ರಾಯಚೂರು

ಹೊಸ ನಕ್ಷೆಯಂತೆ ಮಳಿಗೆ ಮಾರ್ಪಾಡಿಗೆ ಆದೇಶ

Published On :

ಕ.ಪ್ರ. ವಾರ್ತೆ  ರಾಯಚೂರು  ಜ.12
ಮಾನವಿ ಎಪಿಎಂಸಿ ಪ್ರದೇಶದಲ್ಲಿ ಅಕ್ರಮ ವಸತಿ ಮತ್ತು ವಾಣಿಜ್ಯ ಮಳಿಗೆಗಳ ನಿರ್ಮಾಣ ಮಾಡಿದ್ದನ್ನು ವಿರೋಧಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ್ದ ಹೋರಾಟಕ್ಕೆ ಯಶಸ್ಸು ದೊರೆತಿದೆ.
ಎಪಿಎಂಸಿ ಆಡಳಿತವು ಅಕ್ರಮ ವಸತಿ ತೆರವುಗೊಳಿಸಿದ್ದು, ಅಕ್ರಮವಾಗಿ ನಿರ್ಮಿಸಿದ್ದ ವಾಣಿಜ್ಯ ಮಳಿಗೆಗಳನ್ನು ಹೊಸದಾಗಿ ತಯಾರಿಸಿದ ನಕ್ಷೆಯಂತೆ ಮಾರ್ಪಾಟು ಮಾಡಿಕೊಳ್ಳಲು ಸೂಚಿಸಿದೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ಪ್ರಭುರಾಜ್ ಕೊಡ್ಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನವಿಯ ಎಪಿಎಂಸಿ ಜಾಗದಲ್ಲಿ ಮೀಸಲಿಟ್ಟ ನಿವೇಶನಗಳಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದನ್ನು ಖಂಡಿಸಿ ಕಳೆದೊಂದು ವರ್ಷದಿಂದ ಸಂಘಟನೆಯು ಹೋರಾಟ ನಡೆಸಿತ್ತು. ಈ ಕುರಿತು ಸಹಾಯಕ ಆಯುಕ್ತರಾಗಿದ್ದ ಮಂಜುಶ್ರೀ ಅವರು ಈ ಅಕ್ರಮದ ತನಿಖೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದರು. ಆ ವರದಿಯಾಧರಿಸಿ ಕ್ರಮಕ್ಕೆ ಸಂಘಟನೆಯಿಂದ ಹೋರಾಟದ ಮೂಲಕ ಒತ್ತಾಯಿಸಲಾಗಿತ್ತು ಎಂದು ಹೇಳಿದರು.
ಹೊಸ ನಕ್ಷೆ, ಮಳಿಗೆ ಮಾರ್ಪಾಡಿಗೆ ಸೂಚನೆ: ಸಹಾಯಕ ಆಯುಕ್ತರ ವರದಿ ಪರಿಶೀಲಿಸಿದ ಎಪಿಎಂಸಿ ರಾಜ್ಯ ಕಾರ್ಯದರ್ಶಿಗಳು, ಮಾನವಿ ಎಪಿಎಂಸಿ ಆಡಳಿತಕ್ಕೆ ಸೂಚನೆ ನೀಡಿ ಅಕ್ರಮ ನಿವೇಶನಗಳು ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಹಾಗೂ ಈಗಾಗಲೇ ನಿರ್ಮಿಸಿಕೊಂಡ ವಾಣಿಜ್ಯ ಬಳಕೆ ಮಳಿಗೆಗಳನ್ನು ಹೊಸದಾಗಿ ನಕ್ಷೆ ತಯಾರಿಸಿ ಅದರಂತೆ ಮಾರ್ಪಾಟು ಮಾಡಿಕೊಂಡು ಬಾಡಿಗೆ ವಸೂಲಿಗೆ ಸೂಚಿಸಿದ್ದಾರೆಂದು ಹೇಳಿದರು.
ಮಾನವಿಯ ಮುಖ್ಯ ಮಾರುಕಟ್ಟೆಯ ಪ್ರಾಂಗಣದಲ್ಲಿ ಬೀದಿದೀಪ ಅಳವಡಿಕೆಗೆ ಒಪ್ಪಿದ್ದು, ಅದೇ ರೀತಿ ಉಪ ಮಾರುಕಟ್ಟೆಗಳಾದ ಕವಿತಾಳ, ಹಾಲಾಪುರ ಪ್ರಾಂಗಣದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಡ ಕಚೇರಿಗಳಿಗೆ ಲೀಸ್ ಮತ್ತು ಬಾಡಿಗೆ ಆಧಾರದಲ್ಲಿ ನೀಡಲು ಸಮಿತಿ ಸೂಚಿಸಿದೆ ಎಂದು ತಿಳಿಸಿದರು. ಅದೇ ರೀತಿ ಮಾನವಿ ಎಪಿಎಂಸಿಯಲ್ಲಿ ಗೋದಾಮು ಇಲ್ಲವೇ ಅಂಗಡಿ ಬದಲಿಗೆ ವಾಣಿಜ್ಯ ಮಳಿಗೆಗಳನ್ನು ಅಕ್ರಮವಾಗಿ ನಿರ್ಮಿಸಿಕೊಂಡವರಿಗೆ ಹೊಸದಾಗಿ ನಕ್ಷೆ ತಯಾರಿಸಿ ನೀಡಿ ಅದರಂತೆ ಕಟ್ಟಡದಲ್ಲಿ ಮಾರ್ಪಾಟು ಮಾಡಿಕೊಳ್ಳುವಂತೆ ಸೂಚಿಸಿ ರಾಜ್ಯ ಕೃಷಿ ಮಾರಾಟ ಮಂಡಳಿಯ ನಿರ್ದೇಶಕರ ಕಚೇರಿ ಆದೇಶಿಸಿದೆ ಎಂದರು.
ಈಗಾಗಲೇ 33 ಕುಟುಂಬಗಳ ತೆರವು: ಎಪಿಎಂಸಿ ಆವರಣದಲ್ಲಿ ಅಕ್ರಮವಾಗಿ ವಾಸವಾಗಿದ್ದ 33 ಕುಟುಂಬಗಳನ್ನು ಈಗಾಗಲೇ ತೆರವುಗೊಳಿಸಿದ್ದು, ಇನ್ನುಳಿದ 10 ಮನೆಗಳಿಗೆ ಬೀಗ ಹಾಕಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರಸ್ವಾಮಿ, ಲಕ್ಷ್ಮಣ ಜಾನೇಕಲ್, ರಾಜಶೇಖರ್, ಖಾನ್ ಸಾಬ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.