ರಾಂಪುರ ಕೆರೆಗೆ ನೀರಿನ ಕೃತಕ ಅಭಾವ
ಕ.ಪ್ರ. ವಾರ್ತೆ ರಾಯಚೂರು ಜ.15
ನಗರದ ಜನತೆಯ ಕುಡಿಯುವ ನೀರಿನ ಬೇಡಿಕೆ ಪೂರೈಸುವ ರಾಂಪುರ ಕೆರೆಯಲ್ಲಿ ಈಗ ನೀರಿನ ಸಂಗ್ರಹ ಕುಸಿತ. ಅತ್ತ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿಯೂ ನೀರಿನ ಕೃತಕ ಅಭಾವ. ಕೆರೆ ತುಂಬಿಸಿಕೊಳ್ಳಲೂ ನೀರಿನ ಕೊರತೆ ಕಾಡುವ ಸಾಧ್ಯತೆ. ಜಿಲ್ಲಾಡಳಿತ ಗಮನಹರಿಸದಿದ್ದರೆ ನಗರದ ಜನತೆಗೆ ನೀರಿನ ಅಭಾವ ನಿಶ್ಚಿತ.
ನಗರದ ಅನೇಕ ವಾರ್ಡುಗಳಿಗೆ ಕುಡಿಯುವ ನೀರನ್ನು ಪೂರೈಸುವ ರಾಂಪುರ ಕೆರೆಯಲ್ಲಿ ಈಗ ನೀರಿನ ಸಂಗ್ರಹ ತಳಕಚ್ಚುತ್ತಿರುವುದೇ ಇಂಥ ಆತಂಕಕ್ಕೆ ಕಾರಣ.
ನಗರದ ಎಂಟಕ್ಕೂ ಹೆಚ್ಚು ವಾರ್ಡುಗಳಿಗೆ ರಾಂಪುರ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತದೆ. ತುಂಗಭದ್ರಾ ಎಡದಂಡೆಯಿಂದ ರಾಂಪುರ ಕೆರೆಯಲ್ಲಿ ನೀರು ಅಗತ್ಯ ಬಿದ್ದಾಗಲೆಲ್ಲ ಸಂಗ್ರಹಿಸುವ ಮೂಲಕ ನಗರದ ಜನತೆಗೆ ನಂತರ ಪೂರೈಸಲಾಗುತ್ತದೆ.
ಆದರೆ ಈಗಾಗಲೇ ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್ ಕೆಳಭಾಗದಲ್ಲಿ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ನೀರಿಲ್ಲದಂಥ ಸ್ಥಿತಿಯಿದ್ದು, ರೈತರು ಈಗಾಗಲೇ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಗರದ ರಾಂಪುರ ಕೆರೆಗೆ ನೀರು ದೊರೆಯುವುದು ಸದ್ಯದ ಪರಿಸ್ಥಿತಿಯಲ್ಲಿ ಅನುಮಾನ ಎಂಬಂತಾಗಿದೆ.
ಗಣೇಕಲ್ನಲ್ಲೂ ನೀರಿಲ್ಲ: ಗಣೇಕಲ್ ಜಲಾಶಯದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಅನುಕೂಲವಾಗುವಂತೆ ನೀರು ತುಂಬಿಸಿಟ್ಟುಕೊಳ್ಳಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಗಣೇಕಲ್ ಜಲಾಶಯದಿಂದ ಕಾಲುವೆಯ ಕಡೆಯ ಭಾಗದ ರೈತರು ಮತ್ತು ನಗರದ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗಿದೆ.
