ರಾಯಚೂರು

ಜಿಲ್ಲಾಸ್ಪತ್ರೆ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ವಿರೋಧ

Published On :

ಕ.ಪ್ರ. ವಾರ್ತೆ   ರಾಯಚೂರು   ಜ.3
ಜಿಲ್ಲಾಡಳಿತ ಭವನ ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಿರ್ಮಿಸುವ ಜಿಲ್ಲಾಡಳಿತದ ನಿರ್ಧಾರ ಸರಿಯಲ್ಲ. ಅದರಿಂದ ಭವಿಷ್ಯದಲ್ಲಿ ಆರೋಗ್ಯ ಕ್ಷೇತ್ರದ ಸಂಬಂಧಿ ಅವಶ್ಯಕತೆಗಳಿಗೆ ಜಾಗದ ಕೊರತೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಜನಸಂಗ್ರಾಮ ಪರಿಷತ್, ಜಿಲ್ಲಾಡಳಿತ ಭವನವನ್ನು ಬೇರೆಡೆ ನಿರ್ಮಿಸುವಂತೆ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಜನಸಂಗ್ರಾಮ ಪರಿಷತ್ ಜಿಲ್ಲಾ ಸಂಚಾಲಕ ಡಾ. ವಿ.ಎ. ಮಾಲಿಪಾಟೀಲ್, ಈಗಾಗಲೇ ಜಿಲ್ಲಾಸ್ಪತ್ರೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಿಂದ ರಿಮ್ಸ್ ಕಾಲೇಜಿನ ಆಡಳಿತಕ್ಕೊಳಪಡಿಸಲಾಗಿದೆ. ಅದರಿಂದಾಗಿ ಶೀಘ್ರವೇ ಜಿಲ್ಲಾಸ್ಪತ್ರೆಯು ಅದರ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಅಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ ಉದ್ದೇಶಿಸಿದೆ ಎಂದು ಟೀಕಿಸಿದರು.
ಜಿಲ್ಲಾಡಳಿತ ಸ್ಪಷ್ಟನೆ ಇಲ್ಲ: ಎಂಸಿಐ(ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಸಂಸ್ಥೆಯ ಮಾರ್ಗಸೂಚಿಯಂತೆ ಈಗಾಗಲೇ ರಿಮ್ಸ್ ಕಾಲೇಜಿಗೆ ಅನುಕೂಲ ಕಲ್ಪಿಸಲು ಜಿಲ್ಲಾಸ್ಪತ್ರೆಯನ್ನು ರಿಮ್ಸ್ಗೆ ವಹಿಸಲಾಗಿದೆ. ಆದರೆ ಸದ್ಯ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾ ಪ್ರಯೋಗಾಲಯ, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ, ಜಿಲ್ಲಾ ಎಎನ್ಎಂ ತರಬೇತಿ ಕೇಂದ್ರ, ಜಿಲ್ಲಾ ಲಾಜಿಸ್ಟಿಕ್ ಕೇಂದ್ರ, ಜಿಲ್ಲಾ ಔಷಧ ಉಗ್ರಾಣ, ಆರ್ಸೆನಿಕ್ ಯುಕ್ತ ನೀರಿನ ಪರೀಕ್ಷಾ ಕೇಂದ್ರ ಮತ್ತಿತರೆ ಕಚೇರಿಗಳಿದ್ದು ಅವುಗಳನ್ನು ಸ್ಥಳಾಂತರಿಸುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಜಿಲ್ಲಾದ್ಯಂತ ಜಿಲ್ಲಾಸ್ಪತ್ರೆ ಮತ್ತಿತರೆ ಸೌಲಭ್ಯಗಳು ಒಂದೇ ಕಡೆ ಲಭ್ಯವಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಕೇಂದ್ರದ ನೆರವಿನ 100 ಹಾಸಿಗೆ ಸೌಲಭ್ಯದ ಪ್ರಸೂತಿ ಮತ್ತು ಮಕ್ಕಳ ಆಸ್ಪತ್ರೆಯು ಕಾರ್ಯಾರಂಭ ಮಾಡಬೇಕಿದ್ದು ಅದಕ್ಕೆ ರಿಮ್ಸ್ ಆವರಣದಲ್ಲಿ ಜಾಗ ನೀಡಲಾಗಿದೆ ಎಂದು ತಿಳಿಸಿದರು.
