ಲೋಹ, ಮಣ್ಣು ಸಂಗ್ರಹ ಅಭಿಯಾನಕ್ಕೆ ಚಾಲನೆ
ಕ.ಪ್ರ. ವಾರ್ತೆ ರಾಯಚೂರು ಜ.18
ಗುಜರಾತ್ ಸಿಎಂ ನರೇಂದ್ರ ಮೋದಿ ಅವರು ನರ್ಮದಾ ನದಿ ತೀರದಲ್ಲಿ ಸರ್ದಾರ್ ಪಟೇಲರ ಪುತ್ಥಳಿಯ ಸ್ಥಾಪನೆಗೆ ಮುಂದಾಗಿರುವುದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಬದಲಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದು ಮಡಿದವರೆಡೆಗಿನ ಭಾವನಾತ್ಮಕ ಸಂಬಂಧವೇ ಕಾರಣ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಶಂಕ್ರಪ್ಪ ಹೇಳಿದರು.
ಅವರು ನಗರದಲ್ಲಿ ಶನಿವಾರ ಎಪಿಎಂಸಿ ಸಭಾಂಗಣದಲ್ಲಿ ಲೋಹ ಸಂಗ್ರಹ ಸಹಕಾರ ಸಮಿತಿಯಿಂದ ಆಯೋಜಿಸಿದ್ದ ಸರ್ದಾರ ಪಟೇಲರ ಪುತ್ಥಳಿ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಲೋಹ ಮತ್ತು ಮಣ್ಣು ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗೌರವ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಎಲ್ಲರೂ ಪಕ್ಷಾತೀತವಾಗಿ ಕೈಜೋಡಿಸಬೇಕಿದೆ. ಪುತ್ಥಳಿ ನಿರ್ಮಾಣ ಬಿಜೆಪಿ ಕಾರ್ಯಕ್ರಮವಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಹೋರಾಡಿದ ಸರ್ದಾರ ಪಟೇಲರಂಥವರಿಗೆ ದೇಶದ ಜನತೆ ನೀಡುವ ಕೊಡುಗೆ ಇದಾಗಲಿದೆ ಎಂದು ಹೇಳಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಆರ್. ತಿಮ್ಮಯ್ಯ ಮಾತನಾಡಿ, ದೇಶಕ್ಕೆ 1947ರಲ್ಲಿಯೇ ಸ್ವಾತಂತ್ರ್ಯ ದೊರೆತರೂ ಹೈ.ಕ. ಭಾಗಕ್ಕೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ದಕ್ಕಿತು. ಹೈ.ಕ. ಭಾಗವನ್ನು ನಿಜಾಮರ ಕಪಿಮುಷ್ಟಿಯಿಂದ ಬಿಡಿಸಿಕೊಂಡು ಸ್ವತಂತ್ರಗೊಳಿಸುವಲ್ಲಿ ಸರ್ದಾರ ಪಟೇಲರು ಪ್ರಮುಖ ಪಾತ್ರ ವಹಿಸಿದ್ದು, ಅಂಥವರಿಗೆ ಹೈ.ಕ. ಭಾಗದ ಜನತೆ ಎಂದಿಗೂ ಚಿರಋಣಿಯಾಗಿರಬೇಕು ಎಂದು ಹೇಳಿದರು.