ಅದರಿಂದಾಗಿ ಗಣೇಕಲ್ನಲ್ಲಿ ಸದ್ಯ ಕೇವಲ 10 ಅಡಿ ನೀರಿದೆ. ಈ ನೀರು ರಾಂಪುರ ಕೆರೆ ತಲುಪುವುದು ಅನುಮಾನ ಎಂಬಂಥ ಸ್ಥಿತಿಯಿದೆ. ಅಷ್ಟೇ ಅಲ್ಲ ಗಣೇಕಲ್ ಜಲಾಶಯ ಭರ್ತಿಗೆ ಎಡದಂಡೆ ಕಾಲುವೆಯಲ್ಲಿಯೂ ನೀರಿನ ಕೃತಕ ಅಭಾವ ಈಗಾಗಲೇ ಹೆಚ್ಚಳವಾಗಿದೆ.
ಕಾಲುವೆಯ ಮೇಲ್ಭಾಗದಲ್ಲಿನ ರೈತರು ಅನಗತ್ಯವಾಗಿ ಕಾಲುವೆಯಿಂದ ನೀರು ಪಡೆದು ಹಳ್ಳಗಳ ಮೂಲಕ ನದಿ ಸೇರಲು ಕಾರಣರಾಗಿದ್ದಾರೆಂಬ ಆರೋಪವಿದೆ. ಹಾಗಾಗಿ ಕಾಲುವೆಯ ಕಡೆಯ ಭಾಗದಲ್ಲಿರುವ ಗಣೇಕಲ್ ಜಲಾಶಯದಲ್ಲಿ ನೀರಿನ ಸಂಗ್ರಹ ತಳಕಚ್ಚಿದ್ದರೂ ಪುನಃ ಭರ್ತಿ ಮಾಡಿಕೊಳ್ಳಲು ಜಿಲ್ಲಾಡಳಿತದ ಮಧ್ಯ ಪ್ರವೇಶ ಅನಿವಾರ್ಯ ಎಂಬಂತಾಗಿದೆ.
ಸದ್ಯ ರಾಂಪುರ ಕೆರೆಯಲ್ಲಿ 2 ಮೀಟರ್ಗಿಂತ ಕಡಿಮೆ ನೀರಿನ ಸಂಗ್ರಹವಿದೆ. ಈ ನೀರು ಮುಂದಿನ 15 ದಿನಗಳವರೆಗೆ ಸಾಕಾಗುತ್ತದೆ ಎಂದು ನಗರಸಭೆಯ ಮೂಲಗಳು ಹೇಳಿವೆ. ರಾಂಪುರ ಬರಿದಾಗುವ ಮೊದಲೇ ಗಣೇಕಲ್ನಲ್ಲಿ ನೀರಿನ ಸಂಗ್ರಹ ಹೆಚ್ಚಿಸಿಕೊಳ್ಳುವ ಕಾರ್ಯ ಜಿಲ್ಲಾಡಳಿತದಿಂದಾಗಬೇಕಿದೆ.
ಈಗಾಗಲೇ ನಗರಸಭೆಗೆ ಜಲಸಂಪನ್ಮೂಲ ಇಲಾಖೆಯು ಗಣೇಕಲ್ ಜಲಾಶಯಕ್ಕೆ ನೀರು ಹರಿಸುವ ಭರವಸೆ ನೀಡಿದೆ. ಹಾಗೆಯೇ ರಾಂಪುರ ಕೆರೆಗೂ ಒದಗಿಸುವ ಮಾತುಕೊಟ್ಟಿದೆ. ಆದರೆ ವಾಸ್ತವದಲ್ಲಿ ನೀರು ಹರಿಸಿಕೊಳ್ಳುವುದು ಸದ್ಯಕ್ಕೆ ಕಷ್ಟದ ಕೆಲಸವೇ ಸರಿ.
