ರಾಯಚೂರು

ನಮೋ ಪ್ರಧಾನಿಯಾದ್ರೆ ಭಾರತ ಶಕ್ತಿಶಾಲಿ

Published On :

ಮಸ್ಕಿ: ದೇಶದ ಮುಂದಿನ ಪ್ರಧಾನಿಯಾಗಿ ನರೇಂದ್ರ ಮೋದಿ ಬಹುತೇಕ ಖಚಿತವಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಶಕ್ತಿಶಾಲಿ ಭಾರತ ನಿರ್ಮಾಣ ಮಾಡುವುದರಲ್ಲಿ ಸಂದೇಹವಿಲ್ಲ ಎಂದು ಬಿಜೆಪಿ ಕೊಪ್ಪಳ ಜಿಲ್ಲಾಧ್ಯಕ್ಷ ಸಂಗಣ್ಣ ಕರಡಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಸೋಮನಾಥ ದೇವಸ್ಥಾನದ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿ, ಯುವ ಸಮುದಾಯ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ನಿಂತಿದೆ. ಅವರು ದೇಶದೆಡೆಗೆ ಬದ್ಧತೆ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆ ಪಕ್ಷದ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂದು ಮನವಿ ಮಾಡಿದರು.
ಚುನಾವಣೆಗೆ ಹುಮ್ಮಸ್ಸಿನಿಂದ ಸಜ್ಜಾಗಿ: ಕೊಪ್ಪಳ ಸಂಸದ ಶಿವರಾಮೇಗೌಡ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ರಾಜ್ಯದಲ್ಲಿ ಬಿಜೆಪಿಗೆ ಬಲ ಹೆಚ್ಚಿದೆ. ಬಿಜೆಪಿಯಲ್ಲಿ ಒಡಕುಂಟಾಗಿದ್ದರಿಂದ ಅದರ ಲಾಭವನ್ನು ಕಾಂಗ್ರೆಸ್ ಪಡೆದಿತ್ತು. ಆದರೆ ಈಗ ಬಿಜೆಪಿ ತುಂಬಿದ ಮನೆಯಾಗಿದ್ದು ಕಾರ್ಯಕರ್ತರು ಹುಮ್ಮಸ್ಸಿನಿಂದ ಲೋಕಸಭಾ ಚುನಾವಣೆಗೆ ಸಜ್ಜಾಗುವಂತೆ ಮನವಿ ಮಾಡಿದರು.
ಕೇಂದ್ರದಲ್ಲಿನ ಯುಪಿಎ ಸರ್ಕಾರದ ವೈಫಲ್ಯ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ತಲುಪಿಸಿ ಬಿಜೆಪಿಯತ್ತ ಒಲವು ಮೂಡಿಸುವ ಕಾರ್ಯ ಮಾಡಲು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಗ್ರಾಮೀಣರಿಗೆ ಮನವರಿಕೆ ಮಾಡಿ: ಜ.15ರಿಂದ ಬಿಜೆಪಿ ಪಕ್ಷವು ಮನೆ ಮನೆಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಬೇಕು. ಬಿಜೆಪಿ ಸರ್ಕಾರದಿಂದ ಕೈಗೊಂಡ ಜನಪರ ಯೋಜನೆಗಳನ್ನು ಹಾಗೂ ಈಗಿನ ಸಿಎಂ ಜಾರಿಗೆ ತಂದಿರುವ ಜನವಿರೋಧಿ ನೀತಿಗಳ ಬಗ್ಗೆ ಗ್ರಾಮೀಣರಿಗೆ ಮನದಟ್ಟು ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಕೊಪ್ಪಳ ಜಿಲ್ಲಾ ಬಿಜೆಪಿ ಪ್ರಭಾರಿ ಗಿರೇಗೌಡ, ಮಸ್ಕಿ ಬಿಜೆಪಿ ಅಧ್ಯಕ್ಷ ಸಂಗಮೇಶ ಹತ್ತಿಗುಡ್ಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಚಿತಾಪೂರು ಮಾತನಾಡಿದರು. ಕೊಪ್ಪಳ ಬಿಜೆಪಿ ಜಿಲ್ಲಾ ಸಂಚಾಲಕ ತಿಪ್ಪೇರುದ್ರಸ್ವಾಮಿ, ಜಿಪಂ ಸದಸ್ಯ ವಿಶ್ವನಾಥ ಪಾಟೀಲ್, ಅಮರೇಗೌಡ ವಿರುಪಾಪುರ, ಶಂಕರಕುಮಾರ ಮೇದಾರ, ಶಿವಬಸಪ್ಪ ನಾಯಕ, ಶರಣಪ್ಪ ವಕೀಲ, ಹನುಮೇಶ, ಗುರುಭೀಮರಾವ್ ಕುಲ್ಕರ್ಣಿ, ಮಸ್ಕಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಪದ್ಮಾವತಿ ಬಳಗಾನೂರು, ಬಾಲಪ್ಪ ತುರವಿಹಾಳ, ಝಹೀರುದ್ದೀನ್ ಸಾಬ್ ತುರವಿಹಾಳ್ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.