಕ್ಕೆ ಹೋಲಿಸಿದರೆ ಅತ್ಯಲ್ಪ. ಕಳೆದ ಬಾರಿ ಬೀದರ್ ಜಿಲ್ಲೆ ಶೇ.34ರಷ್ಟು ಫಲಿತಾಂಶ ಕಂಡರೆ, ಗುಲ್ಬರ್ಗ ಶೇ.33 ಫಲಿತಾಂಶ ಕಂಡಿತು. ಪ್ರೌಢಶಾಲಾ ಶಿಕ್ಷಕರು ಇನ್ನಷ್ಟು ಪರಿಶ್ರಮ ವಹಿಸಿ ವಿದ್ಯಾರ್ಥಿಗಳ ಫಲಿತಾಂಶದ ಶೇಕಡಾವಾರನ್ನು ಹೆಚ್ಚಿಸಬೇಕು. ಫಲಿತಾಂಶದ ಜೊತೆಗೆ ಗುಣಾತ್ಮಕ ಶಿಕ್ಷಣದ ಕಡೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಿವಿಮಾತು: ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಲಲಿತಮ್ಮ ಲಿಂಗರಾಜ ಮಾತನಾಡಿ,ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕ ಸಮೂಹ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಾಸಿರುದ್ದೀನ್ ಗೋಷ್ಠಿ: ಮುಖ್ಯ ಗುರು ಮಾಲತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷ ಅಮರೇಶ ಸ್ವಾಗತಿಸಿದರು. ಕಾರ್ಯಾಗಾರದಲ್ಲಿ ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರೌಢಶಾಲಾ ಮುಖ್ಯ ಗುರುಗಳು ಭಾಗವಹಿಸಿದ್ದರು. ನಂತರ ಪಠ್ಯ ಪರಿಷ್ಕರಣೆ ಮತ್ತು ಪಠ್ಯಪುಸ್ತಕ ರಚನೆ ಸಮಿತಿ ಮುಖ್ಯ ಸಂಯೋಜಕ ಪ್ರೊ.ಜಿ.ಎಸ್. ಮುಡಬಂಡಿತ್ತಾಯ, ಬೆಂಗಳೂರು ಜಿಲ್ಲಾ ತರಬೇತಿ ಕೇಂದ್ರದ ನಿವೃತ್ತ ಪ್ರಾಚಾರ್ಯ ನಾಸಿರುದ್ದೀನ್ ಗೋಷ್ಠಿಗಳಲ್ಲಿ ಉಪನ್ಯಾಸ ನೀಡಿದರು.
ಗೈರು: ಮೂರು ಜಿಲ್ಲೆಗಳ ಪ್ರೌಢಶಾಲಾ ಪ್ರಾಂಶುಪಾಲರ ಕಾರ್ಯಾಗಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಗುಲ್ಬರ್ಗಾ ಆಯುಕ್ತ ರಾಧಾಕೃಷ್ಣ ಮದನ್ಕರ್, ಉಪನಿರ್ದೇಶಕ ಇ.ರಾಮಾಂಜನೇಯ, ಬಳ್ಳಾರಿ ಉಪನಿರ್ದೇಶಕ ವೀರಣ್ಣ ಜತ್ತಿ, ಕೊಪ್ಪಳ ಉಪನಿರ್ದೇಶಕ ವೀರಣ್ಣ ಹೆಚ್. ಸೇರಿದಂತೆ ಸಿಂಧನೂರು ಹೊರತು ಪಡಿಸಿ, ಮೂರು ಜಿಲ್ಲೆಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗೈರು ಹಾಜರಾಗಿದ್ದು ಕಂಡು ಬಂತು. ಮೂರು ಜಿಲ್ಲೆಗಳ ವಿಭಾಗ ಮಟ್ಟದ ಕಾರ್ಯಕ್ರಮಕ್ಕೆ ಅಧಿಕಾರಿಗಳೇ ಕೈ ಕೊಟ್ಟಿದ್ದು, ಶಿಕ್ಷಕ ಸಮುದಾಯ ಮಾತನಾಡಿಕೊಳ್ಳುವಂತಾಯಿತು. ಅಂತೆಯೇ ಮುಖ್ಯಗುರುಗಳ ಹಾಜರಾತಿ ಗಣನೀಯವಾಗಿ ಕಡಿಮೆಯಿದ್ದದ್ದು ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.