ನಗರ ಅವ್ಯವಸ್ಥೆಗಳ ಆಗರ; 20ರಂದು ಪ್ರತಿಭಟನೆ
ಕ.ಪ್ರ. ವಾರ್ತೆ, ರಾಯಚೂರು, ಜ.7
ನಗರದಲ್ಲಿ ಸಂಪೂರ್ಣವಾಗಿ ಹದಗೆಟ್ಟಿರುವ ಎಲ್ಲ ರಸ್ತೆಗಳ ದುರಸ್ತಿ, ಚತುಷ್ಪಥ ರಸ್ತೆಯ ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಚಂದ್ರಮೌಳೇಶ್ವರ ವೃತ್ತದಿಂದ ಪೂರ್ಣಿಮಾ ಚಿತ್ರಮಂದಿರದವರೆಗಿನ ರಸ್ತೆ ಕಾಮಗಾರಿಯ ವೇಗ ಹೆಚ್ಚಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಯಚೂರು ಸ್ವಚ್ಛಗೊಳಿಸಿ ಹೋರಾಟ ಸಮಿತಿ ನಗರಸಭೆಗೆ ಜ.20ರಂದು ಪ್ರತಿಭಟನೆ ನಡೆಸಲಿದೆ.
ನಗರದಲ್ಲಿ ಮಂಗಳವಾರ ಸಂಘಟನೆಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆಯ ಸಂಚಾಲಕ ಅಪರ್ಣಾ ಬಿ.ಆರ್. ಅವರು, ಈ ಹಿಂದೆ ಸಂಘಟನೆಯಿಂದ ಅನೇಕ ಸಂದರ್ಭದಲ್ಲಿ ನಗರಸಭೆಗೆ ನಗರದ ಸ್ವಚ್ಛತೆ, ಸೌಲಭ್ಯಗಳ ದೊರಕಿಸಿಕೊಡುವ ವಿಚಾರಕ್ಕೆ ಸಂಬಂಧಿಸಿ ಹೋರಾಟ ನಡೆಸಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸಂಚಾರಕ್ಕೆ ಅಡಚಣೆ: ನಗರಸಭೆಯಿಂದ ಕೈಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಆಮೆವೇಗದಲ್ಲಿ ಸಾಗಿದ್ದು, ಅದರಿಂದ ಜನತೆಗೆ ತೊಂದರೆ ಅನುಭವಿಸುವಂತಾಗಿದೆ. ಅವುಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಅಧಿಕಾರಿಗಳು ಮಾಡುತ್ತಿಲ್ಲ. ಪರಿಣಾಮ ಜನತೆಗೆ ಸೌಲಭ್ಯಗಳ ಪ್ರಯೋಜನ ದೊರೆಯುತ್ತಿಲ್ಲ ಎಂದು ಟೀಕಿಸಿದರು.
ನಗರದ ಬಸವೇಶ್ವರ ವೃತ್ತದಲ್ಲಿ ರೇಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ ವರ್ಷದಿಂದ ಜಾರಿಯಲ್ಲಿದ್ದು, ಲಿಂಗಸ್ಗೂರು ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯಾಗಿದೆ. ಹಾಗೆಯೇ ನಗರದ ಜನತೆ ನಿಜಲಿಂಗಪ್ಪ ಕಾಲೋನಿ ಸೇರಿ ಮತ್ತಿತರೆ ಪ್ರದೇಶಗಳಿಗೆ ತೆರಳಲು ಪ್ರಯಾಸಪಡುವಂಥ ಸ್ಥಿತಿಯಿದೆ ಎಂದು ದೂರಿದರು.