ಗಣೇಕಲ್ನಿಂದ ರಾಂಪುರ ಕೆರೆಗೆ ನೀರು ಹರಿಸಲು ಸದ್ಯ ಗಣೇಕಲ್ ಜಲಾಶಯದಲ್ಲಿ ಕೇವಲ 10 ಅಡಿ ಸಂಗ್ರಹವಿದೆ. ಆ ನೀರು ಹರಿಸಿದರೂ ಕಾಲುವೆಯುದ್ದಕ್ಕೂ ಪೊಲೀಸ್ ಕಾವಲು ಹಾಕಿ ಆ ನೀರನ್ನು ರೈತರು ಬಳಸದಂತೆ ತಡೆಯಬೇಕಾಗುತ್ತದೆ. ಹಾಗೆಯೇ ಎಡದಂಡೆಯಿಂದ ಗಣೇಕಲ್ ಭರ್ತಿ ಮಾಡಲೂ ಈಗ ಕಾಲುವೆಯ ಮೇಲೆ ನಿಷೇಧಾಜ್ಞೆ ವಿಧಿಸಿ ಪೊಲೀಸ್ ಕಾವಲಿನಲ್ಲಿ ನೀರು ಹರಿಸಿಕೊಳ್ಳುವಂಥ ಸ್ಥಿತಿಯಿದೆ.
ಮುಷ್ಕರ: ಈ ಮಧ್ಯೆ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನೀರಿನ ನಿರ್ವಹಣೆ ಮತ್ತಿತರೆ ಕೆಲಸ ಕಾರ್ಯ ನಿರ್ವಹಿಸುತ್ತಿದ್ದ ಹಂಗಾಮಿ ನೌಕರರು ವೇತನ ನೀಡದ್ದರಿಂದ ಮುಷ್ಕರ ನಡೆಸುವುದಾಗಿ ಎಚ್ಚರಿಸಿದ್ದು, ಕಾಲುವೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವ ಹೊಣೆ ಅಧಿಕಾರಿಗಳ ಹೆಗಲೇರಲಿದೆ. ಅಲ್ಲಿಗೆ ಗಣೇಕಲ್ ಜಲಾಶಯಕ್ಕೆ ನೀರು ತಂದು ತುಂಬಿಸುವ ಕಾರ್ಯ ಮತ್ತಷ್ಟು ಕಠಿಣವಾಗಲಿದೆ.
ಸದ್ಯ ಎಡದಂಡೆ ಕಾಲುವೆಯ 104ನೇ ಮೈಲ್ನಲ್ಲಿ ಬುಧವಾರ 2 ಅಡಿ ನೀರು ಹರಿಯುತ್ತಿದ್ದರೆ, ಗಣೇಕಲ್ನಲ್ಲಿ 10 ಅಡಿಗೆ ನೀರು ಕುಸಿದಿದೆ.
ಹೋರಾಟ: ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿರುವ 104ನೇ ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿಯ ಮುಖಂಡ ಸಿದ್ದನಗೌಡ, ಎಡದಂಡೆ ಕಾಲುವೆಯ ಕಡೆಯ ಭಾಗದಲ್ಲಿ ರೈತರಿಗೆ ಬೆಳೆಗೆ ಮತ್ತು ಕುಡಿಯುವ ನೀರಿಲ್ಲದಂಥ ಸ್ಥಿತಿಯಿದೆ. ಇನ್ನು ರಾಯಚೂರು ನಗರಕ್ಕೆ ನೀರು ದೊರೆಯುವುದು ಕಷ್ಟ. ಗಣೇಕಲ್ ಜಲಾಶಯ ಭರ್ತಿ ಮಾಡಿಕೊಳ್ಳದಿದ್ದರೆ ಬೇಸಿಗೆಯಲ್ಲಿ ನೀರಿನ ಅಭಾವ ನಿಶ್ಚಿತ ಎಂದಿದ್ದಾರೆ.
ನಗರಸಭೆ ಆಡಳಿತ ಈಗಿನಿಂದಲೇ ರಾಂಪುರ ಕೆರೆ ಭರ್ತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಿದೆ. ಜಿಲ್ಲಾಡಳಿತ ಇತ್ತ ಗಮನಹರಿಸಿ ಮುಂದಾಗುವ ಅಭಾವ ತಪ್ಪಿಸಲು ಕಾರ್ಯಪ್ರವೃತ್ತವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