ದೇಶ ಸುಭದ್ರ: ಮುಖ್ಯ ಅತಿಥಿ ನಿವೃತ್ತ ಡಿಡಿಪಿಐ ಶೇಷಗಿರಿರಾವ್ ಕುಲಕರ್ಣಿ ಮಾತನಾಡಿ, ಸರ್ದಾರ ಪಟೇಲರು ದೇಶಕ್ಕೆ ಸ್ವಾತಂತ್ರ ತಂದುಕೊಡುವ ನಿಟ್ಟಿನಲ್ಲಿ ನಡೆಸಿದ ಉಗ್ರ ಹೋರಾಟಗಳಿಂದಾಗಿಯೇ ಪ್ರಧಾನಿಯಾಗುವುದು ಕೈ ತಪ್ಪಿತು. ಆದರೆ ಗೃಹಮಂತ್ರಿಯಾಗಿ ಅವರು ದೇಶವನ್ನು ಸುಭದ್ರವಾಗಿ ಕಟ್ಟುವ ಕಾರ್ಯ ಮಾಡಿದರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ದಿನಮಾನದಲ್ಲಿ ದೇಶದೆಲ್ಲೆಡೆ ಸ್ವಾತಂತ್ರ್ಯಕ್ಕಾಗಿ ದುಡಿದ ಅನೇಕರನ್ನು ನಾವೆಲ್ಲ ಮರೆತಿದ್ದೇವೆ. ಗಾಂಧಿ ಜಯಂತಿ ಆಚರಣೆಗೆ ನೀಡುವಂಥ ಮಹತ್ವ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿಗೆ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಸರ್ದಾರ ಪಟೇಲ್ ಅವರಂಥವರೂ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅಂಥವರ ಪುತ್ಥಳಿ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಸಾಕಾರ: ಸಮಾರಂಭದಲ್ಲಿ ಲೋಹ ಸಂಗ್ರಹ ಸಹಕಾರ ಸಮಿತಿ ಜಿಲ್ಲಾ ಸಂಚಾಲಕ ಗಿರೀಶ್ ಕನಕವೀಡು ಮಾತನಾಡಿ, ಗುಜರಾತ್ ನ ನರ್ಮದಾ ತೀರದಲ್ಲಿ 580 ಅಡಿ ಎತ್ತರದ ಸರ್ದಾರ್ ಪಟೇಲರ ಭವ್ಯ ಪುತ್ಥಳಿ ನಿರ್ಮಿಸಲು ಗುಜರಾತ್ ಸಿಎಂ ನರೇಂದ್ರ ಮೋದಿ ನಿರ್ಧಾರ ಮಾಡಿದ್ದಾರೆ. ಅವರ ನಿರ್ಧಾರ ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕೆಂದರು.
ದೇಶದ ಎಲ್ಲ ಪ್ರಜೆಗಳು ಈ ಪುತ್ಥಳಿ ನಿರ್ಮಾಣದಲ್ಲಿ ಬೆಂಬಲಿಸಬೇಕೆಂಬುದು ಮೋದಿ ಅವರ ಆಶಯ. ಈ ಹಿನ್ನೆಲೆಯಲ್ಲಿ ಎಲ್ಲೆಡೆಯಿಂದ ಲೋಹ ಮತ್ತು ಮಣ್ಣು ಸಂಗ್ರಹಿಸಿ ಪುತ್ಥಳಿಗೆ ಬಳಕೆ ಮಾಡಲು ಅವರು ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲು ಗ್ರಾಪಂ ಮಟ್ಟದಿಂದ ತಾಲೂಕು ಮಟ್ಟಕ್ಕೆ ಆನಂತರ ಅಲ್ಲಿಂದ ಜಿಲ್ಲಾ ಮಟ್ಟದಲ್ಲಿ ಲೋಹ ಸಂಗ್ರಹಿಸಿ ನಂತರ ಗುಜರಾತ್ನಿಂದ ಆಗಮಿಸುವ ವಾಹನದಲ್ಲಿ ಕಳಿಸಿಕೊಡಲಾಗುತ್ತದೆ ಎಂದು ಹೇಳಿದರು. ಲೋಹ ಮತ್ತು ಮಣ್ಣು ಸಂಗ್ರಹಣೆ ಅಭಿಯಾನವನ್ನು ಶಾಂತಾಶ್ರಮದ ನಿಜಾನಂದ ಸ್ವಾಮಿ ಉದ್ಘಾಟಿಸಿದರು. ಸಮಾರಂಭದಲ್ಲಿ ಸಮಿತಿ ಪ್ರಮುಖರಾದ ಶಿವನಗೌಡ ಗೊರೇಬಾಳ್, ಶರಣೇಗೌಡ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

