ರಾಯಚೂರು

23ರಿಂದ ಕಾರ್ಮಿಕರ ಅನಿರ್ದಿಷ್ಟ ಮುಷ್ಕರ

Published On :

ರಾಯಚೂರು: ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆಯ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕಳೆದ ಮೂರು ತಿಂಗಳಿನಿಂದ ಹಂಗಾಮಿ ನೌಕರರಿಗೆ ಕೂಲಿ ಪಾವತಿಯಾಗಿಲ್ಲ. ಈ ನಿರ್ಲಕ್ಷ್ಯ ಖಂಡಿಸಿ ಜ.23ರಿಂದ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ತುಂಗಭದ್ರಾ ನೀರಾವರಿ ವಲಯ ಹಂಗಾಮಿ ಕಾರ್ಮಿಕ ಸಂಘ ನಿರ್ಧರಿಸಿದೆ.
ನಗರದಲ್ಲಿ ಶನಿವಾರ ಸಂಘದ ಅಧ್ಯಕ್ಷ ಆರ್. ಮಾನಸಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕಳೆದ ಅಕ್ಟೋಬರರ್ನಿಂದ ನೀರಾವರಿ ಇಲಾಖೆಯ ಹಂಗಾಮಿ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಿಲ್ಲ. ಪ್ರತಿ ಕಾರ್ಮಿಕಗೆ 5100 ರು. ನಂತೆ ಒಟ್ಟು 1130 ಹಂಗಾಮಿ ಕಾರ್ಮಿಕರ ವೇತನ ಪಾವತಿಯಾಗಿಲ್ಲ ಎಂದು ಆರೋಪಿಸಿದರು.
ಆದೇಶ ಉಲ್ಲಂಘನೆ: ತುಂಗಭದ್ರಾ ನೀರಾವರಿ ಯೋಜನೆಯಡಿ 9.5 ಲಕ್ಷ ಎಕರೆ ಪ್ರದೇಶ ನೀರಾವರಿಯಾಗಿದೆ. ಕೃಷಿ ಪ್ರದೇಶಕ್ಕೆ ಸಮರ್ಪಕ ನೀರೊದಗಿಸುವ ಕಾರ್ಯದಲ್ಲಿ ದುಡಿಯುತ್ತಿರುವ ಹಂಗಾಮಿ ಕಾರ್ಮಿಕರಿಗೆ ಇಲಾಖೆಯು ತಾರತಮ್ಯ ಮಾಡುತ್ತಿದೆ. ಕಳೆದ 25 ವರ್ಷಗಳಿಂದ ಸರ್ಕಾರ ಜೀತದಾಳುಗಳಂತೆ ಹಂಗಾಮಿ ನೌಕರರನ್ನು ದುಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಗುತ್ತಿಗೆ ಕಾರ್ಮಿಕ ಪದ್ಧತಿ ನಿಷೇಧ ಹಾಗೂ ನಿಯಂತ್ರಣ ಕಾಯಿದೆ, ಕನಿಷ್ಠ ವೇತನ ಕಾಯಿದೆ, ಸಮಾನ ದುಡಿಮೆಗೆ ಸಮಾನ ವೇತನ ಕಾಯಿದೆ ಸೇರಿ ವಿವಿಧ ಕಾಯಿದೆಗಳನ್ನು ಉಲ್ಲಂಘಿಸಿ ಸರ್ಕಾರ ನೀರಾವರಿ ಇಲಾಖೆಯಲ್ಲಿ ಹಂಗಾಮಿ ಕಾರ್ಮಿಕರ ಸೇವೆ ಪಡೆಯುತ್ತಿದೆ ಎಂದು ಟೀಕಿಸಿದರು.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ನೀರಿನ ನಿರ್ವಹಣೆ ಕಾರ್ಯದಲ್ಲಿ 1818 ಜನ ಸಿಬ್ಬಂದಿಯ ಅವಶ್ಯಕತೆಯಿದ್ದು, ಸದ್ಯ ಕೇವಲ 1130 ಜನ ಈ ಕಾರ್ಯ ಮಾಡುತ್ತಿದ್ದಾರೆ. ಆದರೂ ದಿನಗೂಲಿ ಪಾವತಿಸುವ ಕಾರ್ಯ ಇಲಾಖೆ ಮಾಡಿಲ್ಲ. ಈ ಮೂಲಕ ದಿನಗೂಲಿ ಪಾವತಿ ಮಾಡದ ಕಚೇರಿಗಳನ್ನು ಮುಚ್ಚಿ ಬಿಡಿ ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸರ್ಕಾರವೇ ಉಲ್ಲಂಘಿಸಿದೆ ಎಂದು ಆರೋಪಿಸಿದರು.