ಸದ್ಯವೇ ನಿವೇಶನದ ಕೊರತೆ: ಭವಿಷ್ಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕೈಗೊಳ್ಳುವ ವಿವಿಧ ಸೌಲಭ್ಯಗಳ ಜಾರಿಗೆ ನಿವೇಶನದ ಅವಶ್ಯಕತೆಯಿರುತ್ತದೆ. ಅಂಥ ಸಂದರ್ಭದಲ್ಲಿ ಜಾಗೆಯ ಕೊರತೆ ಉಂಟಾಗುವುದನ್ನು ತಪ್ಪಿಸಲು ಈಗಿನ ಜಿಲ್ಲಾಸ್ಪತ್ರೆಯಿರುವ ಪ್ರದೇಶವನ್ನು ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡಬೇಕೆಂದು ಆಗ್ರಹಿಸಿದರು.
ರಿಮ್ಸ್ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿ ನಿಲಯಗಳು, ಮನೋರೋಗಿಗಳ ಪುನರ್ವಸತಿ ಕೇಂದ್ರ, ಹೃದ್ರೋಗಿಗಳ ವಿಭಾಗ ಸೇರಿದಂತೆ ವಿವಿಧ ಯೋಜನೆಗಳ ಜಾರಿಗೆ ಸದ್ಯವೇ ನಿವೇಶನದ ಕೊರತೆ ಕಂಡುಬಂದಿದೆ. ಜಿಲ್ಲಾಡಳಿತ ಭವನ ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣಗಳನ್ನು ಸದ್ಯದ ಜಿಲ್ಲಾಸ್ಪತ್ರೆ ಸ್ಥಳದಲ್ಲಿ ನಿರ್ಮಿಸಲು ಮುಂದಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಗೆ ಮಂಜೂರಾಗುವ ಎಲ್ಲ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳಿಗೆ ಜಾಗವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿರ್ಮಾಣಕ್ಕೆ ತೀವ್ರ ವಿರೋಧ: ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನ ಮತ್ತು ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ಲಿಂಗಸ್ಗೂರು ರಸ್ತೆಯಲ್ಲಿ ನಿರ್ಮಿಸಲು ಜಾಗ ಗುರುತಿಸಬೇಕು. ಜಿಲ್ಲೆಯ ಎಲ್ಲರಿಗೆ ಅನುಕೂಲಕರ ಸ್ಥಳದಲ್ಲಿಯೇ ಆಡಳಿತ ಭವನಗಳಿರಬೇಕು. ಈ ನಿಟ್ಟಿನಲ್ಲಿ ಸದ್ಯದ ಸಾತ್ ಕಚೇರಿ(ಜಿಲ್ಲಾಡಳಿತದ ಕಚೇರಿಗಳಿರುವ ಸ್ಥಳ) ಪ್ರದೇಶದಲ್ಲಿಯೇ ಜಿಲ್ಲಾಡಳಿತ ಭವನ ಮತ್ತು ನ್ಯಾಯಾಲಯಗಳ ಸಂಕೀರ್ಣ ನಿರ್ಮಿಸಲು ಅವಕಾಶವಿದೆ. ಈ ಬಗ್ಗೆಯೂ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಚಿಂತಿಸಬೇಕಿದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಜ.4ರಂದು ಜಿಲ್ಲೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ ಜನಸಂಗ್ರಾಮ ಪರಿಷತ್ತಿನ ನಿಯೋಗವೊಂದು ಭೇಟಿ ಮಾಡಿ ಮನವಿ ಸಲ್ಲಿಸಿ ಜಿಲ್ಲಾಸ್ಪತ್ರೆ ಸ್ಥಳದಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ರಾಮನಗೌಡ ಜಾಲಿಬೆಂಚಿ, ಮಲ್ಲನಗೌಡ ಇಂದೂಪುರ, ಅಕ್ಬರ್ ಹುಸೇನ್ ನಾಗುಂಡಿ, ಸೈಯಿದುದ್ದೀನ್ ಸೇರಿದಂತೆ ಅನೇಕರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.