ನಿವಾಸಿಗಳಿಗೆ ಸಮಸ್ಯೆ: ನಗರದಲ್ಲಿ ಎಲ್ಲ ರಸ್ತೆಗಳೂ ತೀರಾ ಹದಗೆಟ್ಟಿದ್ದು ಅವುಗಳ ಪೂರ್ಣ ಪ್ರಮಾಣದ ದುರಸ್ತಿಗೆ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ. ಕಾಟಾಚಾರಕ್ಕೆ ದುರಸ್ತಿ ನಡೆಯುತ್ತಿದ್ದು, ಎಲ್ಲೆಡೆ ಅರ್ಧಮರ್ಧ ದುರಸ್ತಿ ಜಾರಿಯಲ್ಲಿದೆ. ಅದರಿಂದ ಯಾರಿಗೂ ಪ್ರಯೋಜನವಿಲ್ಲ. ಜಿಲ್ಲಾಡಳಿತ ಮತ್ತು ನಗರಸಭೆಗಳು ಜಿಲ್ಲಾ ಕೇಂದ್ರದಲ್ಲಿನ ಎಲ್ಲ ರಸ್ತೆಗಳನ್ನು ಏಕಕಾಲಕ್ಕೆ ದುರಸ್ತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ, ಚರಂಡಿ ನೀರು ಹೊರ ಹರಿಯದಂತೆ ಕ್ರಮ ಕೈಗೊಳ್ಳುವಲ್ಲಿಯೂ ನಗರಸಭೆ ಅಸಡ್ಡೆ ತೋರುತ್ತಿದೆ. ಅದರಿಂದ ಅನಾರೋಗ್ಯಕರ ಪರಿಸರ ನಗರದಲ್ಲಿ ನಿರ್ಮಾಣವಾಗಿದೆ. ಶೌಚಾಲಯಗಳ ಕೊರತೆಯಿಂದ ಬಯಲು ಪ್ರದೇಶದಲ್ಲಿಯೇ ಮಲ, ಮೂತ್ರ ವಿಸರ್ಜನೆ ಜಾರಿಯಲ್ಲಿದ್ದು, ಅದರಿಂದ ದಾರಿಹೋಕರಿಗೆ ಹಾಗೂ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ದೂರಿದರು.
ಜ.20ರಂದು ನಗರಸಭೆ ಎದುರು ಪ್ರತಿಭಟನೆ: ನಗರದ ನಿವಾಸಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆಡಳಿತ ಮಾಡುತ್ತಿಲ್ಲ. ಈ ಕುರಿತು ಅನೇಕ ಬಾರಿ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಜ.20ರಂದು ನಗರಸಭೆ ಎದುರು ಪ್ರತಿಭಟನೆ ಆಯೋಜಿಸಿದ್ದು, ನಗರದ ಹದಗೆಟ್ಟ ರಸ್ತೆಗಳ ದುರಸ್ತಿ, ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರೊದಗಿಸಲು ಗಣೇಕಲ್ ಜಲಾಶಯದಲ್ಲಿ ನೀರಿನ ಸಂಗ್ರಹಕ್ಕೆ ಈಗಿನಿಂದಲೇ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗುತ್ತದೆ ಎಂದರು.
ಶುದ್ಧ ಕುಡಿಯುವ ನೀರೊದಗಿಸುವ ನಿಟ್ಟಿನಲ್ಲಿ ಕೃಷ್ಣಾ ನದಿ ನೀರು ಪೂರೈಕೆ ವ್ಯವಸ್ಥೆಯಲ್ಲಿ ಸೆಟ್ಲಿಂಗ್ ಟ್ಯಾಂಕ್ ನಿರ್ಮಿಸಬೇಕು. ರಾಜಾ ಕಾಲುವೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಿಸಬೇಕು. ಒಳಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಪುನಾರಂಭಿಸಬೇಕು. ವಿವಿಧ ಕಾಲೋನಿಗಳಲ್ಲಿ ಕಸದ ತೊಟ್ಟಿ ಸ್ಥಾಪಿಸಬೇಕು. ಘನತ್ಯಾಜ್ಯ ವಿಲೇವಾರಿಗೆ ಒತ್ತು ನೀಡಬೇಕು. ಬೀದಿ ದೀಪ ಸೇರಿ ಮತ್ತಿತರೆ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಹೋರಾಟದ ಮೂಲಕ ಆಗ್ರಹಿಸುವುದಾಗಿ ತಿಳಿಸಿದರು.
ಡೆಂಘೀ ಬಗ್ಗೆ ಕ್ರಮ ವಹಿಸಿ: ನಗರದಲ್ಲಿ ಉದ್ದೇಶಿತ ಹೈಟೆಕ್ ತರಕಾರಿ ಮಾರುಕಟ್ಟೆಯ ನಿರ್ಮಾಣ ಕಾಮಗಾರಿ ಕೂಡಲೇ ಆರಂಭಿಸಬೇಕು. ನಗರದ ಜನಸಂಖ್ಯೆಯಾಧರಿಸಿ ಮೂತ್ರಾಲಯ ಮತ್ತು ಶೌಚಾಲಯ ನಿರ್ಮಿಸಬೇಕು. ಡೆಂಘೀ ಕಾಯಿಲೆಗೆ ತುತ್ತಾದವರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ರಕ್ತದ ಕಣಗಳ ಪ್ರತ್ಯೇಕಿಸುವ ಘಟಕ ಸ್ಥಾಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುವುದಾಗಿ ತಿಳಿಸಿದರು.
ಸಂಘಟನೆಯ ಪ್ರಮುಖರಾದ ಎನ್. ಮಹಾವೀರ್, ಹುಸೇನಪ್ಪ ಬಸನಗೌಡ, ಡಾ. ಚಂದ್ರಗಿರೀಶ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