ಜ.23ರಂದು ಹೋರಾಟ: ಹಂಗಾಮಿ ಕಾರ್ಮಿಕರಿಗೆ ದಿನಗೂಲಿ ಪಾವತಿಸುವಲ್ಲಿ ವಿಳಂಬ, ವರ್ಷಕ್ಕೆ 240 ದಿನ ಹಾಜರಾತಿ ನೀಡುವ ಮೂಲಕ ಸೇವೆ ಕಾಯಂಗೊಳಿಸುವುದನ್ನು ತಪ್ಪಿಸಿಕೊಳ್ಳಲು ಇಲಾಖೆಯು ಬೇಸಿಗೆಯಲ್ಲಿ ಕಾರ್ಮಿಕರಿಗೆ ಕೆಲಸದಿಂದ ವಜಾಗೊಳಿಸುವ ಪದ್ಧತಿ ವಿರೋಧಿಸಿ ಜ.23ರಂದು ಹೋರಾಟ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈವರೆಗೆ ಅನೇಕ ಬಾರಿ ಸರ್ಕಾರ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮ ಎಚ್ಚರಿಕೆಯನ್ನು ಜ.9ರಂದು ಮನವಿಗಳ ಪಟ್ಟಿಯ ಮೂಲಕ ಸಲ್ಲಿಸಲಾಗಿದೆ. ಕಾರ್ಮಿಕ ಕಾಯಿದೆಯಂತೆ 14 ದಿನಗಳ ನಂತರ ಜ.23ರಂದು ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ವಿವಿಧ ಬೇಡಿಕೆ: ಕಾರ್ಮಿಕರಿಗೆ ಯಾವುದೇ ರೀತಿಯ ಸೌಲಭ್ಯ, ಸೇವಾ ಭದ್ರತೆ, ವೇತನ ಚೀಟಿ, ಹಾಜರಾತಿ ನೀಡಿಕೆಯ ಕಾರ್ಯ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ನಿರ್ಧರಿಸಿದ್ದು, ಹೋರಾಟದಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ನೀರು ನಿರ್ವಹಣೆಗಾರರು, ವಾಹನ ಚಾಲಕರು, ಟೆಲಿಫೋನ್ ನಿರ್ವಹಣೆಗಾರರು, ಕೆಲಸ ನಿರೀಕ್ಷಕರು, ಕಾವಲುಗಾರರು ಸೇರಿ ಎಲ್ಲ ಹಂಗಾಮಿ ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಗಿಲ್ಲೆಸೂಗೂರಿನ ಆರ್ಡಿಎಸ್, ಯರಮರಸ್, ಕಲ್ಲೂರು, ಸಿರವಾರ, ಕವಿತಾಳ, ಮಾನವಿ, ಹಿರೇಕೊಟ್ನೆಕಲ್, ಸಿಂಧನೂರು, ತುರ್ವಿಹಾಳ, ಮಸ್ಕಿ, ವಡ್ಡರಹಟ್ಟಿ, ಬಳ್ಳಾರಿ ವಿಭಾಗ ಹಾಗೂ ಉಪ ವಿಭಾಗದ ಎಲ್ಲ ಹಂಗಾಮಿ ಕಾರ್ಮಿಕರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ ಮುನಿರಾಬಾದ್ನಲ್ಲಿ ಹೋರಾಟ ಆಯೋಜಿಸಲಾಗಿತ್ತು. ಆದರೆ ಈ ಬಾರಿ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಜ.23ರಿಂದ ಅನಿರ್ದಿಷ್ಟ ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು.
ರೈತರ ಬೆಂಬಲ: ಸದ್ಯ ರೈತರು ಬತ್ತದ ನಾಟಿ ಕಾರ್ಯದಲ್ಲಿದ್ದು, ಹಂಗಾಮಿ ಕಾರ್ಮಿಕರ ಹೋರಾಟದಿಂದ ಅವರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ರೈತರಿಗೆ ತೊಂದರೆ ನೀಡುವುದು ಸಂಘದ ಉದ್ದೇಶವಲ್ಲ. ಸರ್ಕಾರಕ್ಕೆ ಬಿಸಿ ಮುಟ್ಟಿಸುವುದು ಹೋರಾಟದ ಆಶಯವಾಗಿದೆ. ರೈತರಿಗಾಗುವ ನಷ್ಟಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು.
ರೈತರಿಗಾಗಿ ಹಗಲಿರುಳು ದುಡಿಯುವ ಹಂಗಾಮಿ ಕಾರ್ಮಿಕರ ಹೋರಾಟಕ್ಕೆ ರೈತರೂ ಬೆಂಬಲ ನೀಡಬೇಕೆಂದು ಮನವಿ ಮಾಡಿದ ಅವರು, ಹಂಗಾಮಿ ಕಾರ್ಮಿಕರು ಹೋರಾಟಕ್ಕೆ ಮುಂದಾಗಲು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.